ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಹೊತ್ತಿನಲ್ಲಿ ಈ ಗ್ರಾಮಗಳು ಇಂದಿಗೂ ಬಸ್ ಸಂಚಾರ ಕಂಡಿಲ್ಲ. ಸಮರ್ಪಕ ಸಾರಿಗೆ ಸಂಪರ್ಕವಿಲ್ಲದ ಇಲ್ಲಿನ ಹಳ್ಳಿಯ ಮಕ್ಕಳು ಶಾಲಾ, ಕಾಲೇಜುಗಳಿಗೆ ಜೀವದ ಹಂಗನ್ನು ತೊರೆದು ಪ್ರಯಾಣ ಮಾಡುತ್ತಿದ್ದಾರೆ.
ಹೌದು, ಈ ಊರುಗಳಿರುವುದು ಕೇಂದ್ರ ಸಚಿವ ವಿ. ಸೋಮಣ್ಣ, ಗೃಹ ಸಚಿವ ಪರಮೇಶ್ವರ್, ಸಹಕಾರ ಸಚಿವ ರಾಜಣ್ಣನವರ ತವರು ಜಿಲ್ಲೆ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ. ಸದನಶೂರ ಮಾಜಿ ಸಚಿವ ಮಾಧುಸ್ವಾಮಿ ಪ್ರತಿನಿಧಿಸಿದ ಹಾಗೂ ಪ್ರಸ್ತುತ ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ, ಈ ಕ್ಷೇತ್ರದ ಹಾಲಿ ಶಾಸಕ ಸಿ. ಬಿ. ಸುರೇಶ್ ಬಾಬು ಅವರ ಸ್ವಕ್ವೇತ್ರ ಆದರೂ ಈ ಊರುಗಳು ಇಂದಿಗೂ ಬಸ್ ಸಂಪರ್ಕ ಕಂಡಿಲ್ಲ. ಈ ಗ್ರಾಮದವರ ಸಮಸ್ಯೆ ಇವರ ಕಿವಿಗೆ, ಕಣ್ಣಗೆ ಬಿದ್ದಿಲ್ಲ ಎನ್ನುವುದೇ ಅಶ್ಚರ್ಯ. ವಿಶೇಷವೆಂದರೆ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರಾದ ಎಸ್ ಆರ್ ಶ್ರೀನಿವಾಸ್ ಕೂಡ ತುಮಕೂರು ಜಿಲ್ಲೆಯವರೆ.
ಚಿಕ್ಕನಾಯನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ದಬ್ಬಗುಂಟೆ, ಮರೇನಡು, ಮರೇನಡು ಪಾಳ್ಯ, ಕೆ. ಬಿ. ಹಳ್ಳಿ, ಗೊಲ್ಲರಹಟ್ಟಿ, ಹುಮ್ಲನಾಯಕನ ತಾಂಡ್ಯ, ಬಲ್ಲಪ್ಪನ ತಾಂಡ್ಯ ಈ ಹಳ್ಳಿಗಳಿಗೆ ಇಲ್ಲಿಯವರೆಗೂ ಸಾರಿಗೆ ಸಂಪರ್ಕವೇ ಕಲ್ಪಿಸಲಾಗಿಲ್ಲ. ಇಲ್ಲಿನ ಮಕ್ಕಳು, ರೈತರು ದಸೂಡಿ, ಹೊಯ್ಸಳಕಟ್ಟೆ, ಹುಳಿಯಾರಿಗೆ ಹೋಗಿ ಶಿರಾ, ಚಿಕ್ಕನಾಯಕನಹಳ್ಳಿಗೆ ಹೋಗಬೇಕಿದೆ. ಈ ಗ್ರಾಮಗಳಿಂದ ದಸೂಡಿ 15 ಕಿ. ಮೀ ದೂರವಿದೆ. ಆದರೆ, ಹೊಯ್ಸಳಕಟ್ಟೆ 3 ಕಿ. ಮೀ ಆಗುತ್ತದೆ. ಈ ಗ್ರಾಮಗಳಿಗೆ ಸಾರಿಗೆ ಸಂಪರ್ಕ ಇಲ್ಲದೆ ಅನಿವಾರ್ಯವಾಗಿ ಆಟೋ, ಬೈಕ್, ಸರಕು ಸಾಕಣೆ ವಾಹನವನ್ನೇ ಅವಲಂಬಿಸಿದ್ದಾರೆ. ಇದ್ಯಾವುದೂ ಸಿಗದಿದ್ದರೆ ನಡೆದೇ ಹೋಗಬೇಕಿದೆ.

