ಚಿಕ್ಕನಾಯಕನಹಳ್ಳಿ | ಪ್ರಮುಖ ತಿರುವುಗಳಲ್ಲಿ ಅಪಘಾತ ಭೀತಿ: ವೇಗ ನಿಯಂತ್ರಕ ಅಳವಡಿಕೆಗೆ ಸಾರ್ವಜನಿಕರ ಒತ್ತಾಯ

Date:

Advertisements

ತಾಲೂಕು ಕೇಂದ್ರ ಚಿಕ್ಕನಾಯಕನಹಳ್ಳಿ ಪಟ್ಟಣ ಹಾಗೂ ಹುಳಿಯಾರು ಪಟ್ಟಣದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 150 ಎ ನಿತ್ಯ ಒಂದಲ್ಲ ಒಂದು ಅಪಘಾತ ಪ್ರಕರಣಕ್ಕೆ ಸಾಕ್ಷಿಯಾಗುತ್ತಿದೆ. ಪ್ರತಿಯೊಂದು ತಿರುವಿನಲ್ಲಿ ವಾಹನಗಳ ಅತಿ ವೇಗ ಹಾಗೂ ಸಂಚಾರ ನಿಯಮ ಉಲ್ಲಂಘನೆಯಿಂದ ಅನೇಕ ಬಾರಿ ಅಪಾಯದ ಪರಿಸ್ಥಿತಿ ಉಂಟಾಗುತ್ತಿರುವ ಹಿನ್ನೆಲೆ ಬಿಗಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಕಿಬ್ಬನಹಳ್ಳಿ ಕ್ರಾಸ್‌ನಿಂದ ಚಿಕ್ಕನಾಯಕನಹಳ್ಳಿ ಪಟ್ಟಣವನ್ನು ಹಾದು ಹುಳಿಯಾರು ಪಟ್ಟಣದವರೆಗೂ ತಾಲೂಕಿನ ಒಳಭಾಗದಲ್ಲಿ ಪ್ರಯಾಣಿಸುವ 150 ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ತಿರುವು ಹಾಗೂ ವೃತ್ತಗಳಲ್ಲಿ ವೇಗ-ನಿಯಂತ್ರಕಗಳನ್ನು ಅಳವಡಿಸಬೇಕಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದಕ್ಕೆ ಕಾರಣ, ನಿತ್ಯ ಇಲ್ಲಿ ಸಂಭವಿಸುತ್ತಿರುವ ಅಪಘಾತಗಳಿಂದ ಘಟಿಸುತ್ತಿರುವ ಸಾವು-ನೋವುಗಳು.

ಗುಡ್-ಫ್ರೈಡೇ ಶುಕ್ರವಾರದ ಸಂಜೆ 150’ಎ ರಾಷ್ಟ್ರೀಯ ಹೆದ್ದಾರಿಯಲ್ಲಿನ ‘ಸಾಲ್ಕಟ್ಟೆ ಕ್ರಾಸ್’ ಬಳಿ ಸರಕು-ಸಾಗಣೆಯ ವಾಹನ ಮತ್ತು ದ್ವಿಚಕ್ರ ವಾಹನಗಳು ಮುಖಾಮುಖಿ ಢಿಕ್ಕಿಹೊಡೆದು ಅಪಘಾತಕ್ಕೀಡಾಗಿವೆ. ಪರಿಣಾಮ ಸಾವು ನೋವು ಸಂಭವಿಸುತ್ತಿವೆ. ಸಮರ್ಪಕವಾದ ವೇಗ-ನಿಯಂತ್ರಕಗಳನ್ನು ಅಳವಡಿಸದೇ ಇರುವುದರಿಂದ ವೇಗವಾಗಿ ಬರುವ ವಾಹನಗಳು ಸಾಲ್ಕಟ್ಟೆ-ಕ್ರಾಸ್ ತಿರುವಿನಲ್ಲಿ ನಿಯಂತ್ರಣ ತಪ್ಪಿ, ನಿತ್ಯ ಹೀಗೆ ಅಪಘಾತಕ್ಕೊಳಗಾಗುತ್ತಿವೆ ಎಂದು ದೂರಿದ ಸಾರ್ವಜನಿಕರು, ಆಕ್ರೋಶಿತರಾಗಿ ಕೆಲಕಾಲ ರಸ್ತೆತಡೆದು ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ರಾಷ್ಟ್ರದ ಪ್ರಜೆಗಳ ಪ್ರಾಣರಕ್ಷಣೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಧಿಕ್ಕಾರ ಕೂಗಿದರು. ಇಲ್ಲಿ ಸಮರ್ಪಕವಾದ ವೇಗ-ನಿಯಂತ್ರಕಗಳನ್ನು ಅಳವಡಿಸದೇ ಇರುವ ಕಾರಣದಿಂದ ಪಾದಚಾರಿಗಳು ಇತ್ತಿಂದತ್ತ ರಸ್ತೆ-ದಾಟಲು ಹಿಂದೇಟು ಹಾಕುವಂತಾಗಿದೆ. ಅಷ್ಟು ರಭಸದಲ್ಲಿ ಬರುವ ವಾಹನಗಳು ಕ್ಷಣಾರ್ಧದಲ್ಲಿ ಸಾಲ್ಕಟ್ಟೆ ತಿರುವನ್ನು ಹಾದು ಹೊರಟು ಹೋಗುತ್ತವೆ. ಸ್ಥಳೀಯ ವಾಹನ ಚಾಲಕ-ಸವಾರರು ಹಾಗೂ ಪಾದಚಾರಿಗಳು ಇಲ್ಲಿ ಚಲಿಸಲು ಭಯ ಬೀಳುವಂತಾಗಿದೆ!
ಕೂಡಲೇ ಇಲ್ಲಿ ಸೂಕ್ತ ಎತ್ತರದ ಸಮರ್ಪಕವಾದ ವೇಗ-ನಿಯಂತ್ರಕ(ಹಂಪ್ಸ್)ಗಳನ್ನು ಅಳವಡಿಸಲೇಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

Advertisements
WhatsApp Image 2025 04 23 at 6.39.17 PM

ಈ ಮುಂಚೆಯೂ ಇದೇ ಸ್ಥಳದಲ್ಲಿ ಹೀಗೆ ಬಹಳಷ್ಟು ಅಪಘಾತಗಳು ಘಟಿಸುತ್ತಲೇ ಇದ್ದರೂ, ಪ್ರಾಧಿಕಾರ ಅಥವಾ ಲೋಕೋಪಯೋಗಿ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಯಾರೂ ಸಹಾ ಇಲ್ಲಿನ ರಸ್ತೆ-ಸುರಕ್ಷತೆಗೆ ಸಂಬಂಧಿಸಿದ ಅಗತ್ಯ ಕ್ರಮಗಳನ್ನು ಜರುಗಿಸುವ ಜವಾಬ್ದಾರಿ ವಹಿಸದೇ ಇರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಗುಡ್-ಫ್ರೈಡೇ ದಿನವೇ ಚಿಕ್ಕನಾಯಕನಹಳ್ಳಿ ಲಿಮಿಟ್ಸ್’ನಲ್ಲಿ ಮೂರು ಪ್ರತ್ಯೇಕ ಅಪಘಾತ ಪ್ರಕರಣ ಸಂಭವಿಸಿವೆ. ಅಂದು, ಕಾರು ಅಪಘಾತದಲ್ಲಿ ತಾಲೂಕಿನ ಮೇಲನಹಳ್ಳಿ ಗ್ರಾಮದ ಲೋಹಿತ್ ಹಾಗೂ ಬೈಕ್ ಅಪಘಾತದಲ್ಲಿ ಸಾಲ್ಕಟ್ಟೆ ಗ್ರಾಮದ ಯಶ್ವಂತ ಮತ್ತು ಟಿವಿಎಸ್ ಅಪಘಾತದಲ್ಲಿ ಮಾಕುವಳ್ಳಿಯ ಮಂಜುನಾಥ್ ಹೆಸರಿನ ಮೂವರು ಮೂರು ಪ್ರತ್ಯೇಕ ಅಪಘಾತಗಳಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

ಸಾಲ್ಕಟ್ಟೆ ಕ್ರಾಸ್-ಅಪಘಾತ ವಲಯ:

ಈ ಭಾಗದ ಹಲವು ಗ್ರಾಮಗಳಿಂದ ಕಿಬ್ಬನಹಳ್ಳಿ-ತಿಪಟೂರು ಹೊರವಲಯದ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೂರಾರು ಮಂದಿ ಮಹಿಳೆಯರು ನಿತ್ಯ ಬೆಳಗ್ಗೆ-ಸಂಜೆ ಪ್ರಯಾಣಿಸುತ್ತಾರೆ. ಇವರನ್ನು ಹೊತ್ತು ಹೆದ್ದಾರಿಯಲ್ಲಿ ಪ್ರಯಾಣಿಸುವ ಗಾರ್ಮೆಂಟ್ಸ್ ವಾಹನಗಳು ಏಕಕಾಲದಲ್ಲಿ ರಸ್ತೆಗಿಳಿಯುತ್ತವೆ. ದಿಕ್ಕು ದಿಕ್ಕುಗಳ ಹಲವು ಗ್ರಾಮಗಳಿಂದ ಅವು ಬಂದು ಕೂಡುವ ಕೇಂದ್ರಬಿಂದು ಸಾಲ್ಕಟ್ಟೆ ಕ್ರಾಸ್ ಆಗಿರುತ್ತದೆ. ಅಲ್ಲಿಂದ ಅವು ಪರಸ್ಪರ ಜಿದ್ದಾ-ಜಿದ್ದಿನ ಸ್ಪರ್ಧೆಗೆ ಬಿದ್ದಂತೆ ವೇಗವಾಗಿ ಚಲಿಸುತ್ತವೆ. ಗಾರ್ಮೆಂಟ್ಸ್’ನ ಲಾಗ್-ಇನ್ ಸಮಯದ ಗಡಿಯನ್ನು ಮುಟ್ಟಲು ಗಾರ್ಮೆಂಟ್ಸ್ ವಾಹನ ಚಾಲಕರಿಗೆ ವೇಗವೆಂಬುದು ಅನಿವಾರ್ಯವಂತೆ!

