ಚಿಕ್ಕನಾಯಕನಹಳ್ಳಿ ತಾತಯ್ಯನ ಉರೂಸ್: ನೆಲ-ಸಮುದಾಯಗಳಿಗೆ ಇದು ಅಧಿಕಾರದಾಚೆಗಿನ ಅಧಿಕಾರವಿದ್ದಂತೆ!

Date:

Advertisements

ಎಲ್ಲರ ತಾತಯ್ಯನಾಗಿ ಸಾಮರಸ್ಯದ ಹೃದಯರಂಗದಲ್ಲಿ ನೆಲೆಸಿರುವ ಜನ-ಮಾನ್ಯರ ಪಾಲಿನ ಪವಾಡ-ಪುರುಷ, ಹಜ಼ರತ್ ಮೊಹಿಯುದ್ದೀನ್ ಶಾ ಖಾದ್ರಿಯವರ 65’ನೇ ವರ್ಷದ ಉರೂಸನ್ನು ಆಯೋಜಿಸಲಾಗುತ್ತಿದೆ. ಇದೇ ಫೆಬ್ರವರಿ ತಿಂಗಳ 17, 18, 19’ರ ಮೂರು ದಿನಗಳ ಕಾಲ ಚಿಕ್ಕನಾಯಕನಹಳ್ಳಿ ಪಟ್ಟಣದ ತಾತಯ್ಯನ ಗೋರಿಯಲ್ಲಿ ಈ ಉರೂಸ್ ಆಚರಿಸಲಾಗುವುದು.

ಪಟ್ಟಣದ ಹೃದಯಭಾಗದಲ್ಲಿ ನೆಲೆಗೊಂಡಿರುವ ನಾನಾವಲಿ-ತಾತಯ್ಯನ ಗೋರಿ, ದೀನ-ದಮನಿತರ ಸಂಕಟ ಪರಿಹರಿಸುವ ಪವಾಡ-ಪುರುಷನ ಶಕ್ತಿಸೌಧದಂತೆ ಬಹುಜನರ ಎದೆಯಲ್ಲಿ ಕಂಗೊಳಿಸುತ್ತಿದೆ. ಬಡವರ, ಬಲಹೀನರ ಬದುಕು ಹಸನುಗೊಳಿಸುವ ಕನಸಿನ ಆಶಾ-ಗುಂಬಜ಼ಿನಂತೆಯೂ ಅದು ಹೊಳೆಯುತ್ತಿದೆ.

WhatsApp Image 2025 02 13 at 4.53.12 PM

ನಾನಾವಲಿ, ಬಾಬಯ್ಯ, ತಾತಯ್ಯ ಎಂದೆಲ್ಲ ಕರೆಯಲ್ಪಡುವ ಸೈಯದ್ ಮೊಹಿಯುದ್ದೀನ್ ಶಾ ಖಾದ್ರಿ’ಯವರ ಉರೂಸಿನಲ್ಲಿ, ಮುಜ಼ಾವ್ವರ್ ಮತ್ತು ಮುರ್ಶೆದಾಗಳ ಸಹಯೋಗದಲ್ಲಿ ಸಂದಲ್-ಮೆರವಣಿಗೆ, ಫಾತೆಹಾ-ಖಾನಿ ನೆರವೇರುವುದರ ಮೂಲಕ ಉರೂಸಿಗೆ ಚಾಲನೆ ದೊರೆಯುತ್ತದೆ. ನಂತರ, ಮುರ್ಶೆದ್ ಮತ್ತು ಮುರೀದ್-ಫಕೀರ್’ರ ಕರಾಮತ್ತು ಪ್ರದರ್ಶನ, ಖವ್ವಾಲಿ ಮೆಹಫಿಲ್, ಗೀತ-ಗಾಯನ ತರಹದ ಸಡಗರಗಳು ಸಂಭ್ರಮಿಸುತ್ತವೆ.

Advertisements

ಈ ಉರೂಸ್‌ನಲ್ಲಿ ತಾಲ್ಲೂಕು-ಜಿಲ್ಲೆಯ ಜನರಷ್ಟೇ ಅಲ್ಲದೆ, ರಾಜ್ಯ-ಹೊರರಾಜ್ಯದಿಂದಲೂ ಸಹಸ್ರಾರು‌ ಮಂದಿ ಬಹುಜನರು ಭಾಗಿಯಾಗುತ್ತಾರೆ. ಸ್ಥಳೀಯ ರಾಜಕೀಯ ಮುಖಂಡರು, ಜನ-ಪ್ರತಿನಿಧಿಗಳು, ಸರ್ವಪಕ್ಷ ಸದಸ್ಯರು ಹಾಗೂ ಸಾಮಾಜಿಕ ಗಣ್ಯರು ಸಮಾನರಾಗಿ ಪಾಲ್ಗೊಳ್ಳುತ್ತಾರೆ.