ಪ್ರೌಢಶಾಲೆಯವರಿಗೆ ದಬ್ಬಗುಂಟೆಗೆ ಐದು ಕಿ. ಮೀ ನಡೆದೇ ಹೋಗಬೇಕು. ಕಾಲೇಜಿಗೆ ಹೋಗಲು ಚಿಕ್ಕನಾಯಕನಹಳ್ಳಿ, ಶಿರಾ, ಹುಳಿಯಾರಿಗೆ ಹೋಗಬೇಕಿದೆ. ಊರಿಂದ ಹೋಗಲು ಇಲ್ಲಿನ ಮಕ್ಕಳು ಬೈಕ್‌ಗಳಲ್ಲಿ ಮೂರುನಾಲ್ಕು ಮಂದಿ, ಆಟೋಗಳಲ್ಲಿ ಜೋತು ಬಿದ್ದು ಪ್ರಾಣ ಪಣಕಿಟ್ಟು ಶಾಲಾ, ಕಾಲೇಜಿಗೆ ಹೋಗುತ್ತಿದ್ದಾರೆ.
ಬೆಳಗ್ಗೆ 8 ಗಂಟೆಗೆ ಮನೆಯಿಂದ ಬಿಟ್ಟರೆ ಸಂಜೆ 6 ರಿಂದ 7 ಗಂಟೆಯಾಗುತ್ತೆ ಮಕ್ಕಳು ಮನೆಗೆ ಬರಲು. ಇದರಿಂದ ಹಲವು ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳುವುದನ್ನೇ ಬಿಟ್ಟಿದ್ದಾರೆ. ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲಾರದೆ ಹಾಜರಾತಿ ಕೊರತೆಯಿಂದ ಪರೀಕ್ಷೆ ಪ್ರವೇಶ ಪತ್ರ ಪಡೆಯಲು ಅಡ್ಡಿಯಾಗಿರುವ ಪ್ರಕರಣಗಳು ಇವೆ. ಆಟೋದಲ್ಲಿ ಜೋತುಬಿದ್ದು ಹೋಗುವಾಗಿ ವಿದ್ಯಾರ್ಥಿನಿಯೊಬ್ಬರು ಬಿದ್ದು ಕೈ ಮುರಿದುಕೊಂಡಿದ್ದಾರೆ ಎಂದು ಮಕ್ಕಳು ಕಾಲೇಜಿಗೆ ಹೋಗಲು ಪಡುವ ಕಷ್ಟವನ್ನು ಇಲ್ಲಿನ ನಿವಾಸಿಗಳು ವಿವರಿಸಿದ್ದಾರೆ.
“ಕಾಲೇಜಿಗೆ ಹೋಗಲು 30 ಕಿ. ಮೀ ಆಗುತ್ತದೆ. ಪ್ರೌಢಶಾಲೆಗೆ ಐದು ಕಿಲೋ ಮೀಟರ್ ಆಗುತ್ತದೆ. ಮಕ್ಕಳು ಶಾಲೆಗೆ ಹೋಗಲು ಆಟೋ ಸಿಗದಿದ್ಧರೆ ಬೈಕಿನಲ್ಲೇ ಲಿಫ್ಟ್ ಕೇಳಿಕೊಂಡು ಪ್ರಯಾಣ ಮಾಡುವ ಪರಿಸ್ಥಿತಿ ಇದೆ. ಮಳೆ ಬಂದರೆ ಇಲ್ಲಿನ ಮಕ್ಕಳು ಶಾಲೆಗೆ ಹೋಗುವುದೇ ಇಲ್ಲ” ಎನ್ನುತ್ತಾರೆ ಗ್ರಾಮಸ್ಥರು.
ಇಲ್ಲಿನ ಹಲವು ರೈತರು ತರಕಾರಿ, ಹಣ್ಣು, ಹೂವು ಬೆಳೆಯುತ್ತಾರೆ. ಇವರಿಗೆ ಬೆಳೆಯುವುದಕ್ಕಿಂತ ಮಾರುಕಟ್ಟೆಗೆ ಸಾಗಿಸುವುದೇ ಪ್ರಯಾಸದ ಕೆಲಸವಾಗಿದೆ. ಸಾರಿಗೆ ಸಂಪರ್ಕವಿಲ್ಲದೆ ರೈತರಂತೂ ಹೖರಾಣಾಗಿದ್ದಾರೆ. ಊರಿನ ರೋಗಿಗಳು, ಗರ್ಭಿಣಿಯರು, ವಯೋವೃದ್ಧರನ್ನು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲು ತೊಂದರೆ ಆಗುತ್ತಿದೆ. ಶಿರಾಕ್ಕೆ ಮೂರು ಸಾವಿರ ಬಾಡಿಗೆ, ಹಿರಿಯೂರಿಗೆ 6 ಸಾವಿರ ಬಾಡಿಗೆ, ಹುಳಿಯಾರಿಗೆ 2 ಸಾವಿರ ಬಾಡಿಗೆ ಕೇಳುತ್ತಾರೆ ಎನ್ನುತ್ತಾರೆ ಇಲ್ಲಿನ ರೈತರು.

