ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ, ವಡೇರಹಳ್ಳಿ, ದುಗಡಿಹಳ್ಳಿ, ಗೋಡೆಕೆರೆ, ಮೇಲನಹಳ್ಳಿ ಗ್ರಾಮಗಳ ತೆಂಗು ಬೆಳೆಗಾರ ರೈತರ ತೋಟಗಳಲ್ಲಿ ಸಹಜ ಕೃಷಿ ಅನುಷ್ಠಾನ ತರಬೇತಿ-ಪ್ರಾತ್ಯಕ್ಷಿಕೆ ನಡೆಸಲಾಯಿತು.
ಹೊನ್ನೇಬಾಗಿ ಗ್ರಾಮ ಪಂಚಾಯತಿಯ ಮೇಲನಹಳ್ಳಿ ಗ್ರಾಮದ ಹರೀಶ್ ಮಲ್ಲಿಕಾರ್ಜುನಯ್ಯನವರ ತೆಂಗಿನ ತೋಟದಲ್ಲಿ ಸೇರಿದ್ದ ರೈತರಿಗಾಗಿ ರೈತ ಮಿತ್ರರಾದ ಮಲ್ಲಿಕಾರ್ಜುನ ಭಟ್ರಳ್ಳಿ ಮತ್ತು ತರಬೇನಹಳ್ಳಿ ಷಡಾಕ್ಷರಿ ಸಹಜ ಕೃಷಿ ಅನುಷ್ಠಾನದ ತರಬೇತಿ-ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಸುಮಾರು ಇಪ್ಪತ್ತು ಮಂದಿ ರೈತರು ಈ ತರಬೇತಿ-ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು.
“ರೋಗ-ನಿರೋಧಕ ಮತ್ತು ಹೆಚ್ಚಿನ ಇಳುವರಿ ನೀಡಬಲ್ಲ ಈ ಮಾದರಿಯ ಸಹಜಕೃಷಿಯೇ ಸರ್ವ ರೋಗಕ್ಕೂ ಮದ್ದು ಎಂಬುದಕ್ಕೆ ತಾಲೂಕಿನ ರೈತರೇ ಮೊದಲ ಸಾಕ್ಷಿಯಾಗಲಿದ್ದಾರೆ” ಎಂದು ಮಲ್ಲಿಕಾರ್ಜುನ ಭಟ್ರಳ್ಳಿ ವಿವರಿಸಿದರು.
“ಸಹಜ ಕೃಷಿ ಅನುಷ್ಠಾನ ಯೋಜನೆಯ ಮಾದರಿಯಲ್ಲಿ ತೆಂಗು ಬೆಳೆಯುವುದರಿಂದ ಮುಂದಿನ 4 ವರ್ಷಗಳಲ್ಲಿ ತಾಲೂಕಿನ ತೆಂಗು ತೋಟ ಮತ್ತು ತೆಂಗು ಬೆಳೆಗಾರ ಭವಿಷ್ಯದ ಕೃಷಿಗೆ ಆಮೂಲಾಗ್ರ ಬದಲಾವಣೆಯನ್ನು ತರಬಹುದು. ದಿನನಿತ್ಯ ಸುಸ್ತು ಮತ್ತು ಸೋಲನ್ನೇ ಉಂಡಿರುವ ರೈತ ಸಮಾಜ ತಮ್ಮ ತೋಟಗಳಲ್ಲಿ ಸಹಜಕೃಷಿ ಅನುಷ್ಠಾನ ಮಾದರಿಯಲ್ಲಿ ಅತ್ಯುತ್ತಮವಾದ ಬೆಳೆ ತೆಗೆಯಲು ಸಾಧ್ಯವಿದೆ” ಎಂದು ರೈತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಹರೀಶ್ ಮಲ್ಲಿಕಾರ್ಜುನಯ್ಯ, ನವೀನ್, ಬೆಟ್ಟಪ್ಪ, ತರಬೇನಳ್ಳಿ ಷಡಕ್ಷರಿ ಹಾಗೂ ರೈತ ಮಹಿಳೆಯರು ಉಪಸ್ಥಿತರಿದ್ದರು.
ವರದಿ: ಸಂಚಲನ, ಚಿಕ್ಕನಾಯಕನ ಸೀಮೆಯಿಂದ