ನಿರ್ವಾಣ-ಗದ್ದಿಗೆಯ ಗೆಳೆತನದ ನಂಟನ್ನು ಹೊಂದಿದ್ದ ಸೈಯದ್ ಮೊಹಿಯುದ್ದೀನ್ ಶಾ ಖಾದ್ರಿ, ಈ ಭಾಗದಲ್ಲಿ ಪವಾಡ-ಪುರುಷ’ನಾಗಿ ಜನಜನಿತ. ಇವರು, ಬಡವರ ಬವಣೆ ನೀಗಿಸಲು ನೆರವೇರಿಸಿದ ಪವಾಡಗಳು, ತನ್ನ ಇರವನ್ನೇ ಬಲಿಯೀದು ಪ್ರಕಟಿಸಿದ ಪವಾಡಗಳು, ಊರ ಶ್ರೇಯಸ್ಸಿಗಾಗಿ ಜರುಗಿಸಿದ ಪವಾಡಗಳು, ಇನ್ನೂ ಮುಂತಾದ ಹಲಬಗೆಯ ದಂತಕಥೆಗಳು ನಾನಾವಲಿ-ತಾತಯ್ಯನವರ ಬಗ್ಗೆ‌ ಈ ಭಾಗದ ಜನಪದರಲ್ಲಿ ಪ್ರಚಲಿತದಲ್ಲಿವೆ. ಸೂಫಿ-ಸಂತ, ಪೀರ-ಫಕೀರ ಮಾದರಿಯ ಶಿಷ್ಟಗ್ರಹಿಕೆಯ ಆಚೆಗೂ ತಾತಯ್ಯ ಇಲ್ಲಿ ಒಂದು ಜಾನಪದ’ದಂತೆ ಜನಮಾನಸದಲ್ಲಿ ನೆಲೆ ನಿಂತಿರುವುದು ವಿಶಿಷ್ಟ. ತಾತಯ್ಯನ ಕುದುರೆ, ಫಾತಿಹಾಖಾನಿಯ ಸಕ್ರೆ-ಕಡ್ಲೆ, ಗುಲಾಬಿ-ಪಕಳೆ, ಹಸುರು-ಕೇಸರಿ ಛಾದರ, ಅತ್ತರು-ಅಗರುಬತ್ತಿಗಳ ಘಮಲು, ತಾತಯ್ಯನ ಗೋರಿಯ ಗುಂಬಜ಼ು, ತಾತಯ್ಯನ ಉರುಸ್ಸು, ಉರುಸ್ಸಿನ ಹಿಂದೆ-ಮುಂದೆ ಹಳ್ಳಳ್ಳಿಗೆ ಬರುವ ಪೀರ್-ಮುರ್ಶೆದರು, ಹಳ್ಳಿಮಕ್ಕಳಿಗೆ ಅವರು ಕೊಡುವ ಸಕ್ರೆ-ಕಡ್ಲೆ, ಎಲ್ಲ ಎಲ್ಲವೂ ಈ ಭಾಗದ ಬಹುಜನರ ಬಾಲ್ಯಕಾಲದ ಸ್ಮೃತಿಗಳಾಗಿ ಶಾಶ್ವತ ನೆಲೆಸಿವೆ. ನಾನಾವಲಿ-ತಾತಯ್ಯ ಈ ಭಾಗಕ್ಕೆ ದಕ್ಕಿದ ಸಂತ ಅಷ್ಟೇ ಅಲ್ಲ ;‌ ಇಲ್ಲಿನ ಜಾನಪದ ಜೀವಂತ.

