ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹಿರೇನಲ್ಲೂರು ಹೋಬಳಿಯ ಮೇಲನಹಳ್ಳಿ ಕಾಲೋನಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸುಮಾರು 80 ಕುಟುಂಬದ ಮೂಲ ನಿವಾಸಿಗಳು ಇಲ್ಲಿ ವಾಸವಾಗಿದ್ದಾರೆ.

ಬೆಳವಣಿಗೆಯಾದಂತೆ ಕುಟುಂಬದ ವಿಸ್ತೀರ್ಣ ಹಾಗೂ ಜನಸಂಖ್ಯೆ ಹೆಚ್ಚಾಗಿದೆ. ಇದರಿಂದ ಮೇಲನಹಳ್ಳಿ ಕಾಲೋನಿಯ ಜನರು ಸರ್ವೇ ನಂ.22ರಲ್ಲಿ 20 ಎಕ್ಕರೆ 16 ಗುಂಟೆ ಸರ್ಕಾರದ ಬೀಳು ಬಿದ್ಧ ಜಾಗದಲ್ಲಿ 5 ಎಕರೆಗೆ ಸೀಮಿತವಾಗಿ ಒಂದು ವರ್ಷದಿಂದ 58 ಕುಟುಂಬಸ್ಥರು ಗುಡಿಸಲು ನಿರ್ಮಿಸಿಕೊಂಡಿದ್ದರು.
ವಸತಿರಹಿತರು 58 ಗುಡಿಸಲು ನಿರ್ಮಿಸಿದ್ದರು. ಇವು ಅನಧಿಕೃತ ಗುಡಿಸಿಲು ಎಂದು ಆರೋಪಿಸಿ ಬಂದ ದೂರು ಆಧರಿಸಿ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರ ನೆರವಿನೊಂದಿಗೆ ಕಂದಾಯ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.

ಈ ಜಾಗದಲ್ಲಿ ಬೇರೆ ಬೇರೆ ತಾಲೂಕಿನಿಂದ ಜನರು ಬಂದು ಬೆಳೆ ಹಾಗೂ ತೋಟ ಮಾಡಿಕೊಂಡಿದ್ದಾರೆ. ನಾವು ಅಂಗೈಯಷ್ಟು ಜಾಗದಲ್ಲಿ ತಮಗೆ ಬದುಕು ಕಟ್ಟಿಕೊಳ್ಳಲು ಗುಡಿಸಲು ನಿರ್ಮಾಣ ಮಾಡಿಕೊಂಡಿರುವುದನ್ನು ದ್ವಂಸಗೊಳಿಸಿದರು.
“ನಾವು ಕೂಲಿ ಮಾಡಿ ಹೊಟ್ಟೆಬಟ್ಟೆ ಕಟ್ಟಿ ಮಕ್ಕಳನ್ನು ಸಾಕುತ್ತ ಜೀವನ ನಡೆಸುತ್ತಿದ್ದೇವೆ. ನಮ್ಮ ಕಷ್ಟ ಮುಗಿಲು ಮುಟ್ಟಿದೆ. ಒಂದು ಚಿಕ್ಕ ಮನೆಯಲ್ಲಿ 3ರಿಂದ 4 ಕುಟುಂಬದವರು ವಾಸ ಮಾಡುತ್ತಿದ್ದಿವಿ, ನಾವು ಗುಡಿಸಲು ನಿರ್ಮಿಸಿಕೊಂಡು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೆವು. ನಾವೆಲ್ಲ ಕೂಲಿ ಕೆಲಸಕ್ಕೆ ಹೋಗಿರುವ ಸಮಯದಲ್ಲಿ ಅಧಿಕಾರಿಗಳು ಜೆಸಿಬಿಯಿಂದ ಗುಡಿಸಲು ಕೆಡವಿದ್ದಾರೆ. ಗುಡಿಸಲಲ್ಲಿದ್ದ ಆಹಾರ ಪದಾರ್ಥಗಳು, ಅಡುಗೆ ಪಾತ್ರೆಗಳು, ಹಾಸಿಗೆ ಹಾಗೂ ನಮ್ಮ ವಸ್ತುಗಳ ಸಮೇತ ಗುಡಿಸಲುಗಳನ್ನು ನಾಶಪಡಿಸಿದ್ದಾರೆ” ಎಂದು ಮೇಲನಹಳ್ಳಿ ಗ್ರಾಮಸ್ಥರು ಈ ದಿನ.ಕಾಮ್ ಜೊತೆ ಮಾತಾಡಿದ್ದಾರೆ.