WhatsApp Image 2025 04 23 at 6.40.05 PM

ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಹೆದ್ದಾರಿಯುದ್ದಕ್ಕೂ ಧುಮುಗುಡುವ ಗಾರ್ಮೆಂಟ್ಸ್ ವಾಹನಗಳ ಕಾರಣದಿಂದ ರಸ್ತೆ-ಪಕ್ಕದಲ್ಲಿ ಚಲಿಸಲೂ ಹೆದರುವಂತಾಗಿದೆ. ಈ ಹಿಂದೆ ಸಾಲ್ಕಟ್ಟೆ ಗ್ರಾಮದ ಒಬ್ಬ ಯುವಕ ರಸ್ತೆ ಪಕ್ಕದಲ್ಲಿ ತನ್ನ ಪಾಡಿಗೆ ತಾನು ಚಲಿಸುತ್ತಿರುವಾಗ, ಹಿಂಬದಿಯಿಂದ ವೇಗವಾಗಿ ಬಂದ ಒಂದು ಗಾರ್ಮೆಂಟ್ಸ್ ವಾಹನ ಆತನ ಮೇಲೆ ಹರಿದು ಸ್ಥಳದಲ್ಲೇ ಆತ ಸಾವಿಗೀಡಾಗಿದ್ದ. ಚಾಲಕನ ಅಜಾಗರೂಕತೆ ಹಾಗೂ ಅತಿ-ವೇಗದ ಚಾಲನೆಯಿಂದಾಗಿ ಆ ಯುವಕನ ಪ್ರಾಣಕ್ಕೆ ಕುತ್ತು ಒದಗಿತ್ತು. ಈ ಪ್ರಕರಣವನ್ನು ಸಾಲ್ಕಟ್ಟೆ ಗ್ರಾಮದ ಜನರ ನೆನಪಿನಲ್ಲಿ ಮಾಸದೆ ಇನ್ನೂ ಉಳಿದಿದೆ.

ಚಿಕ್ಕನಾಯಕನಹಳ್ಳಿ ಪಟ್ಟಣದಿಂದ ‌ಹುಳಿಯಾರಿನ ಕಡೆಗೆ ಪ್ರಯಾಣಿಸುವಾಗ ಮಾರ್ಗಮಧ್ಯದಲ್ಲಿ ಸಿಗುವ ‘ಸಾಲ್ಕಟ್ಟೆ ಕ್ರಾಸ್ ತಿರುವು’ ಪ್ರಾಣ-ಘಾತುಕ ಅಪಘಾತ ಹಾಗೂ ಚಾಲಕ-ಸವಾರರ ದುರ್ಮರಣಗಳಿಗೆ ಹೆಸರುವಾಸಿ. ಇಲ್ಲಿರುವ ಉದ್ದನೆಯ ತಿರುವಿನಲ್ಲಿ ಸೂಕ್ತ-ಎತ್ತರದ ವೇಗ-ನಿಯಂತ್ರಕಗಳನ್ನು ಅಳವಡಿಸದೇ ಇರುವ ಕಾರಣದಿಂದ, ಈ ಮಾರ್ಗದಲ್ಲಿ ಮೊದಲಬಾರಿ ಪ್ರಯಾಣಿಸುವ ವಾಹನಗಳು ವಿಪರೀತ ವೇಗದಲ್ಲೇ ಬಂದು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೊಳಗಾಗುವ ಸಂಭವಗಳಿವೆ. ಇದರಿಂದ ಅಕ್ಕಪಕ್ಕ ಚಲಿಸುವ ವಾಹನಗಳೂ ಅಪಘಾತಕ್ಕೊಳಗಾಗಿ ವಿನಾಕಾರಣ ಸಾವು-ನೋವುಗಳು ಘಟಿಸುತ್ತಿವೆ.