WhatsApp Image 2025 02 13 at 4.53.13 PM

ಅರಬೀಯ ಶಾಬ್ಧಿಕಾರ್ಥದಲ್ಲಿ ನೋಡಿದರೆ, ಉರುಸ್ ಎಂಬುದು ವಿವಾಹ ಎಂದರ್ಥವು. ಭಾರತದ ಪ್ರಧಾನ ಸೂಫಿ ಸಿಲ್’ಸಿಲಾ’ಗಳಾದ ನಕ್ಷಬಂದಿಯಾ, ಸುಹ್ರಾವರ್ದಿಯಾ, ಚಿಷ್ತಿಯಾ ಹಾಗೂ ಖಾದ್ರಿಯಾ ಪರಂಪರೆಗಳಲ್ಲಿ ಸೂಫಿ-ಸಂತ’ರ ಪುಣ್ಯತಿಥಿಯಂತೆ ಉರುಸ್ ಆಚರಿಸಲ್ಪಡುತ್ತದೆ. ಇದನ್ನು ನವೋಲ್ಲಾಸದ ಸಂಭ್ರಮ ಸಡಗರದ ಆಚರಣೆಯಾಗಿ ಸಂಭ್ರಮಿಸಲಾಗುತ್ತದೆ. ಭಾರತದಲ್ಲಿ ಇದು ರಾಜಸ್ತಾನದ ಅಜ್ಮೇರ್’ನಿಂದ ಪ್ರಚಲಿತಕ್ಕೆ ಬಂತು. ಖವ್ವಾಲಿ, ಜ಼ಿಕ್ರ್, ಸಮಾ ಮತ್ತು ಫಾತಿಹಾ-ಖಾನಿ ಆಚರಣೆಗಳೇ ಉರುಸ್ಸುಗಳಲ್ಲಿ ಪ್ರಧಾನ.

ನಾನಾವಲಿ-ತಾತಯ್ಯ ದರ್ಘಾ:
ಸಹಿಷ್ಣುತೆ, ಸಹಬಾಳ್ಮೆ, ಸಮಾನತೆ ಮತ್ತು ಸಮ-ಸಮಾಜದ ಪರಿಕಲ್ಪನೆಯೇ ಸೂಫಿ ತತ್ವಧಾರೆ. ಇದೇ ಕಾರಣದಿಂದಾಗೇ ಬಹುಶಃ, ಚರಿತ್ರೆಯುದ್ದಕ್ಕೂ ಪ್ರಭುತ್ವಕ್ಕೆ ಎದುರಾಗಿ ನಿಂತ ಈ ಸೂಫಿಗಳು ಬಿಡಿಸಲಾಗದ ಕಗ್ಗಂಟಿನಂತೆ ಕಂಡಿರುವುದು. ಪ್ರಭುತ್ವದ ಹಲಬಗೆಯ ದಮನಗಳಿಂದ ನೋಯುತ್ತಿದ್ದ ಪ್ರಜಾ-ಸಮೂಹದ ಪರವಾಗಿ ಸೂಫಿಗಳು ಸದಾ ನಿಲ್ಲುತ್ತಿದ್ದರು. ಪ್ರಭುತ್ವಕ್ಕಿದು ಸಹನೀಯವಲ್ಲದ ಕೃತ್ಯ. ಆದರೆ, ಸೂಫಿ ಪರಂಪರೆಯ ಸಂತ-ಫಕೀರರಲ್ಲಿದ್ದ ನೈತಿಕ-ಶಕ್ತಿ ಪ್ರಭುತ್ವವನ್ನು ಕೈ ಕಟ್ಟಿ ಕೂರುವಂತೆ ಮಾಡಿಹಾಕಿತ್ತು. ಕಾಲಕ್ರಮೇಣ ಇದನ್ನು ಗ್ರಹಿಸಿದ ಬಹುಜನ ದೀನ-ದಮನಿತರು, ಬಲಶಾಲಿ ಪ್ರಭುತ್ವದ ಎದುರು ನಿಲ್ಲಬಲ್ಲ ಸೂಫಿ ಸಂತ-ಫಕೀರರ ಆಶ್ರಯ ಅರಸಿ ಅವರ ಹಿಂದೆ ಬಂದರು. ತನ್ಮೂಲಕ ಜಾತ್ಯತೀತ ಹಾಗೂ ಧರ್ಮನಿರಪೇಕ್ಷ ವಿಶ್ವ-ಬಂಧುರತೆಯಲ್ಲಿ ಸೂಫಿಜ಼ಂ ಸಾಕಾರಗೊಂಡಿತು. ಇಂಥ ವಿಶ್ವ-ಬಂಧುತ್ವದ ಸಾಕ್ಷಾತ್ಕಾರಕ್ಕೆ ಎಡೆ ಮಾಡಿಕೊಟ್ಟ ಏಕೇಶ್ವರ-ಪ್ರೇಮದ ಸೂಫಿ-ಸಂತರನ್ನು ಜನ ಇನ್ನಿಲ್ಲದಷ್ಟು ಪ್ರೀತಿಸಹತ್ತಿದ್ದರು. ಅವರ ಪ್ರೇಮ-ಪರಾಕಾಷ್ಠೆಗೆ ಸಂಕೇತವಾಗಿ ಆ ಸಂತರ ಅಗಲಿಕೆಯ ನಂತರ, ಅವರ ಸಮಾಧಿಗಳನ್ನು ಗೋರಿಗಳನ್ನಾಗಿ ಮಾಡಿ, ಅಲ್ಲಿ ದರ್ಘಾ ನಿರ್ಮಿಸಲಾಗುತ್ತಿತ್ತು. ಆ ದರ್ಘಾಗಳಲ್ಲಿ, ಸಂತರು ರೂಪಿಸಿ ನಿರೂಪಿಸಿಹೋದ ಆಚರಣೆಗಳು ಜರುಗಲ್ಪಟ್ಟವು. ಹಾಗೇ, ಉರೂಸ್ ಆಚರಣೆಗಳೂ ಪ್ರಚಲಿತಕ್ಕೆ ಬಂದವು.

