ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿ ಮತಿಘಟ್ಟ, ಮಲ್ಲಿಗೆರೆ ಗ್ರಾಮಗಳಲ್ಲಿ ಬಲವಂತವಾಗಿ ಜಮೀನುಗಳನ್ನು ವಶಪಡಿಸಿಕೊಂಡು ಕೆಪಿಟಿಸಿಎಲ್ ಅಧಿಕಾರಿಗಳು ಟವರ್ ನಿರ್ಮಾಣಕ್ಕೆ ಮುಂದಾಗಿರುವುದರನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಈ ಪ್ರತಿಭಟನೆಯ ವೇಳೆ ರೈತರು, ಪೊಲೀಸರು ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳ ನಡುವೆ ವಾಗ್ವಾದಗಳು ನಡೆದಿವೆ.
ಪೊಲೀಸರ ಸಂರಕ್ಷಣೆಯಲ್ಲಿ ಬಲವಂತವಾಗಿ ರೈತರ ಜಮೀನುಗಳನ್ನು ವಶಪಡಿಸಿಕೊಂಡು ಕೆಪಿಟಿಸಿಎಲ್ ಟವರ್ ನಿರ್ಮಾಣ ಕಾಮಗಾರಿ ಹೊಂಡಗಳನ್ನು ತೋಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಟವರ್ ನಿರ್ಮಾಣಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ರೈತರು ವಿರೋಧ ವ್ಯಕ್ತಪಡಿಸಿದ ವೇಳೆ ಪೊಲೀಸರು, ಕೆಪಿಟಿಸಿಎಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆಯಿತು.
ಹಲವು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ನಿರ್ಮಿಸುತ್ತಿರುವ ಹಂದನಕೆರೆ ಉಪ-ಸ್ಥಾವರದಿಂದ ಮತಿಘಟ್ಟ ಸ್ಥಾವರದವರೆಗಿನ 7.7 ಕಿ.ಮೀ. ಉದ್ದದ ಲೈನ್ ಅಳವಡಿಸಲು ಟವರ್‍ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ 7.7 ಕಿ.ಮೀ.ವರೆಗೂ ಲೈನ್ ಅಳವಡಿಕೆಗೆ 300 ಮೀಟರ್ ಅಂತರದಲ್ಲಿ ಒಂದೊಂದು ಟವರ್‌ನಂತೆ ಒಟ್ಟು 31 ಟವರ್‌ಗಳ ನಿರ್ಮಾಣ ಆಗಿದೆ. ನಿರ್ಮಾಣಕ್ಕೆ ಅಗತ್ಯವಾಗಿದ್ದ ರೈತರ ಜಮೀನುಗಳಲ್ಲಿ ಟವರ್ ನಿರ್ಮಾಣದ ಹೊಂಡಗಳನ್ನು ತೆಗೆಯಲಾಗಿದೆ. ಆದರೆ, ಯಾವ ರೈತರಿಗೂ ಈ ತನಕ ನಯಾಪೈಸೆಯ ಪರಿಹಾರವನ್ನೂ ನೀಡಿಲ್ಲ. ಮಿಕ್ಕಿದ ಟವರ್‌ಗಳ ನಿರ್ಮಾಣಕ್ಕೂ ಕೆಪಿಟಿಸಿಎಲ್ ಬಲವಂತವಾಗಿ ರೈತರ ಜಮೀನನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದು, ಅಧಿಕಾರಿಗಳ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ, ಹುಚ್ಚನಹಳ್ಳಿ, ಸೋರಲಮಾವು, ಬಂದ್ರೆಹಳ್ಳಿ, ಮತಿಘಟ್ಟ, ಮಲ್ಲಿಗೆರೆ ಸೇರಿದಂತೆ ಅನೇಕ ಗ್ರಾಮಗಳ ರೈತರ ಜಮೀನುಗಳಲ್ಲಿ ಹಾದು ಹೋಗಲಿರುವ 7.7 ಕಿಲೋಮೀಟರ್ ಉದ್ದದ ಈ ಏಕಮುಖ ಪ್ರಸರಣದ ಲೈನ್ ಅಳವಡಿಸುವ ಕಾಮಗಾರಿಗೆ ಬೇಕಾದ ಜಮೀನನ್ನು ಬಲವಂತವಾಗಿ ರೈತರಿಂದ ವಶಪಡಿಸಿಕೊಳ್ಳುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರು ಹೈಕೋರ್ಟ್ ಮೊರೆಹೋಗಿದ್ದಾರೆ. ಪ್ರಕರಣ ಇನ್ನೂ ಇತ್ಯರ್ಥಗೊಂಡಿಲ್ಲ. ಇದೇ ಜುಲೈ 19ಕ್ಕೆ ಕೋರ್ಟಿನ ತೀರ್ಪು ಬರಲಿದೆ. ಇಲಾಖೆಯ ಅಧಿಕಾರಿಗಳು ಕಡೇಪಕ್ಷ ಅಲ್ಲಿಯವರೆಗೂ ಕಾಯಬೇಕಿತ್ತು. ಆದರೆ ಏಕಾಏಕಿ ರೈತರ ಜಮೀನಿನ ಮೇಲೆ ದಾಳಿ ಮಾಡಿ, ಪೊಲೀಸ್ ಬಲಪ್ರಯೋಗಿಸಿರುವುದು ಅಕ್ಷಮ್ಯ ಎಂದು ರೈತರು ಕಿಡಿಕಾರಿದ್ದಾರೆ.
“ಉತ್ತಮ ಇಳುವರಿಯ ಮುಂಗಾರು ಬೆಳೆ ಬೆಳೆದಿರುವ ಜಮೀನಿನ ಮೇಲೆ ಬುಲ್ಡೋಝರ್ ನುಗ್ಗಿಸಿ ಬೆಳೆಯನ್ನು ನಾಶಮಾಡುತ್ತಿದ್ದಾರೆ. ಬಲವಂತವಾಗಿ ರೈತರ ಜಮೀನುಗಳನ್ನು ವಶಪಡಿಸಿಕೊಂಡು ಟವರ್ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾರೆ. ಇದು ಘನಘೋರ ಅನ್ಯಾಯ. ರೈತರು ತಮಗಿರುವ ತುಂಡು ಜಮೀನನ್ನೂ ಕಳೆದುಕೊಳ್ಳುತ್ತಿದ್ದಾರೆ. ನಯಾಪೈಸೆಯ ಪರಿಹಾರವೂ ಇಲ್ಲ. ರೈತ ಆತ್ಮಹತ್ಯೆ ಮಾಡಿಕೊಳ್ಳದೆ ಇನ್ನೇನು ಮಾಡಬೇಕು ಹೇಳಿ” ಎಂದು ಮಲ್ಲಿಗೆರೆ ಗ್ರಾಮದ ರೈತ ಮಹಿಳೆ ರಾಜಮ್ಮ ಎಂಬವರ ಸಹೋದರ ಪ್ರಶ್ನಿಸಿದ್ದಾರೆ.

“ಟವರ್ ನಿರ್ಮಾಣ ಮಾಡದಂತೆ ನ್ಯಾಯಾಲಯದ ತಡೆಯಾಜ್ಞೆ ನೀಡಿತ್ತು. ಆದರೆ ಅದು ಈಗ ತೆರವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಪೊಲೀಸ್ ಭದ್ರತೆಯ ಜೊತೆಗೆ ಸೋಮವಾರ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಭೂಮಿ ಕಳೆದುಕೊಂಡ ರೈತರಿಗೆ ನೀಡಬೇಕಾದ ಪರಿಹಾರವನ್ನು ಮೊದಲು ನೀಡಿ ಎಂದು ಜಿಲ್ಲಾಧಿಕಾರಿಗಳು ಯಾಕೆ ಸೂಚನೆ ನೀಡುತ್ತಿಲ್ಲ? ತುಮಕೂರು ಜಿಲ್ಲಾಧಿಕಾರಿಗಳು ರೈತರ ಪರವಾಗಿ ಇರಬೇಕಿತ್ತು. ಆದರೆ, ಅವರು ರೈತ ವಿರೋಧಿ ನಿರ್ಣಯಗಳನ್ನು ತಳೆಯುತ್ತಿದ್ದಾರೆ. ಅವರು ರೈತರ ಅಹವಾಲನ್ನು ಕೇಳಿ ತಿಳಿದು ರೈತರಿಗೆ ನ್ಯಾಯ ಕೊಡಿಸಬೇಕು” ಎಂದು ಸಂತ್ರಸ್ತ ರೈತ ಯೋಗೇಶ್ ಮತಿಘಟ್ಟ ಒತ್ತಾಯಿಸಿದ್ದಾರೆ.