ಆಸ್ಪತ್ರೆ, ಶಾಲೆ, ಕಾಲೇಜು, ಮಾರುಕಟ್ಟೆ ಇವೆಲ್ಲವಕ್ಕೂ ಈ ಗ್ರಾಮಗಳು ಚಿಕ್ಕನಾಯಕನಹಳ್ಳಿ, ಹುಳಿಯಾರು, ಹೊಯ್ಸಳಕಟ್ಟೆಗಳನ್ನೇ ಅವಲಂಬಿಸಿವೆ. ಇಲ್ಲಿಗೆ ಸಾರಿಗೆ ಸಂಪರ್ಕ ಕಲ್ಪಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ, ಸ್ಥಳೀಯ ಶಾಸಕರಿಗೆ ಮನವಿ ನೀಡಿದ್ದೇವೆ. ಆದರೂ ನಮ್ಮ ಊರುಗಳಿಗೆ ಬಸ್ ಬಿಟ್ಟಿಲ್ಲ. ಹಿಂದೆ ಒಮ್ಮೆ ಮಾಧುಸ್ವಾಮಿ ಅವರು ಊರಿಗೆ ಬಂದಿದ್ದರು. ಬಸ್ ಹಾಕಿಸಿ ಎಂದು ಕೇಳಿದ್ದಕ್ಕೆ, ಬಸ್ ಹಾಕಿಸುತ್ತೇನೆ. ಡೀಸೆಲ್ ಹಾಕಿಸಿಕೊಳ್ಳುತ್ತೀರಾ ಎಂದು ಕೇಳಿದ್ದರು. ಆದರೆ, ಚುನಾವಣೆ ಮುಗಿದ ಮೇಲೆ ಇತ್ತ ಬಂದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಈ ಊರುಗಳಿಗೆ ಬೆಳಗ್ಗೆ 9 ಗಂಟೆಗೆ ಸಂಜೆ 4 ರಿಂದ 5 ಗಂಟೆ ಸಮಯಲ್ಲಿ ಸರ್ಕಾರಿ ಬಸ್ ಸಂಚಾರ ಮಾಡಿದರೆ ಮಕ್ಕಳು ಶಾಲಾ ಕಾಲೇಜಿಗೆ ಹೋಗಲು ಅನುಕೂಲವಾಗುತ್ತದೆ. ಇಲ್ಲಿನ ಏಳೆಂಟು ಹಳ್ಳಿಯವರಿಗೂ ಅನುಕೂಲವಾಗುತ್ತದೆ. ಈ ಬೇಡಿಕೆ ಈಡೇರಿಸಬೇಕೆಂದು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ‘ವಕ್ಫ್ ಆಸ್ತಿ ಅಲ್ಲಾಹನದ್ದು, ಮರಳಿ ಪಡೆಯಲು ಕಾಂಪ್ರಮೈಸ್ ಬೇಡ’ ಎಂದಿದ್ದ ಬೊಮ್ಮಾಯಿ; ಇಲ್ಲಿದೆ ದಾಖಲೆ
ರೈಲು, ವಿಮಾನ ನಿಲ್ದಾಣ, ಮೆಟ್ರೋ ಸೇವೆಗಳ ಬಗ್ಗೆ ಅತೀವ ಆಸಕ್ತಿ ಹೊಂದಿರುವ, ಜಿಲ್ಲೆಗೆ ಈ ಸೇವೆಗಳ ಸಮರ್ಪಕ ಅನುಷ್ಠಾನಕ್ಕೆ ಯೋಚಿಸುತ್ತಿರುವ ತುಮಕೂರು ಜಿಲ್ಲೆಯ ಸಚಿವರಿಗೆ, ಶಾಸಕರಿಗೆ ಬಸ್ ಸಂಪರ್ಕವನ್ನೇ ಕಾಣದ ಈ ಹಳ್ಳಿಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸಿ ಈ ಗ್ರಾಮಗಳ ಅಭಿವೃದ್ಧಿಗೆ ನೆರವಾಗುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.