WhatsApp Image 2025 02 13 at 4.53.14 PM 1

ಸ್ವರ್ಗದ ನಾಲ್ಕು ದ್ವಾರಗಳ ಸಂಕೇತದಂತೆ ನಾಲ್ಕೂ‌ ದಿಕ್ಕಿಗೂ ತನ್ನ ಸುವಿಶಾಲ ದ್ವಾರಗಳನ್ನು ಸದಾ ತೆರೆದೇ ಇರುವ ದರ್ಘಾ ಇಮಾರತ್ತುಗಳು, ಆ್ಯಂಟಿ-ಎಸ್ಟಾಬ್ಲಿಷ್’ಮೆಂಟ್’ನ ಪ್ರಬಲ ಜನ-ಸೌಧ’ಗಳು. ವ್ಯವಸ್ಥಿತ ನಿಷ್ಕಾರುಣ್ಯದ ಅಧಿಕಾರ ಕೇಂದ್ರಗಳಿಂದ ದೂರದ ಗುಡ್ಡಗಾಡು-ಶಿಲಾಬೆಟ್ಟ-ಘಟ್ಟ-ಕಣಿವೆ-ಕಂದರಗಳ ದುರ್ಮಮ’ನಿಸರ್ಗದ ತಪ್ಪಲಲ್ಲಿ ಅಥವಾ ನಿರ್ಜನ ಬಟಾಬಯಲಲ್ಲಿ ದರ್ಘಾ-ಗೋರಿಗಳು ನೆಲೆಗೊಂಡಿರುತ್ತವೆ!