ಪೊಲೀಸರ ಪ್ರತಿಕ್ರಿಯೆ ಏನು?
ಈ ಬೆಳವಣಿಗೆಯ ಬಗ್ಗೆ ಮಾತನಾಡಿರುವ ಆರಕ್ಷಕ ವೃತ್ತನಿರೀಕ್ಷಕ ಎಫ್ ಕೆ ನದಾಫ್, “ಜಿಲ್ಲಾಧಿಕಾರಿಗಳ ಆದೇಶದನ್ವಯ ಕೆಪಿಟಿಸಿಎಲ್ ಟವರ್ ನಿರ್ಮಾಣ ಕಾಮಗಾರಿ ಜಾಗದಲ್ಲಿ ಸೂಕ್ತ ಭದ್ರತೆ ಕಲ್ಪಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಇಲ್ಲಿ ಯಾವುದೇ ದೌರ್ಜನ್ಯ, ದಬ್ಬಾಳಿಕೆ ಮಾಡುವ, ಧಮ್ಕಿ ಹಾಕುವ, ಬೆದರಿಸುವ ಕೆಲಸವನ್ನು ಪೊಲೀಸರು ಮಾಡುತ್ತಿಲ್ಲ. ಅಂಥ ತಪ್ಪುಗಳನ್ನು ನಮ್ಮ ಸಿಬ್ಬಂದಿ ಮಾಡುವುದೂ ಇಲ್ಲ. ನಮ್ಮಲ್ಲಿನ ಎಲ್ಲರೂ ಓದಿ, ಬರೆದು, ತರಬೇತುಗೊಂಡು ಬಂದಿರುವವರೇ ಇರುವುದು. ಎಲ್ಲರಲ್ಲೂ ಮಾನವೀಯತೆ ಇದೆ. ನಾವು ನೋಡಿ, ತಿಳಿದು ಕೆಲಸ ಮಾಡುತ್ತೇವೆ. ಅಮಾಯಕ ರೈತರ ಮೇಲೆ ಪೊಲೀಸ್ ಬಲಪ್ರಯೋಗ, ದೌರ್ಜನ್ಯ ಎಂಬ ಆರೋಪ ಸುಳ್ಳು” ಎಂದು ತಿಳಿಸಿದ್ದಾರೆ.

ರೈತ ಮುಖಂಡರ ಪ್ರತಿಕ್ರಿಯೆ
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಹಸಿರುಸೇನೆಯ ಮುಖಂಡ ದೇವರಾಜು ತಿಮ್ಮಲಾಪುರ, “ಅನ್ನ ಬೆಳೆಯುವ ರೈತನ ಜಮೀನಿಗೆ ಜೆಸಿಬಿ ಹಾಯಿಸುವ ಮೊದಲು, ಅನ್ನದ ಋಣ ಅಧಿಕಾರಿಗಳ ಮಾನವೀಯತೆಯನ್ನು ಕನಿಷ್ಠ ಕಲಕಬೇಕಿತ್ತಲ್ಲವೇ? ಕೋರ್ಟು-ಕಚೇರಿ ಕಾನೂನು ಎಲ್ಲವೂ ಆಮೇಲಿನ ವಿದ್ಯಮಾನ. ಅನ್ನದೇವರ ಮುಂದೆ ಇನ್ನು ದೇವರುಂಟೆ ಎಂಬುದೇ ಕಲ್ಯಾಣ ಕರ್ನಾಟಕದ ಮೂಲಮಂತ್ರ. ಮನುಷ್ಯರು ತಿನ್ನುವ ಅನ್ನ ಬೆಳೆವ ರೈತರ ಜಮೀನಿನ ಮೇಲೆ ಭೂತಾಕಾರದ ಯಂತ್ರಗಳನ್ನು ಛೂ ಬಿಟ್ಟು, ಸರ್ಕಾರಿ ಸವಾಲು ಹಾಕುವುದು ತರವಲ್ಲ. ಕಾನೂನನ್ನು ಕಟ್ಟುವ, ಮುರಿಯುವ, ಮತ್ತೆ ಮುರಿದು ಕಟ್ಟುವ ಕಿಲಾಡಿ ಆಟಗಳಿಗೆ ಕ್ಷೇತ್ರದ ರಾಜಕಾರಣ ಸಮರ್ಥವಾಗಿ ಉತ್ತರಿಸಬೇಕಿತ್ತು. ಚಳವಳಿಗಳು ಒಗ್ಗೂಡಿ ಇಂಥ ಎಲ್ಲ ಬಗೆಯ ರೈತ ಸಂಕಟಗಳನ್ನೂ ನೇರ ಇದಿರುಗೊಳ್ಳಬೇಕು” ಎಂದು ತಿಳಿಸಿದ್ದಾರೆ.
