ಎಪಿಗ್ರಾಫಿಯ ಆಫ್ ಕರ್ನಾಟಕದಲ್ಲಿ ದಾಖಲಿರುವ ಹಳೆಯೂರು ಆಂಜನೇಯ ದೇವಸ್ಥಾನವು ದ್ರಾವಿಡ ಶೈಲಿಗೆ ಹೋಲುವಂಥದ್ದು. ಇದು 800 ವರ್ಷಗಳಷ್ಟು ಹಳೆಯದು ಎಂದು ಅಂದಾಜಿದೆ. ಗತಕಾಲದ ಇಂಥ ಇತಿಹಾಸ ಪ್ರಸಿದ್ಧ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹಳೆಯೂರು ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಇತ್ತೀಚೆಗೆ ಜರುಗಿತು.
ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವ ತೇರುಬೀದಿಯುದ್ದಕ್ಕೂ ಭಕ್ತಾದಿಗಳ ಪೂಜೆ-ಪುನಸ್ಕಾರಗಳನ್ನು ಹಾದು ನೆಹರೂ ಸರ್ಕಲ್’ನಲ್ಲಿ ಗದ್ದಿಗೆಯಾಯಿತು. ಇಡೀ ದಿನ ತೇರುಬೀದಿಯ ಉದ್ದಕ್ಕೂ ತುಂಬಿ ತುಳುಕುತ್ತಿದ್ದ ಶ್ರದ್ಧಾಭಕ್ತಿಗೆ ಇಡೀ ಊರೇ ಸಾಕ್ಷಿಯಾಗಿತ್ತು. ನೆಹರೂ ಸರ್ಕಲ್’ನಿಂದ ಮರಳಿ ದೇವಸ್ಥಾನದವರೆಗೂ ತೇರನ್ನು ಎಳೆಯುವ ರಥೋತ್ಸವ ಪ್ರಾರಂಭವಾಗಿ, ಕೊನೆಗೆ ಸ್ವಸ್ಥಾನ ತಲುಪಿತು.
ಈ ಸಂದರ್ಭದಲ್ಲಿ, ಕ್ಷೇತ್ರದ ಪ್ರಮುಖರು, ಪುರಸಭಾ ಪ್ರಮುಖರು, ತಹಶೀಲ್ದಾರರು, ಪೊಲೀಸ್ ಪ್ರಮುಖರು, ದೇವಸ್ಥಾನ ಭಕ್ತಮಂಡಳಿ ಪ್ರಮುಖರು ಹಾಗೂ ಮುಜರಾಯಿ ಅಧಿಕಾರಾದಿ ಪ್ರಮುಖರು ಉಪಸ್ಥಿತರಿದ್ದರು.
ಹಳೆಯೂರು ಭಾಗದ ಸುತ್ತಮುತ್ತಲೆಲ್ಲ ಏಕಾದಶಿ ಪರಿಶೆ ಎಂದೇ ಹೆಸರಾಗಿರುವ ಹಳೆಯೂರು ಆಂಜನೇಯ ಸ್ವಾಮಿ ಜಾತ್ರೆಯಲ್ಲಿ, ನೆಲಸಂಸ್ಕೃತಿ, ಶ್ರಮಸಂಸ್ಕೃತಿಗಳ ಜನಸಂಪದ ಸಂಭ್ರಮಿಸುತ್ತದೆ. ತೇರು ಕಟ್ಟುವ, ತೇರನ್ನು ಸಿಂಗರಿಸುವ, ತೇರಿನ ರಥ ಚಕ್ರಗಳಿಗೆ ಸನ್ನೆ ಕೊಡುವ, ತೇರನ್ನು ಎಳೆಯುವ, ಇತ್ಯಾದಿ ಬಹುತೇಕ ಎಲ್ಲ ಕೆಲಸಗಳನ್ನು ಪರ್ಯಾಯ ಸಾಂಸ್ಕೃತಿಕ ಧಾರೆಗಳ ಜನಸಮೂಹ ಸಂಭ್ರಮಿಸುತ್ತಾ ನೆರವೇರಿಸುತ್ತದೆ. ಕಾಲ, ದೇಶ, ಸಮಾಜ, ಸಮೂಹಗಳಿಗೆ ಗ್ರಾಮೀಣ ಕರ್ನಾಟಕದ ಈ ವಿಶ್ವಬಂಧುರತೆ ಸಂದೇಶ ಕೂಡಿಬಾಳುವ ಸಾಮರಸ್ಯದ ತಿಳಿವನ್ನು ಜಗತ್ತಿಗೆ ಸಾರುತ್ತಿರುವಂತಿದೆ.