ಇವು, ಯಾವನೇ ಒಬ್ಬ ಸಿಕಂದರ ಅಥವಾ ಅಲೆಕ್ಝಾಂಡೆರ’ನ ಪ್ರಭುತ್ವಾಧಿಕಾರಕ್ಕೂ ಸೀಮೆ-ಸರಹದ್ದುಗಳನ್ನು ನಿರ್ಧರಿಸಿ ಗುರ್ತಿಸಿ ಅವರ ಪ್ರಭುತ್ವಾಧಿಕಾರವನ್ನು ನಿರ್ಬಂಧಿಸಿಟ್ಟಂತೆ. ಜನ-ಮಾನಸಕ್ಕೆ ಪ್ರೀತಿಪಾತ್ರರಾದ ಸಂತರು ಚಿರ-ಶಾಂತಿಯಲ್ಲಿರುವ ದರ್ಘಾ-ಇಮಾರತ್ತಿನ ಕಂಪೋಂಡು-ಗೋಡೆಯನ್ನೂ ಅರಸ ದಾಟಕೂಡದು. ಪ್ರಭುತ್ವದ ಅಧಿಕಾರ ದರ್ಘಾ ಗೇಟಿನ ಆಚೆಗೇ ಸೀಮಿತ. ಅಲ್ಲಿಂದ ಮುಂದೆ ಶರಣನಿಗೆ ಮಾತ್ರ ಪ್ರವೇಶ. ದರ್ಘಾ ಒಳಾವರಣದಲ್ಲಿ ಶರಣನಿಗೆ, ಶಾಶ್ವತ-ಶರಣು ಹೋದವಗೆ ಮಾತ್ರ ಅವಕಾಶ. ಅರಸು-ಪ್ರಭುತ್ವಕ್ಕೆ ಅಲ್ಲಿ ನಿಷೇಧ. ಅವರು ಅರಸೊತ್ತಿಗೆಯ ಎಲ್ಲ ಬಿರುದಾವಳಿ ಲಾಂಛನಗಳನ್ನು ಕಳಚಿಟ್ಟು ಬಂದಲ್ಲಿ, ಅವರಿಗೂ ಆಗ ನಿರ್ಬಂಧವಿಲ್ಲ. ದರ್ಘಾ ಆಶ್ರಯದಲ್ಲಿ ಶರಣು ಬಂದ ಅಸಹಾಯಕನನ್ನು ಪ್ರಭುತ್ವ ಸೆರೆ ಹಿಡಿಯಕೂಡದು. ಆತ ಅಥವಾ ಆತನ ಕುಟುಂಬವನ್ನು ವೃಥಾ ಶಿಕ್ಷಿಸುವಂತೆಯೂ ಇಲ್ಲ. ದರ್ಘಾ ಆವರಣ ಆಶ್ರಯಿಸಿದಾತ ಸ್ವರ್ಗದ ನಾಲ್ಕು ದ್ವಾರಗಳನ್ನು ಪ್ರವೇಶಿಸಿದಂತೆಯೇ ಸೈ. ಶಾಶ್ವತವಾಗಿ ಶರಣು ಸಂದಂತೆಯೇ ಸೈ.

WhatsApp Image 2025 02 13 at 4.53.14 PM

ಭಾರತದ ಸೂಫಿ-ಸಿಲ್’ಸಿಲಾ ಪರಂಪರೆಗಳಲ್ಲಿ ಪ್ರಮುಖವಾಗಿ ನಕ್ಕಷ್’ಬಂದಿಯಾ, ಚಿಷ್ತಿಯಾ, ಸುಹ್ರಾವರ್ದಿಯಾ ಹಾಗೂ ಖಾದರಿಯಾ ಪ್ರಧಾನ-ಧಾರೆಯವು. ಚಿಕ್ಕನಾಯಕನಹಳ್ಳಿಯ ನಾನಾವಲಿ-ತಾತಯ್ಯ ಖಾದ್ರಿಯಾ-ಸಿಲ್’ಸಿಲಾ ಪರಂಪರೆಯ ಸಂತ ಎಂದು ಒಪ್ಪಲಾಗಿದೆ. ಅದರನುಸಾರ ಅವರ ಪರಂಪರೆ ಮತ್ತು ಆಚರಣೆಗಳನ್ನು ಉಳಿಸಿಕೊಳ್ಳಲಾಗಿದೆ. ಆದೇಶಾತ್ಮಕ ನಿರ್ದಿಷ್ಟ ಧಾರ್ಮಿಕ ಆಚರಣೆಗಳನ್ನು ನಿರಾಕರಿಸಿ, ದೈವ-ಪ್ರೇಮ’ದ ಭಾವಗೀತಾತ್ಮಕ ನೆಲೆಯ ಅನುರಕ್ತಿ-ಅನುಭೂತಿ-ಆರಾಧನೆ-ಆಧ್ಯಾತ್ಮಿಕತೆಗೆ ಸೂಫಿಜ಼ಂನಲ್ಲಿ ಪ್ರಾಧಾನ್ಯತೆ. ಇಲ್ಲಿ ನಿಯಮಗಳಿವೆ ; ನಿರ್ಬಂಧಗಳಿಲ್ಲ! ಇದು ಸ್ವತಂತ್ರ-ಸ್ವಚ್ಛಂದ ; ದೈವಪ್ರೇಮ-ಸಖ್ಯದಾನಂದ!