ಬೆಲೆ ಕಾವಲು ಸಮಿತಿಯ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಕೆಳಹಟ್ಟಿ ಮಾತನಾಡಿ, “ಬೇಸಿಗೆಕಾಲದ ಒಣಭೂಮಿಯಲ್ಲಿ ಮಾಡಬೇಕಾಗಿದ್ದ ಕಾಮಗಾರಿಗಳನ್ನು, ಮುಂಗಾರು ಬೆಳೆಯುತ್ತಿರುವ ಇಳುವರಿ ಭೂಮಿಯಲ್ಲಿ ಮಾಡುತ್ತಿರುವುದು ಅಸಮಂಜಸವಾದ ಕ್ರಮ” ಎಂದು ಖಂಡಿಸಿದ್ದಾರೆ.

“ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುವ ಉತ್ತಮ ಇಳುವರಿ ಕೊಡುವ ರೈತರ ಜಮೀನಿನ ಬದಲಿಗೆ ಫಲವತ್ತಾದ ಸರ್ಕಾರಿ ಜಮೀನನ್ನೇ ಸರ್ಕಾರ ಅಚ್ಚುಕಟ್ಟು ಮಾಡಿಸಿ ರೈತರಿಗೆ ಬಿಟ್ಟುಕೊಡಲಿ. ಬಾಧಿತ ರೈತರ ಅಹವಾಲನ್ನು ಜಿಲ್ಲಾಧಿಕಾರಿಗಳು ಕೂಡಲೇ ಆಲಿಸಬೇಕು. ತಕ್ಷಣ ರೈತರಿಗೆ ಸ್ಪಂದಿಸಬೇಕು. ಬರ ಘೋಷಿತ ಪ್ರದೇಶದ ರೈತರು ಬರದ ಬೇಗೆಗೆ ತುತ್ತಾಗಿದ್ದಾರೆ. ನಿರಂತರ ಕುಸಿಯುತ್ತಿರುವ ಕೊಬ್ಬರಿ ಬೆಲೆಯಿಂದಾಗಿ ತತ್ತರಿಸಿದ್ದಾರೆ. ಇಂಥ ಹೊತ್ತಲ್ಲಿ, ಉತ್ತಮ ಫಸಲು ಕೊಡುತ್ತಿರುವ ತೆಂಗಿನ ಮರಗಳನ್ನು ಕಡಿದು ರೈತರ ಅನ್ನಾದಾಯದ ಮೂಲ ಕಸಿದುಕೊಳ್ಳುವುದು ಅಮಾನುಷ. ಕೋರ್ಟಿನ ಅಂತಿಮ ತೀರ್ಪು ಬರುವವರೆಗಾದರೂ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಕಾಯಬೇಕು” ಎಂದು ಒತ್ತಾಯಿಸಿದ್ದಾರೆ.
ವರದಿ: ಸಂಚಲನ, ಚಿಕ್ಕನಾಯಕನ ಸೀಮೆಯಿಂದ