ಚಿಕ್ಕನಾಯಕನಹಳ್ಳಿ, ಹುಳಿಯಾರು, ಕಂದಿಕೆರೆ-ತಿಮ್ಮನಹಳ್ಳಿ ಕಡೆಯ ಅಷ್ಟೂ ರಸ್ತೆಗಳು ಬಂದುಕೂಡುವ ಕೇಂದ್ರಬಿಂದು ಈ ಸಾಲ್ಕಟ್ಟೆ-ಕ್ರಾಸ್ ಆಗಿರುವುದರಿಂದ, ಕೆಲವೊಮ್ಮೆ ಏಕಕಾಲದಲ್ಲಿ ಅಷ್ಟೂ ದಿಕ್ಕುಗಳಿಂದಲೂ ವಾಹನಗಳು ಬಂದುಬಿಡುತ್ತವೆ. ಆಗ ವಾಹನದಟ್ಟಣೆ ಮತ್ತು ಜನಸಂದಣಿ ಎರಡೂ ಸಂಭವಿಸುತ್ತದೆ. ಇಲ್ಲಿನ ಸ್ಥಳೀಯ ಚಾಲಕ-ಸವಾರರಿಗೆ ಇದು ನಿತ್ಯದ ಅನುಭವ. ಆದರೆ, ಹೊಸದಾಗಿ ಮೊದಲಬಾರಿ ಈ ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಇದು ಅನಿರೀಕ್ಷಿತ. ಯಾವುದೇ ಅಡೆತಡೆಯಿಲ್ಲದೆ, ವೇಗ-ನಿಯಂತ್ರಕಗಳ ಹಂಗೂ ಇಲ್ಲದೆ ವೇಗವಾಗಿ ಬರುವ ಹೊಸ-ವಾಹನಗಳ ಚಾಲಕರಿಗೆ ಅನಿರೀಕ್ಷಿತವಾಗಿ ಏಕಾಏಕಿ ಒದಗಿಬರುವ ಸಾಲ್ಕಟ್ಟೆ-ಕ್ರಾಸ್ ತಿರುವು, ವಾಹನದಟ್ಟಣೆ, ಜನಸಂದಣಿ ಹಾಗೂ ಸ್ಥಳೀಯ ವಾಹನಗಳ ಮಂದಗತಿಯ ಗೌಜು… ಎಲ್ಲವೂ ಗಲಿಬಿಲಿಗೊಳಿಸಿ, ವಾಹನ ನಿಯಂತ್ರಣ ತಪ್ಪುವ ಸಂಭವವೇ ಹೆಚ್ಚು. ಇದು, ನೇರವಾಗಿ ಭೀಕರ ಅಪಘಾತಕ್ಕೆ ಎಡೆಮಾಡಿಕೊಡುತ್ತದೆ.

WhatsApp Image 2025 04 23 at 6.41.45 PM

ಹೆದ್ದಾರಿಯಲ್ಲಿ ಕೆಲವೊಮ್ಮೆ ಸರಕು-ಸಾಗಣೆಯ ಭಾರೀ ವಾಹನಗಳು ಸಂಚರಿಸುತ್ತವೆ. ಇಂಥವು, ರಾತ್ರಿಯಲ್ಲಿ ಹೆಚ್ಚು. ಉತ್ತರಭಾರತದ ಕಡೆಯಿಂದ ಬರುವ ಇವುಗಳ ಚಾಲಕರಿಗೂ ‘ಸಾಲ್ಕಟ್ಟೆ ಕ್ರಾಸ್ ತಿರುವು’ ಹೊಸತು ಮತ್ತು ಉದ್ದನೆಯದ್ದು. ರಾತ್ರಿಯ ಏಕತಾನತೆಯ ವೇಗದಲ್ಲಿ ಚಾಲನೆ ಮಾಡುತ್ತಿರುವ ಚಾಲಕನಿಗೆ ಹೆದ್ದಾರಿ-ಮಧ್ಯದಲ್ಲಿ ಸಿಗುವ ಉದ್ದನೆಯ ತಿರುವು ಗಲಿಬಿಲಿಗೊಳಿಸಬಲ್ಲುದು. ಮತ್ತು ಮೂರೂ ದಿಕ್ಕುಗಳಿಂದ ಬರುವ ವಾಹನಗಳ ನಾಮುಂದು-ತಾಮುಂದು ಅವಸರವೂ ಇಲ್ಲಿ ಅಪಘಾತಕ್ಕೆ ದಾರಿ ಮಾಡಿಕೊಡುತ್ತಿದೆ! ಹಾಗಾಗಿ, ಮೂರೂ ಕಡೆಯ ಕೂಡುರಸ್ತೆಗಳಲ್ಲಿ ಸೂಕ್ತ ಎತ್ತರದ ಸಮರ್ಪಕವಾದ ವೇಗ-ನಿಯಂತ್ರಕಗಳನ್ನು ಅಳವಡಿಸಿದರೇ ಮೂರೂ ಕಡೆಯ ವಾಹನ ಚಾಲಕರೂ ಅಪಘಾತದಿಂದ ಬಚಾವಾಗಬಲ್ಲರು ಎಂಬುದು ಸಾರ್ವಜನಿಕರ ವಾದ.