ಪ್ರಭುತ್ವ ಮತ್ತು ಪುರೋಹಿತ ಜ್ಞಾನದ ಪರಿಮಿತಿಗಳನ್ನು ದಾಟಿದ ಅನುಭಲೋಕಕ್ಕೆ ಒಡ್ಡಿಕೊಳ್ಳುವುದರ ಮೂಲಕ, ದೈವಪ್ರೇಮದ ಅನುಭೂತಿಯ ಸಾಕ್ಷಾತ್ಕಾರ‌ ಧರಿಸಲು, ಸೂಫಿ ಜ಼ಿಕ್ರ್ ಮತ್ತು ಸಮಾ’ಗಳ ಆಧ್ಯಾತ್ಮಿಕತೆ ಉರುಸ್ಸ್’ಗಳಲ್ಲಿ ತದೇಕ ಒದಗಿಬರುತ್ತದೆ. ಅಸೀಮ, ಅನಂತ, ಅಬಾಧಿತ ಪ್ರೇಮದ ಸೂಫಿ ಧಾರೆಯ ಬಹುಬಣ್ಣಗಳನ್ನು ಉರುಸ್ಸು ತೆರೆದಿಡುತ್ತದೆ. ಜೀವ-ಕಾರುಣ್ಯದ ದೈವೀಕ-ತನ್ಮಯತೆಯನ್ನು ಇಲ್ಲಿ ಸಂಭ್ರಮಿಸಲಾಗುತ್ತದೆ.

WhatsApp Image 2025 02 13 at 4.53.15 PM

ಚಿಕ್ಕನಾಯಕನಹಳ್ಳಿಯ ತಾತಯ್ಯ ಹಜ಼ರತ್ ಮೊಹಿಯುದ್ಧೀನ್ ಶಾ ಖಾದ್ರಿ’ಯವರ ಗುರುತು ಮತ್ತು ದರ್ಘಾ ಇಮಾರತ್ತು ಎರಡೂ ಸೂಫಿ ಖಾದರೀಯ(ಖಾದ್ರಿ) ಸಿಲ್’ಸಿಲಾವನ್ನೇ ಪ್ರತಿಬಿಂಬಿಸುತ್ತಿವೆ. ಇಲ್ಲಿನ ಎಲ್ಲರಲ್ಲೂ ನೆಲೆ ನಿಂತಿರುವ ನಾನಾವಲಿ-ತಾತಯ್ಯ ಇಲ್ಲಿ ಸಾಧಿಸಿರುವ ಬಹುಜನ-ಸಾಮರಸ್ಯದ ಬೆಸುಗೆ ಕಂಡರೆ, ತಾತಯ್ಯನ ಮೇಲೆ ಅಕ್ಕರೆ ಮೂಡದೇ ಇರದು!

ಈ ಸುದ್ದಿ ಓದಿದ್ದೀರಾ?:ತುಮಕೂರು | ಜೀತ ಪದ್ಧತಿ ನಿರ್ಮೂಲನೆ ನಮ್ಮೆಲ್ಲರ ಜವಾಬ್ದಾರಿ : ಜಿ.ಪ್ರಭು

ಅಧಿಕಾರದಾಚೆಗಿನ ಅಧಿಕಾರ
ಜಾತ್ರೆ, ಪರಿಸೆ, ಉರುಸು, ಉತ್ಸವಗಳು ಇಂಡಿಯಾದ ಶ್ರಮಣಧಾರೆಗಳು ಮುಂದಿಟ್ಟ, ನಿಸರ್ಗ-ವಿವೇಕವನ್ನು ಮರುಸ್ಥಾಪಿಸಿಕೊಳ್ಳುವ ಅವಕಾಶಗಳನ್ನು ಪ್ರಜ್ವಲಿಸುತ್ತವೆ. ಈ ನೆಲದ ಸಮೂಹಗಳು ಬಾಳುತ್ತಿರುವ ಜೀವನ-ಮೀಮಾಂಸೆ, ಜನರ ಬದುಕಿನ ಜೀವನಾಡಿಯಾದ ಬಹುತ್ವದ್ದು. ಹೀಗಾಗಿ ಸಮೂಹದೊಳಗಿನ ವಿವೇಕ ಬದುಕನ್ನು ಸಹನೀಯಗೊಳಿಸಿಕೊಳ್ಳಲು ತತ್ವಪದ, ಗುರುಕಾರ್ಯ, ಗುರುದೀಕ್ಷೆ, ಮುಂತಾಗಿ ಜಾತ್ರೆ, ಪರಿಸೆ, ಉರುಸು, ಉತ್ಸವಗಳನ್ನು ಸಂಭ್ರಮಿಸುತ್ತದೆ.

ನೆಲ-ಮೂಲ ಸಮುದಾಯಗಳಿಗೆ ಇದು
ಅಧಿಕಾರದಾಚೆಗಿನ ಅಧಿಕಾರವಿದ್ದಂತೆ..!

ವರದಿ: ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X