“ಹೆಂಗಸರು, ಮಕ್ಕಳು ಅಧಿಕಾರಿಗಳ ಕಾಲಿಗೆ ಬಿದ್ದು ಅಂಗಲಾಚಿದರೂ ಯಾವುದೇ ಕರುಣೆ ತೋರದೆ ನಿರ್ದಾಕ್ಷಿಣ್ಯವಾಗಿ ಗುಡಿಸಲನ್ನು ನೆಲಸಮಗೊಳಿಸಿದರು” ಎಂದು ಗ್ರಾಮಸ್ಥರು ಕಣ್ಣೀರಿಟ್ಟರು.
“ಈ ಜಾಗಕ್ಕಾಗಿ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿರುವ ರೈತರು ಮತ್ತು ಇದೇ ಗ್ರಾಮದ ಪರಿಶಿಷ್ಟ ಜಾತಿಯ ನಿವೇಶನ ರಹಿತರ ನಡುವೆ ಈಗ ಪೈಪೋಟಿ ಆರಂಭವಾಗಿದೆ. ನಿವೇಶನ ರಹಿತರನ್ನು ಪಟ್ಟಿ ಮಾಡಲು ಸೂಚಿಸಲಾಗಿದೆ. ಪರಿಶೀಲನೆಯ ಬಳಿಕ ವಸತಿ ಕಲ್ಪಿಸಲು ಕ್ರಮ ವಹಿಸಲಾಗುವುದು. ಇದೇ ಜಮೀನಿಗೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿರುವ ರೈತರ ಅರ್ಜಿಗಳನ್ನು ಬಗರ್ ಹುಕುಂ ಸಮಿತಿ ಮುಂದೆ ಇರಿಸಲಾಗುವುದು. ಭೂಮಿ ಮಂಜೂರು ಮಾಡುವುದು ಅಥವಾ ತಿರಸ್ಕರಿಸುವುದು ಸಮಿತಿ ತೀರ್ಮಾನ. ಸದ್ಯಕ್ಕೆ ಈ ಭೂಮಿ ಕಂದಾಯ ಇಲಾಖೆ ಸುಪರ್ದಿಯಲ್ಲಿ ಇರಲಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಡಿಸಲು ನಿರ್ಮಿಸಿಕೊಂಡಿದ್ದ ನಿವಾಸಿಗಳು ಪೋಲಿಸರನ್ನು ಕಂಡ ಕೂಡಲೇ, “ಸ್ವಾಮಿ ನಮಗೆ ಮನೆಯಿಲ್ಲ. ಇದೇ ಮನೆ ದಯಮಾಡಿ ಗುಡಿಸಲು ಉರುಳಿಸಬೇಡಿ. ಎಂಟು ಸಾವಿರ ಸಾಲ ಮಾಡಿ ಇಂಥ ಪುಟ್ಟ ಗುಡಿಸಲನ್ನು ಕಟ್ಟಿಕೊಂಡಿದ್ದೇನೆ ನಮ್ಮ ಬದುಕನ್ನು ಬೀದಿಗೆ ತರಬೇಡಿ” ಎಂದು ಅಂಗಲಾಚುತ್ತಿದ್ದ ದೃಶ್ಯ ಮನಮಿಡಿಯುವಂತಿತ್ತು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಡಿ.14ರಂದು ಲೋಕ ಅದಾಲತ್: ಸಿವಿಲ್ ನ್ಯಾಯಾಧೀಶ ವೀರಭದ್ರಯ್ಯ
ಒಟ್ಟಾರೆ ಮೇಲನಹಳ್ಳಿ ಕಾಲೋನಿಯ ದಲಿತ ಸಮುದಾಯಕ್ಕೆ ಸೇರಿದ ವಸತಿರಹಿತರ 58 ಕುಟುಂಬಸ್ಥರಿಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಇವರ ಸಮಸ್ಯೆ ಆಲಿಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು ಎಂದು ಆಶಿಸೋಣ.