ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ವಿಭಾಗದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಮಲವಂತಿಗೆ ಗ್ರಾಮದ ಬಂಗಾರಪಲಿಕೆ ಪರಿಸರದಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಸಾಕಷ್ಟು ಅರಣ್ಯ ಪ್ರದೇಶ ಸುಟ್ಟು ಹೋಗಿದೆ.
ಬಂಗಾರಪಲಿಕೆ ಸುತ್ತಮುತ್ತಲಿನ ಕಲ್ಲು ಮತ್ತು ತಡೆಗೋಡೆ ಪ್ರದೇಶದ ಹುಲ್ಲುಗಾವಲಿನಲ್ಲಿ ಮೊದಲಿಗೆ ಬೆಂಕಿ ಹೊತ್ತಿಕೊಂಡಿದ್ದು, ಹಲವಾರು ಕಿ.ಮೀ. ದೂರದ ವರೆಗೆ ವ್ಯಾಪ್ತಿಸಿದೆ. ಬಂಗಾರಪಲಿಕೆ ಸಮೀಪದಲ್ಲಿ ಅಗ್ನಿಶಾಮಕ ಘಟಕ ಇಲ್ಲದ ಕಾರಣ, 70 ಕಿ.ಮೀ ದೂರದ ಮೂಡುಬಿದಿರೆಯಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಆದರೆ, ಅವುಗಳ ಬರುವ ವೇಳೆಗೆ ಬೆಂಕಿ ಅರಣ್ಯ ಪ್ರದೇಶದಲ್ಲಿ ವ್ಯಾಪ್ತಿಸಿಕೊಂಡಿದೆ. ನೇತ್ರಾವತಿ ಪೀಕ್ ಕೆಳಭಾಗದಲ್ಲಿ ಸಾವಿರಾರು ಎಕರೆ ಪ್ರದೇಶವು ಸುಟ್ಟು ಹೋಗಿದೆ.
ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್‌ಎಫ್‌ಒ ಶರ್ಮಿಷ್ಠಾ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದ್ದಾರೆ. ಹೆಚ್ಚಿನ ಅಪಾಯದ ಆತಂಕವಿಲ್ಲ ಎಂದು ಹೇಳಿದ್ದಾರೆ.