ಗಿಜಿಗಿಜಿ ಶೆಟ್ಟಿಕೆರೆ ಗೇಟ್:

ಚಿಕ್ಕನಾಯಕನಹಳ್ಳಿ ಪಟ್ಟಣದ ಕೇಂದ್ರದಲ್ಲಿರುವ ಶೆಟ್ಟಿಕೆರೆ-ಗೇಟ್ ಸರ್ಕಲ್’ನಲ್ಲಿ ಸದಾ ವಾಹನದಟ್ಟಣೆ ಹಾಗೂ ಜನಸಂದಣಿ ಈಗ ಸಾಮಾನ್ಯ ಸಂಗತಿ. ಕಿಬ್ಬನಹಳ್ಳಿ ಕ್ರಾಸ್ ಕಡೆಯ ರಸ್ತೆ, ಶೆಟ್ಟಿಕೆರೆ-ತಿಪಟೂರು ಕಡೆಯ ರಸ್ತೆ, ಮಹಾಲಕ್ಷ್ಮಿ ಲೇಔಟ್ ಕಡೆಯ ರಸ್ತೆ, ವಿನಾಯಕ ವೈನ್ಸ್ ಕಡೆಯ ರಸ್ತೆ, ಇಂದಿರಾ ಕ್ಯಾಂಟೀನ್ ಕಡೆಯ ರಸ್ತೆ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಆಗಮನ-ನಿರ್ಗಮನ ರಸ್ತೆ ಹಾಗೂ ನೆಹರೂ ಸರ್ಕಲ್-ಹುಳಿಯಾರು ಕಡೆಯಿಂದ ಬರುವ ರಸ್ತೆ…. ಈಯೆಲ್ಲ ಆರೇಳು ದಿಕ್ಕಿನ ರಸ್ತೆಗಳೂ ಬಂದುಸೇರುವ ಕೇಂದ್ರಬಿಂದು ಶೆಟ್ಟಿಕೆರೆ ಗೇಟ್ ಅರ್ಥಾತ್ ‘ಸ್ವಾತಂತ್ರ್ಯ-ಹೋರಾಟಗಾರರ ವೃತ್ತ’. ಸಾಲದ್ದಕ್ಕೆ, ಇಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಕಾರ್ಯಾಲಯವಿದೆ. ಸನಿಹದಲ್ಲೇ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವಿದೆ. ಬದಿಯಲ್ಲಿ ವಿನಾಯಕ ವೈನ್ಸ್ ಇದೆ. ಐದಾರು ವೆಜ್ ಹಾಗೂ ನಾನ್-ವೆಜ್ ಹೊಟೇಲುಗಳಿವೆ. ತರಾಂತರದ ಪಾರ್ಲರ್ರು, ಬೇಕರಿ-ಮೆಡಿಕಲ್ಲು-ಸಲೂನು-ಮಳಿಗೆಗಳಿವೆ.
ಇಂತಹ ಜಾಗದಲ್ಲಿ ಒಂದೇ ಒಂದು ವೇಗ-ನಿಯಂತ್ರಕವಿಲ್ಲ.