ದೇವಸ್ಥಾನ ಸಮಿತಿ ಹಾಗೂ ಜಾತ್ರಾ ಸಮಿತಿಗಳವರು ಊರಿನ ದಾಸಯ್ಯ ಕುಲದವರಿಗೆ ಬಿನ್ನಕೊಟ್ಟು ಆಹ್ವಾನಿಸಿದ ನಂತರ ಆರಂಭಗೊಳ್ಳುವ ಜಾತ್ರೆ, ಹತ್ತು ದಿನಗಳ ಕಾಲ ನಡೆಯುತ್ತದೆ. ಜಾತ್ರೆಯ ಈ ಹತ್ತೂದಿನಗಳ ಕಾಲ ಪ್ರತಿದಿನವೂ ಉತ್ಸವ, ಪ್ರಕಾರೋತ್ಸವ, ವಿಶೇಷ ಪೂಜೆ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ, ಇತ್ಯಾದಿ ಸೇವೆಗಳು ಸ್ವಾಮಿಯವರಿಗೆ ಸಲ್ಲುತ್ತವೆ.
ನಿತ್ಯ ಸರ್ವಪ್ರಕಾರದ ವಿಧಿ-ವಿಧಾನಗಳ ಅನುಸಾರ ಸಾಂಗೋಪಾಂಗವಾಗಿ ಧಾರ್ಮಿಕ ಆಚರಣೆಗಳು ಜರುಗುತ್ತವೆ. ಹೀಗೆ, ಅಭಯಹಸ್ತ ಹಳೆಯೂರು ಆಂಜನೇಯ ಸ್ವಾಮಿಯ ಏಕಾದಶಿ ಜಾತ್ರೆ ಸಡಗರ-ಸಂಭ್ರಮದೊಂದಿಗೆ ಸಂಪನ್ನಗೊಂಡಿದೆ.
ತೇರನೆಳೆಯುತಾರೆ ತಂಗಿ, ತೇರನೆಳೆಯುತಾರೆ!!
ಜಾತ್ರೆ, ಪರಿಸೆ, ಉರೂಸು, ಉತ್ಸವಗಳು ಇಂಡಿಯಾದ ಶ್ರಮಣಧಾರೆಗಳು ಮುಂದಿಟ್ಟ, ನಿಸರ್ಗ ವಿವೇಕವನ್ನು ಮರುಸ್ಥಾಪಿಸುವ ಅವಕಾಶಗಳನ್ನು ಪ್ರಜ್ವಲಿಸುತ್ತವೆ! ಈ ನೆಲದ ಸಮೂಹಗಳು ಬಾಳುತ್ತಿರುವ ಜೀವನ ಮೀಮಾಂಸೆ, ಜನರ ಬದುಕಿನ ಜೀವನಾಡಿಯಾದ ಬಹುತ್ವದ್ದು.
ಹೀಗಾಗಿ, ಸಮೂಹದೊಳಗಿನ ವಿವೇಕ, ಬದುಕನ್ನು ಸಹನೀಯಗೊಳಿಸಿಕೊಳ್ಳಲು ತತ್ವಪದ, ಗುರುಕಾರ್ಯ, ಗುರುದೀಕ್ಷೆ, ಮುಂತಾಗಿ ಜಾತ್ರೆ, ಪರಿಸೆ, ಉರುಸು, ಉತ್ಸವಗಳನ್ನು ಸಂಭ್ರಮಿಸುತ್ತದೆ!
ನೆಲಮೂಲ ಸಮುದಾಯಗಳಿಗೆ ಇದು, ಅಧಿಕಾರದಾಚೆಗಿನ ಅಧಿಕಾರವಿದ್ದಂತೆ.
ವರದಿ: ಸಂಚಲನ, ಚಿಕ್ಕನಾಯಕನ ಸೀಮೆಯಿಂದ
