ಹಮೀದ್ ಮೇಸ್ಟ್ರು ಎಂದೇ ಖ್ಯಾತರಾಗಿದ್ದ ಕವಿ, ಸಾಹಿತಿ, ಸಂಶೋಧಕ ಮತ್ತು ಉಪನ್ಯಾಸಕರಾಗಿದ್ದ ಡಾ.ಅಬ್ದುಲ್ ಹಮೀದ್’ರವರು, ತಮ್ಮ 88’ನೇ ವಯಸ್ಸಿನಲ್ಲಿ ಶುಕ್ರವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಕಳೆದ ಒಂದು ವರ್ಷದಿಂದಲೂ ವಯೋಸಹಜ ಖಾಯಿಲೆ ಮತ್ತು ಅಂಗಾಂಗ ವೈಫಲ್ಯ ಮತ್ತು ಹೃದಯಸಂಬಂಧೀ ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ತಮ್ಮ ಮಡದಿ ಮತ್ತು ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಇವರ ಅಪಾರ ಶಿಷ್ಯಂದಿರು ಮತ್ತು ಅಭಿಮಾನಿ ಬಳಗ ಕಂಬನಿ ಮಿಡಿದಿದೆ. ಶನಿವಾರ ಬೆಳಗ್ಗೆ ಹಂದನಕೆರೆ ಗ್ರಾಮದ ಖಬರಸ್ತಾಣದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 5’ನೇ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿದ್ದ ಡಾ ಅಬ್ದುಲ್ ಹಮೀದರಿಗೆ ಹಂದನಕೆರೆ ತೋಟದ ಮನೆಯೆಂದರೆ ಪಂಚಪ್ರಾಣ. ಹಾಗಾಗಿ, ಅವರ ಅಂತಿಮ ದರ್ಶನಕ್ಕೆ ಅಲ್ಲೇ ವ್ಯವಸ್ಥೆ ಮಾಡಲಾಗಿದೆ. ಮಾಜಿ ಮಂತ್ರಿ ಮತ್ತು ಮಾಜಿ ಶಾಸಕರಾದ ಜೆ ಸಿ ಮಾಧುಸ್ವಾಮಿಯವರು, ಹಮೀದ್’ರವರ ಮನೆಗೆ ಭೇಟಿಕೊಟ್ಟು ಅಂತಿಮದರ್ಶನ ಪಡೆದು, ಸಂತಾಪ ಸೂಚಿಸಿ, ಆತ್ಮಕ್ಕೆ ಶಾಂತಿ ಕೋರಿದರು. ತಹಸೀಲ್ದಾರ್ ಕೆ ಪುರಂದರ್’ರವರು ಹಾಗೂ ಮತ್ತಿತರ ಗಣ್ಯರು ಹಮೀದ್ ಮೇಸ್ಟ್ರ ಸ್ವಗೃಹಕ್ಕೆ ಭೇಟಿಕೊಟ್ಟು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಕನ್ನಡದ ಹಮೀದ ::
ನಮ್ದೂಕೆ ನಿಮ್ದೂಕೆ ಎಂದು ಒಂದು ಸಮುದಾಯದ ಕನ್ನಡ ಭಾಷಾ ಬಳಕೆಯನ್ನೇ ಕತೆ, ನಾಟಕ, ಸಿನೆಮಾಗಳಲ್ಲೆಲ್ಲಾ ಮೂದಲಿಸಿ ಸಾರ್ವಜನಿಕ ಮಸ್ಕಿರಿ ಮಾಡುತ್ತಿದ್ದ ಕಾಲದಲ್ಲಿ, ಹಂದನಕೆರೆಯ ಅಬ್ದುಲ್ ಹಮೀದ್ ಕನ್ನಡದ ಮೇಸ್ಟ್ರಾಗಿ ಬಂದವರು. ಕನ್ನಡ, ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಇವರು, “ನಮ್ದೂಕೆ-ನಿಮ್ದೂಕೆ ಕನ್ನಡ ನಿಮ್ದು” ಎಂದು ಮೂದಲಿಸುತ್ತಿದ್ದವರನ್ನು ತಮ್ಮ ಕನ್ನಡ ಪ್ರೇಮ ಮತ್ತು ಪಾಂಡಿತ್ಯದ ಮೂಲಕವೇ ಮೂಕರನ್ನಾಗಿಸಿದವರು. ಒಂದಿಡೀ ಸಮುದಾಯವನ್ನು ಯಾವ ಕಾರಣಕ್ಕಾಗಿ ಮೂದಲಿಸಿ, ನಗೆಪಾಟಲಿಗೀಡು ಮಾಡಲಾಗುತ್ತಿತ್ತೋ ಅದನ್ನೇ ಹತಾರವನ್ನಾಗಿ ಬಳಸಿ ಆಯಿಡೀ ಸಂಕುಚಿತ ಸಮಾಜಗಳಿಗೆ ಮೇಸ್ಟ್ರಾಗಿ ಬಂದವರು. ತಮ್ಮ ಮೇಸ್ಟ್ರು ವೃತ್ತಿಯನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ ಶ್ರದ್ಧೆಯಿಂದ ಮಾಡಿದವರು. ಹಂದನಕೆರೆ ಮತ್ತು ಸುತ್ತಮುತ್ತಲಿನ ಛಪ್ಪನ್ನೈವತ್ತಾರು ಹಳ್ಳಿಗಳ ಸಾವಿರಾರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಕನ್ನಡ ಮೇಸ್ಟ್ರಾಗಿದ್ದವರು. ಜೊತೆಗೆ ಸಮಾಜದ ಕಂದಾಚಾರಗಳು, ತಾರತಮ್ಯ, ಅಸಮಾನತೆ, ಹೆಣ್ಣುಮಕ್ಕಳ ಶಿಕ್ಷಣ, ಸಾಕ್ಷರತೆ ಮುಂತಾದವಕ್ಕೆ ಶ್ರಮಿಸಿದವರು. ಹಿಂದಿ ಭಾಷೆಯಲ್ಲೂ ಅಗಾಧ ಪಾಂಡಿತ್ಯ ಹೊಂದಿದ್ದರಾದರೂ ಕನ್ನಡದ ಹಮೀದ’ನಾಗೇ ಎಂದೆಂದೂ ಉಳಿದುಹೋದವರು.