ಕಿಬ್ಬನಹಳ್ಳಿ ಕಡೆಯಿಂದ ಬರುವ ರಸ್ತೆ ತುಸು ಇಳಿಜಾರಾಗಿದೆ ಆದ್ದರಿಂದ ಅತ್ತ ಕಡೆಯಿಂದ ವಾಹನಗಳು ವೇಗದ ಜೊತೆ ರಭಸದಿಂದ ನುಗ್ಗುತ್ತವೆ. ಶೆಟ್ಟಿಕೆರೆ-ತಿಪಟೂರು ಕಡೆಯಿಂದ ಬರುವ ರಸ್ತೆಯೂ ಇಳಿಜಾರಾಗಿರುವುದರಿಂದ ಅತ್ತಲಿಂದ ಬರುವ ವಾಹನಗಳೂ ವೇಗವಾಗಿ ರಭಸದಿಂದ ಹರಿಯುತ್ತವೆ. ಮಹಾಲಕ್ಷ್ಮಿ ಲೇಔಟ್ ಕಡೆಯ ರಸ್ತೆ ಸಮತಟ್ಟಾದ್ದರಿಂದ ಅತ್ತಲಿಂದಲೂ ವಾಹನಗಳು ಬಿರುಸಾಗೇ ಬರುತ್ತವೆ. ಇನ್ನು ನೆಹರೂ ಸರ್ಕಲ್ ಕಡೆಯಿಂದ ಬರುವ ರಸ್ತೆಯೂ ಸಮತಟ್ಟೇ ಆಗಿದೆ. ಅತ್ತಲಿಂದಲೂ ವಾಹನಗಳು ವೇಗವಾಗಿಯೇ ನುಗ್ಗುತ್ತವೆ. ಜೊತೆಗೆ, ಇಂದಿರಾ ಕ್ಯಾಂಟೀನ್ ಹಾಗೂ ಎಸ್ ಬಿ ಐ ಬ್ಯಾಂಕಿನ ಬದಿಯಿಂದ ಬರುವ ರಸ್ತೆಯೂ ತುಸು ಇಳಿಜಾರು. ಅಲ್ಲೂ ವಾಹನಗಳ ವೇಗದ ಭರಾಟೆ. ವಿನಾಯಕ ವೈನ್ಸ್ ಕಡೆಯ ರಸ್ತೆ ಸ್ವಲ್ಪ ಮೇಲೇ ಇದೆ. ಹಾಗಾಗಿ, ಅತ್ತಲಿಂದ ಬರುವ ವಾಹನಗಳು ಮಂದಗತಿಯವು. ಆದರೆ, ಈಯೆಲ್ಲ ದಿಕ್ಕುಗಳಿಂದ ಬರುವ ವಾಹನಗಳೂ ಬಂದುಸೇರುವ ಕೇಂದ್ರಬಿಂದು ಯಾವುದೆಂದರೆ ಅದು, 150’ಎ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶೆಟ್ಟಿಕೆರೆ ಗೇಟ್ ಸರ್ಕಲ್.

WhatsApp Image 2025 04 23 at 6.42.01 PM

ಇಲ್ಲಿ ಮುಖ್ಯವಾದ ಸಮಸ್ಯೆ ಇರುವುದು, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಆಗಮನ-ನಿರ್ಗಮನದ ಪ್ರವೇಶದ್ವಾರದ ರಸ್ತೆಯಲ್ಲಿ. ಅದು, 150’ಎ ರಾಷ್ಟ್ರೀಯ ಹೆದ್ದಾರಿ’ಗೆ ಅಂಟಿಕೊಂಡಂತೇ ಇರುವುದರಿಂದ ಘಳಿಗೆ ಘಳಿಗೆಗೂ ಇಲ್ಲಿಗೆ ಬಂದುಹೋಗುವ ಕೆ ಎಸ್ ಆರ್ ಟಿ ಸಿ ಬಸ್ಸುಗಳು, ಹೆದ್ದಾರಿಯಿಂದ ನಿಲ್ದಾಣದ ಕಡೆಗೆ ತಿರುಗಿಕೊಳ್ಳುವಾಗ ಮತ್ತು ನಿಲ್ದಾಣದಿಂದ ಮರಳಿ ಹೆದ್ದಾರಿ-ರಸ್ತೆಗೆ ಇಳಿಯುವಾಗ ಬಹಳ ತ್ರಾಸಾಗುತ್ತದೆ. ಹೆದ್ದಾರಿ-ರಸ್ತೆಯಲ್ಲಿ ವಾಹನದಟ್ಟಣೆಯ ಜೋರು ಜಮಾವಣೆಯಾಗುತ್ತದೆ. ಪಾದಚಾರಿಗಳ ಜಾಗಕ್ಕೂ ತತ್ವಾರ. ಎಲ್ಲ ದಿಕ್ಕುಗಳಿಂದಲೂ ನುಗ್ಗುವ ವಾಹನಗಳು ಅನಿವಾರ್ಯವಾಗಿ ಹೆದ್ದಾರಿಯ ರಸ್ತೆಮಧ್ಯದಲ್ಲಿ ನಿಲ್ಲುವುದರಿಂದ ಹೆದ್ದಾರಿಯಲ್ಲಿ ವಾಹನದಟ್ಟಣೆ ಹಾಗೂ ಜನಸಂದಣಿ ದುಪ್ಪಟ್ಟಾಗುತ್ತದೆ! ಇದು, ಮತ್ತೆ ಯಥಾಸ್ಥಿತಿಗೆ ಮರಳಲು‌ ಅರ್ಧಗಂಟೆಯ ಕಾಲವ್ಯಯವಾಗುತ್ತದೆ.

