ನಾಪತ್ತೆಯಾಗಿದ್ದ 33 ವರ್ಷದ KFDC ವಿಭಾಗದ ಫಾರೆಸ್ಟ್ ಗಾರ್ಡ್ ಶರತ್ ಅವರ ಶವ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ನೀಲಗಿರಿ ಪ್ಲಾಂಟೇಶನ್ ನಲ್ಲಿ ಶರತ್ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ನೀಲಗಿರಿ ಪ್ಲಾಂಟೇಶನ್ ನಿಂದ 5 ಕಿಮೀ ದೂರದಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಶವ ಪತ್ತೆಯಾಗಿದೆ. ಶರತ್ ಮೂಲತಃ ಕೊಡಗು ಜಿಲ್ಲೆಯ ಕಾಲೂರು ನಿವಾಸಿಯಾಗಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ KFDC ವಿಭಾಗದಿಂದ ಸಖರಾಯಪಟ್ಟಣ ಅರಣ್ಯ ಇಲಾಖೆಯ KFDC ವಿಭಾಗಕ್ಕೆ ವರ್ಗಾವಣೆಯಾಗಿದ್ದರು. ಸಖರಾಯಪಟ್ಟಣ ನೀಲಗಿರಿ ಪ್ಲಾಂಟೇಶನ್ ನಲ್ಲಿ ನರ್ಸರಿ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ಇದೀಗ ಅವರ ಅನುಮಾನಾಸ್ಪದ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ನೀಲಗಿರಿ ಪ್ಲಾಂಟೇಶನ್ ನಲ್ಲಿ ಜೂನ್ 24 ರಂದು ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಶರತ್ ನಿಗೂಢವಾಗಿ ನಾಪತ್ತೆಯಾಗಿದ್ದರು. ಶರತ್ ಗಾಗಿ ನೂರಾರು ಅರಣ್ಯ ಇಲಾಖೆಯ ಸಿಬ್ಬಂದಿ, ಪೊಲೀಸರು ನೀಲಗಿರಿ ಪ್ಲಾಂಟೇಶನ್, ಅರಣ್ಯದಲ್ಲಿ ಹುಡುಕಾಟ ನಡೆಸಿದ್ದರು. ಹುಡುಕಾಟದ ವೇಳೆ ಶರತ್ ಬೈಕ್ ಒಂದು ಕಡೆ ಸಿಕ್ಕಿದ್ರೆ ಬಟ್ಟೆ ಪರ್ಸ್ ಒಂದೊಂದು ದಿಕ್ಕಿನಲ್ಲಿ ಪತ್ತೆಯಾಗಿತ್ತು. ಮೊಬೈಲ್ ಶರತ್ ಶವ ಸಿಕ್ಕ ಸ್ಥಳದಿಂದ 20 ಕಿಮೀ ದೂರದಲ್ಲಿ ಪತ್ತೆಯಾಗಿತ್ತು. ಇಂದು ಚಿಕ್ಕಮಗಳೂರು ಹಾಸನ ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿಗಳು, ಪೊಲೀಸರು ಅರಣ್ಯದಲ್ಲಿ ಹುಡುಕಾಟ ನಡೆಸುವಾಗ ಶರತ್ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು | ಹಣ ಕೊಟ್ಟವರಿಗೆ ಮಾತ್ರ ಆದ್ಯತೆ; ಬಡವರ ಗೋಳಿಗೆ ಕಿವಿಗೊಡದ ತಾಲೂಕು ಆಡಳಿತ