ಚಲಿಸುತ್ತಿರುವ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಪ್ರಜ್ಞಾಹೀನರಾಗಿ ಅಸ್ವಸ್ಥಗೊಂಡ ಬಳಿಕ ಬಸ್ಸನ್ನೇ ಚಾಲಕ ಆಸ್ಪತ್ರೆಗೆ ಸಾಗಿಸುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ.
ಗುರುವಾರ ಮೂಕಾಂಬಿಕ ಹೆಸರಿನ ಖಾಸಗಿ ಬಸ್ಸು ಬುಕ್ಕಡಿಬೈಲಿನಿಂದ ತ್ಯಾವಣ ಮಾರ್ಗವಾಗಿ ಶೃಂಗೇರಿಗೆ ಸಂಚರಿಸುತ್ತಿತ್ತು. ಈ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಜ್ಞಾನತಪ್ಪಿ ಬಸ್ಸಿನಲ್ಲಿ ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ. ತಕ್ಷಣ ಬಸ್ಸನ್ನು ನಿಲ್ಲಿಸಿ ಆ್ಯಂಬುಲೆನ್ಸ್‌ಗೆ ಕರೆ ಮಾಡಲು ಪ್ರಯತ್ನಿಸಿದರಾದರೂ, ನೆಟ್ಟರ್ಕ್ ಸಿಗದ ಕಾರಣ ಕರೆ ಹೋಗಿಲ್ಲ. ಈ ವೇಳೆ ಸಮಯ ವ್ಯರ್ಥ ಮಾಡದ ಬಸ್ಸಿನ ಚಾಲಕರಾದ ಸುರೇಶ್ ಹಾಗೂ ನಿರ್ವಾಹಕ ಶಾಕಿರ್ ಅವರು ಸಮೀಪವಿರುವ ಶೃಂಗೇರಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆ ಮೂಲಕ ಪ್ರಯಾಣಿಕನ ಜೀವ ಉಳಿಸಿದ್ದಾರೆ.
“ದುರ್ಗಾ ದೇವಸ್ಥಾನದಿಂದ ತ್ಯಾವಣ ಕಡೆ ಹೋಗುವಾಗ ವ್ಯಕ್ತಿ ಮತ್ತಷ್ಟು ಅಸ್ವಸ್ಥರಾದಾಗ ತಕ್ಷಣ ಗಡಿಕಲ್ ಮಾರ್ಗವಾಗಿ ಶೃಂಗೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗೆ ಕೊಡಿಸಲಾಯಿತು” ಎಂದು ಪ್ರಯಾಣಿಕರೊಬ್ಬರು ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.
ತುರ್ತು ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಪ್ರಾಣ ಉಳಿಸಿದ ಚಾಲಕ ಹಾಗು ನಿರ್ವಾಹಕರಿಬ್ಬರನ್ನೂ ಪ್ರಯಾಣಿಕರು ಶ್ಲಾಘಿಸಿದ್ದಾರೆ. ತುರ್ತು ಸಂದರ್ಭದಲ್ಲಿ ತಮ್ಮ ಕರ್ತವ್ಯವನ್ನೂ ಮರೆತು ಓರ್ವ ವ್ಯಕ್ತಿಯ ಜೀವ ಉಳಿಸಿರುವುದು ಎಲ್ಲರಿಗೂ ಮಾದರಿ ಎಂದು ಸಾರ್ವಜನಿಕರು ಕೊಂಡಾಡಿದ್ದಾರೆ.
ಇದನ್ನು ಓದಿದ್ದೀರಾ? ಕಡೂರು | ನಾಪತ್ತೆಯಾಗಿದ್ದ ಎರಡು ವರ್ಷದ ಮಗು ತರೀಕೆರೆಯಲ್ಲಿ ಪತ್ತೆ
ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಬಸ್ಸಿನಲ್ಲಿ ಎದೆನೋವು ಕಾಣಿಸಿಕೊಂಡಾಗ ಬಸ್ ಚಾಲಕ ಹಾಗೂ ನಿರ್ವಾಹಕ ಬಸ್ಸನ್ನು ಆ್ಯಂಬುಲೆನ್ಸ್ ವೇಗದಲ್ಲಿ ನೇರವಾಗಿ ಆಸ್ಪತ್ರೆಗೆ ಚಲಾಯಿಸಿಕೊಂಡು ಹೋಗಿ ವಿದ್ಯಾರ್ಥಿನಿಗೆ ಚಿಕಿತ್ಸೆ ಕೊಡಿಸುವ ಮೂಲಕ ಸಮಯ ಪ್ರಜ್ಞೆ ತೋರಿದ ಘಟನೆ ಕಳೆದ ಜುಲೈ ತಿಂಗಳಲ್ಲಿ ಮಂಗಳೂರಿನಲ್ಲಿ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