ಇಲ್ಲಿನ ಅಷ್ಟೂ ದಿಕ್ಕಿನ ರಸ್ತೆಗಳಲ್ಲೂ ಸೂಕ್ತ ಎತ್ತರದ ಸಮರ್ಪಕವಾದ ವೇಗ-ನಿಯಂತ್ರಕಗಳನ್ನು ಅಳವಡಿಸಿಬಿಟ್ಟರೆ, ಸಾರ್ವಜನಿಕರಿಗೆ ಒದಗುತ್ತಿರುವ ನಿತ್ಯದ ಈಯೆಲ್ಲ ಕಿರಿಕಿರಿಗೆ ಇತಿಶ್ರೀ ಹಾಡಬಹುದು! ಮುಖ್ಯವಾಗಿ, ಕಿಬ್ಬನಹಳ್ಳಿ ಕ್ರಾಸ್ ಕಡೆಯಿಂದ ಬರುವ ತುಸು ಇಳಿಜಾರಾಗಿರುವ ಪ್ರದೇಶದಲ್ಲಿ ರಸ್ತೆಗೆ ವೇಗ-ನಿಯಂತ್ರಕ ಅಳವಡಿಸಲೇಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಪೊಲೀಸ್ ವಿವರಣೆ:

2024ರಲ್ಲಿ ಚಿಕ್ಕನಾಯಕನಹಳ್ಳಿ ವೃತ್ತದ ಲಿಮಿಟ್ಸ್ ಒಂದರಲ್ಲೇ, ಅಪಘಾತದಲ್ಲಿ ಸರಿಸುಮಾರು 15 ಸಾವುಗಳು ಸಂಭವಿಸಿವೆ. ಸುಮಾರು 38 ಘೋರ ರಸ್ತೆ-ಅಪಘಾತಗಳು ಹಾಗೂ 49 ಸಾಮಾನ್ಯ ರಸ್ತೆ-ಅಪಘಾತಗಳು ವರದಿಯಾಗಿವೆ ಎಂದು ಚಿಕ್ಕನಾಯಕನಹಳ್ಳಿ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕರಾದ ಎಫ್ ಕೆ ನದಾಫ್ ತಿಳಿಸುತ್ತಾರೆ.

WhatsApp Image 2025 04 23 at 6.38.44 PM

ರಾಷ್ಟ್ರೀಯ ಹೆದ್ದಾರಿ 150’ಎ ತಾಲೂಕಿನಲ್ಲಿ ಹಾದುಹೋಗುವ ‘ಹಾಲುಗೊಣ ಗ್ರಾಮದಿಂದ ಹುಳಿಯಾರು-ಪುರದಮಠ ಗಡಿಯವರೆಗಿನ ಹೆದ್ದಾರಿ-ರಸ್ತೆಯಲ್ಲಿ ಇರುವ ಸಮಸ್ಯೆಗಳನ್ನು ಹಾಗೂ ದೋಷಗಳನ್ನು ಸರಿಪಡಿಸಿಕೊಡುವಂತೆ ಕೋರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಕಾರ್ಯಪಾಲಕ ಅಭಿಯಂತರರು-ತುಮಕೂರು ಇವರಿಗೆ ಹಾಗೂ ರಸ್ತೆನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರಿಗೆ ಹಲವು ಬಾರಿ ಪತ್ರ ಬರೆದಿದ್ದರೂ ಸಕಾರಾತ್ಮಕವಾದ ಸ್ಪಂದನೆ ದೊರೆಯುತ್ತಿಲ್ಲ ಎಂಬ ವಿವರಣೆ ಪೊಲೀಸ್ ಮೂಲಗಳಿಂದ ಸಿಗುತ್ತದೆ.

ವಾಹನದಟ್ಟಣೆ ಹಾಗೂ ಜನದಟ್ಟಣೆ ಹೆಚ್ವಿರುವ ಕೆಲವು ವೃತ್ತ ಹಾಗೂ ರಸ್ತೆ-ತಿರುವುಗಳಲ್ಲಿ ಸೂಕ್ತ ಎತ್ತರದ ಸಮರ್ಪಕವಾದ ವೇಗ-ನಿಯಂತ್ರಕಗಳನ್ನು ಅಳವಡಿಸಲು ಸಾರ್ವಜನಿಕ ಹಿತಾಸಕ್ತಿಯಿಂದಾಗಿ ಅನುಮತಿ ನೀಡುವಂತೆ ಕೋರಿ, ಜಿಲ್ಲಾಧಿಕಾರಿ ತುಮಕೂರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲಿಂದ ಇನ್ನೂ ನಮಗೆ ಅನುಮತಿ ದೊರೆತಿಲ್ಲವಾದ್ದರಿಂದ ನಾವು ನಮ್ಮ ಸೀಮಿತ ಶಕ್ತಿಯಲ್ಲೇ ಅಪಘಾತಗಳಾಗದಂತೆ ಜಾಗ್ರತೆ ಮತ್ತು ಎಚ್ಚರ ಮೂಡಿಸುತ್ತಿದ್ದೇವೆ ಎಂಬ ಉತ್ತರ ಸಿಗುತ್ತದೆ.

