ಯುವ ವಕೀಲ ಹೆಲ್ಮೆಟ್ ಧರಿಸದ ಕಾರಣ ಪೊಲೀಸರು ಹಲ್ಲೆ ನಡೆಸಿದ್ದನ್ನು ಖಂಡಿಸಿ, ಚಿಕ್ಕಮಗಳೂರು ನಗರ ಠಾಣೆಯಲ್ಲಿ ವಕೀಲರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ವಕೀಲರ ವಿರುದ್ಧ ನಾಲ್ಕು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ಚಿಕ್ಕಮಗಳೂರಿನಲ್ಲಿ ಹೆಲ್ಮೆಟ್ ಧರಿಸದ ಕಾರಣಕ್ಕೆ ಪೊಲೀಸರು ವಕೀಲರೊಬ್ಬರನ್ನು ಥಳಿಸಿದ್ದರು. ಈ ಕ್ರಮ ಖಂಡಿಸಿ ವಕೀಲರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಹೈಕೋರ್ಟ್ ಕಲಾಪ ಬಹಿಷ್ಕಾರಕ್ಕೂ ಮುಂದಾಗಿದ್ದರು.
ಹೈಕೋರ್ಟ್ ಸಿಜೆ, ವಕೀಲರನ್ನು ಮನವೊಲಿಸಿದ್ದು, ಕಲಾಪ ಬಹಿಷ್ಕರಿಸುವುದು ಸರಿಯಲ್ಲ ಎಂಬುದಾಗಿ ಹೇಳುವ ಮೂಲಕ, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ಸೂಚಿಸಿತ್ತು. ಈ ಹಿನ್ನಲೆಯಲ್ಲಿ 6 ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿ, ಆ ಬಳಿಕ ಅವರನ್ನು ಅಮಾನತು ಕೂಡ ಮಾಡಿದ್ದರು.
ಪೊಲೀಸರನ್ನು ಅಮಾನತುಗೊಳಿಸಿದ ಕ್ರಮ ಖಂಡಿಸಿ ರಾತ್ರೋ ರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಹನುಮಂತಪ್ಪ ಸರ್ಕಲ್ನಲ್ಲಿ ಪೊಲೀಸರು ಮತ್ತು ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಿಸಿದ್ದು, ಹಲ್ಲೆ ನಡೆಸಿದವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದರು. ಈ ಪ್ರತಿಭಟನಾಕಾರರನ್ನು ಮನವೊಲಿಸಿದ ಎಸ್‌ಪಿ, ಅವರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಹೀಗಾಗಿ ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದರು.
ಇದೀಗ ಚಿಕ್ಕಮಗಳೂರು ಜಿಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷ ಸುಧಾಕರ್, ವಕೀಲ ಪ್ರೀತಮ್ ಸೇರಿದಂತೆ 15 ಮಂದಿ ವಕೀಲರ ವಿರುದ್ಧ ಸೆಕ್ಷನ್ 503, 406, 353, 149 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಾಲ್ಕು ರಾಜ್ಯಗಳಲ್ಲಿ ಫಲಿತಾಂಶ – ಬಿಜೆಪಿ ಮುನ್ನಡೆ: ವಿಪಕ್ಷ ನಾಯಕ ಆರ್ ಅಶೋಕ್
ಈ ಪ್ರತಿಭಟನೆಯಲ್ಲಿ ಪೋಲಿಸ್ ಸಂಘ ಸ್ಥಾಪನೆಯ ಕೂಗು ಕೇಳಿಬಂದಿದೆ. ಪೊಲೀಸ್ ಸಿಬ್ಬಂದಿಗಳು ನಮಗೂ ಸಂಘ ಬೇಕು ಎಂದು ಚರ್ಚೆ ನಡೆಸಿದರು. ಪೋಲಿಸ್ ಸಂಘ ಸ್ಥಾಪನೆಗೆ ಈ ಹಿಂದೆ ಹಿರಿಯ ಅಧಿಕಾರಿಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಡಿಸೆಂಬರ್ 02ರ ರಾತ್ರಿ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಸಂಘ ಸ್ಥಾಪನೆಗೆ ಸಿದ್ದತೆ ನಡೆದಿದ್ದು, ಸಂಘವನ್ನು ರಿಜಿಸ್ಟರ್ ಮಾಡಿಸುವ ಬಗ್ಗೆ ಚರ್ಚೆ ನಡೆದಿದೆ. ಸೋಮವಾರ ರಿಜಿಸ್ಟರ್ ಮಾಡಿಸುವ ಸಾಧ್ಯತೆಯೂ ಇದೆ.