ಹಿನ್ನೆಲೆ ::
ಹಂದನಕೆರೆ ಗ್ರಾಮದ ಮಹಮದ್ ಬುಡೇನ್ ಸಾಬ್ ಮತ್ತು ಮಹಬೂಬಾ ಬೀ’ರವರ ಮನೆಯಲ್ಲಿ 1937’ರ ಏಪ್ರಿಲ್ 15 ರಲ್ಲಿ ಜನಿಸಿದ ಅಬ್ದುಲ್ ಹಮೀದ್, ಬಿಎ.ಬಿಎಡ್.ಎಂಎ(ಕನ್ನಡ) ಪದವಿಗಳನ್ನು ಗಳಿಸಿದ್ದವರು. ಜೊತೆಗೆ ಕನ್ನಡರತ್ನ ಮತ್ತು ಹಿಂದಿ ವಿಶಾರದ ಪರೀಕ್ಷಾ-ಪದವಿಗಳನ್ನೂ ಪಡೆದವರು. ‘ಸೂಫಿ ಪಥ ಮತ್ತು ಶರಣ ಪಥಗಳ ತೌಲನಿಕ ಅಧ್ಯಯನ’ ಎಂಬ ಮಹಾಪ್ರಬಂಧವನ್ನು ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದರು.
ಕೃಷಿ, ಶರಣ ಮತ್ತು ಸೂಫಿ ಪರಂಪರೆ, ಜಾನಪದ ಪರಂಪರೆಗಳ ಸಂಪಾದನೆ, ಭಾವೈಕ್ಯತಾ ಪರಂಪರೆಗಳ ಪುಸ್ತಿಕೆ ತರಹದ ಹತ್ತು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದವರು. ಕನ್ನಡ ನಾಟಕಗಳು ಮತ್ತು ಕನ್ನಡ ನೆಲಮೂಲದ ಹಲವಾರು ಕಥನಗಳನ್ನು ಹಿಂದಿ ಭಾಷೆಗೆ ಅನುವಾದಿಸಿ, ಹೊರರಾಜ್ಯಗಳಲ್ಲೂ ಕನ್ನಡಕಂಪು ಹರಡಿ ಸಂಭ್ರಮಿಸಿದ್ದವರು.
ಸಂಶೋಧನಾ ಕೃತಿಗಳಾದ ಹಜ಼ರತ್ ನವಾಜ಼್, ಸಿದ್ಧಾಂತ ಶಿಖಾಮಣಿಯಲ್ಲಿ ಸಾರ್ವತ್ರಿಕ ಮೌಲ್ಯಗಳು ಹಾಗೂ ಸಾಮಾಜಿಕ ಅನಿಷ್ಟಗಳು, ನೆಹರೂ ಮತ್ತು ಸಂಸದರು ತರಹದ ಕೃತಿಗಳನ್ನು ರಚಿಸಿದ್ದರಲ್ಲದೆ, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರ ಕುರಿತು ‘ಜಂಗಮ್ ಕಿ ಓರ್’ ಎಂಬ ಹಿಂದಿ ಅನುವಾದಿತವನ್ನೂ ಬರೆದಿದ್ದರು. ಸುಮಾರು ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ಇವರು, ಉತ್ತಮ ವಾಗ್ಮಿ ಹಾಗೂ ಚಿಂತನಾಶೀಲ ವ್ಯಕ್ತಿಯಾಗಿದ್ದವರು. ಹಲವಾರು ವಿಚಾರ ಸಂಕಿರಣಗಳಲ್ಲಿ ಮತ್ತು ನೂರಾರು ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡುತ್ತಾ ಸೂಫಿ ಮತ್ತು ಶರಣ ತತ್ವಗಳ ಮಾನವೀಯ ಅಂತಃಕರಣವನ್ನು ವಿದ್ಯಾರ್ಥಿಗಳಲ್ಲಿ ಸಾರುತ್ತಾ ಬಂದವರು. ನೂರಾರು ಪ್ರಶಸ್ತಿ ಪುರಸ್ಕಾರಗಳಿಗೂ ಇವರು ಭಾಜನರಾಗಿದ್ದಾರೆ.