ಹಮ್ಸ್ ಅಳವಡಿಸಲು ಪ್ರಸ್ತಾಪಿಸಲಾಗಿರುವ ಚಿಕ್ಕನಾಯಕನಹಳ್ಳಿಯ ಜಾಗಗಳು ಹೀಗಿವೆ:

ತಾಲೂಕು ಕಚೇರಿ ಎದುರಿನ ಮುಖ್ಯರಸ್ತೆಯ ಎರಡೂ ಕಡೆ, ಪಟ್ಟಣದಲ್ಲಿರುವ ನ್ಯಾಯಾಲಯ ಮತ್ತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಎದುರಿನ ಮುಖ್ಯರಸ್ತೆಯ ಎರಡೂ ಕಡೆ, ಜೋಗಿಹಳ್ಳಿ ಗೇಟ್ ಅರ್ಥಾತ್ ಡಿ.ದೇವರಾಜ ಅರಸ್ ವೃತ್ತದ ಮುಖ್ಯ ರಸ್ತೆಯ ಎರಡೂ ಕಡೆ, ಪರಿವೀಕ್ಷಣಾ ಮಂದಿರ(ಐಬಿ) ಎದುರಿನ ಮುಖ್ಯರಸ್ತೆಯ ಎರಡೂ ಕಡೆ, ತಾಲ್ಲೂಕು ಕ್ರೀಡಾಂಗಣ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಕೆ ಎಮ್ ಹೆಚ್ ಪಿ ಎಸ್ ಶಾಲೆಯ ಎದುರಿರುವ ಮುಖ್ಯರಸ್ತೆಯ ಎರಡೂ ಕಡೆ, ಶೆಟ್ಟಿಕೆರೆ ಗೇಟ್ ಅರ್ಥಾತ್ ಸ್ವಾತಂತ್ರ್ಯ-ಹೋರಾಟಗಾರರ ವೃತ್ತದ ಎಲ್ಲ ದಿಕ್ಕುಗಳ ಮುಖ್ಯರಸ್ತೆಗಳ ಎರಡೂ ಕಡೆ, ನೆಹರೂ ಸರ್ಕಲ್ ಮುಖ್ಯ ರಸ್ತೆಯ ಎರಡೂ ಕಡೆ, ಮತಿಘಟ್ಟ ಗೇಟ್ ಮುಖ್ಯರಸ್ತೆಯ ಎರಡೂ ಕಡೆ, ಎಸ್ ಎಲ್ ಎನ್ ಚಿತ್ರಮಂದಿರದ ಎದುರಿನ ಮುಖ್ಯರಸ್ತೆಯ ಎರಡೂ ಕಡೆ, ವೀರಭದ್ರೇಶ್ವರ ಪೆಟ್ರೋಲ್ ಬಂಕ್ ಮಭಾಗದ ಮುಖ್ಯರಸ್ತೆಯ ಎರಡೂ ಕಡೆ ಹಾಗೂ ಸಾಲ್ಕಟ್ಟೆ ಕ್ರಾಸ್’ಗೆ ಬಂದುಕೂಡುವ ಎಲ್ಲ ಮುಖ್ಯರಸ್ತೆಯ ಎರಡೂ ಕಡೆಗಳಲ್ಲಿ ವೈಜ್ಞಾನಿಕ ಹಂಪ್ಸ್, ರಬ್ಬರ್ ಹಮ್ಸ್, ನಾಮಫಲಕಗಳು, ಕ್ಯಾಟ್ ಐಯ್ಸ್ ಹಾಗೂ ಬ್ಲಿಂಕರ್ಸ್’ಗಳನ್ನು ಅಳವಡಿಸಲು ಪ್ರಸ್ತಾಪಿಸಿ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಅನುಮತಿ ಕೋರಲಾಗಿದೆ.

WhatsApp Image 2025 04 23 at 6.43.22 PM

ನಿತ್ಯ ಒಂದಲ್ಲ ಒಂದು ಅಪಘಾತ ಮತ್ತು ಚಾಲಕ-ಸವಾರರ ದುರ್ಮರಣ ನೋಡುತ್ತಿರುವ ತಾಲ್ಲೂಕಿನ ಜನ ಮಾತ್ರ, 150’ಎ ರಾಷ್ಟ್ರೀಯ ಹೆದ್ದಾರಿ-ರಸ್ತೆಯಲ್ಲಿ ಸೂಕ್ತ ಎತ್ತರದ ಸಮರ್ಪಕವಾದ ವೇಗ-ನಿಯಂತ್ರಕಗಳನ್ನು ಅಳವಡಿಸಲೇಬೇಕು. ಇಲ್ಲದಿದ್ದಲ್ಲಿ, ಉಗ್ರ ಹೋರಾಟ ನಡೆಸಲಾಗುವುದು ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ವರದಿ: ಸಂಚಲನ
ಚಿಕ್ಕನಾಯಕನ ಸೀಮೆಯಿಂದ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X