ಜಿಲ್ಲಾ ಮತ್ತು ತಾಲ್ಲೂಕು ವತಿಯಿಂದ ಕಸಾಪ ಸಂತಾಪ ::
ಚಿಕ್ಕನಾಯಕನಹಳ್ಳಿ : ಸೂಫಿ ತತ್ವ ಮತ್ತು ಶರಣ ತತ್ವಗಳ ಬಗ್ಗೆ ಸುದೀರ್ಘ ಅಧ್ಯಯನ ಹಾಗೂ ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸಿದ್ದ ಡಾ. ಅಬ್ದುಲ್ ಹಮೀದ್, ತಾಲ್ಲೂಕಿನ ಹಂದನಕೆರೆ ಗ್ರಾಮದಲ್ಲಿ ಕಳೆದ ಮೂರು ದಶಕಗಳಿಗೂ ಹೆಚ್ಚಿನ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದವರು. ಅವರ ಅಗಲಿಕೆ ಅಪಾರ ಶಿಷ್ಯವೃಂದ ಹಾಗೂ ಅಭಿಮಾನಿ ಬಳಗಕ್ಕೆ ನೋವುಂಟು ಮಾಡಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷರಾದ ಕೆ. ಎಸ್. ಸಿದ್ದಲಿಂಗಪ್ಪ ಸಂತಾಪ ಸೂಚಿಸಿದರು.
ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಅಪರೂಪದ ನೈಪುಣ್ಯತೆ ಹೊಂದಿದ್ದ ಹಮೀದರು, ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಂಥವರು. ಅವರ ಈ ಅಗಲುವಿಕೆ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾಗದ ನಷ್ಟ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ ಎಸ್ ರವಿಕುಮಾರ್ ಕಟ್ಟೆಮನೆ ಸಂತಾಪ ಸೂಚಿಸಿ ಮಾತನಾಡುತ್ತಾ, ಅಬ್ದುಲ್ ಹಮೀದ್’ರವರ ಜೊತೆಗಿನ ಒಡನಾಟ ಸ್ಮರಿಸಿ, ಹಂದನಕೆರೆಯಲ್ಲಿ ನಡೆದ 5 ನೇ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದ ಅವರು ಆಯೋಜನೆಯ ಎಲ್ಲ ಕೆಲಸಕಾರ್ಯಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ಸಮ್ಮೇಳನದ ಅಭೂತಪೂರ್ವ ಯಶಸ್ವಿಗೆ ಕಾರಣರಾಗಿದ್ದರು. ಕನ್ನಡ ಭಾಷೆಯ ಮೇಲೆ ಅವರಲ್ಲಿದ್ದ ತುಡಿತ ಮತ್ತು ಪ್ರೀತಿಯೇ ಅವರಿಂದ ಸೂಫಿ ಪಥ ಮತ್ತು ಶರಣ ಪಥಗಳ ತೌಲನಿಕ ಅಧ್ಯಯನ ನಡೆಸಿ ಮಹಾಪ್ರಬಂಧ ಮಂಡಿಸುವಂತೆ ಮಾಡಿದ್ದು. ಸಮಾಜಮುಖಿ ಕಾರ್ಯಗಳಿಗೆ ದುಡಿದು ಉತ್ತಮ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದ ಅವರ ಅವರ ಅಗಲುವಿಕೆ ತಾಲ್ಲೂಕಿಗೆ ನಿಜಕ್ಕೂ ಬಲುದೊಡ್ಡ ನಷ್ಟ ಎಂದರು.
ತಾಲ್ಲೂಕು ಕಸಾಪ ಕಾರ್ಯದರ್ಶಿ ಸಿ ಎ. ನಿರೂಪ ರಾವತ್, ಡಾ. ರವಿಕುಮಾರ್, ಕೋಶಾಧ್ಯಕ್ಷ ಎಂ. ಎಸ್. ಯೋಗೀಶ್ ಕುಮಾರ್, ಪರಿಷತ್ತಿನ ಸಂಚಾಲಕ ಗುರುಮೂರ್ತಿ ಕೊಟ್ಟಿಗೆಮನೆ, ಮತ್ತು ಸಿ ಹೆಚ್ ಗಂಗಾಧರ್ ಮಗ್ಗದಮನೆ, ಕಿರಣ್ ನಿಶಾನಿ, ನವೀನ್ ರಾವತ್ ಇತರರು ಸಂತಾಪ ಸಭೆಯಲ್ಲಿದ್ದರು.
ವರದಿ- ಸಂಚಲನ
ಚಿಕ್ಕನಾಯಕನ ಸೀಮೆಯಿಂದ