ಚಿಕ್ಕನಾಯಕನಹಳ್ಳಿ ಪಟ್ಟಣದ ಮತಿಘಟ್ಟ ಗೇಟ್ ಬಳಿಯಿರುವ ವೀರಭದ್ರೇಶ್ವರ ಇಂಜಿನಿಯರಿಂಗ್ ವರ್ಕ್ಸ್ ಆವರಣದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಸಹಯೋಗದೊಂದಿಗೆ ತಾಲೂಕು ವೆಲ್ಡಿಂಗ್ ಮಾಲೀಕರ ಮತ್ತು ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ಹಿರಿಯೂರಿನ ಅಧ್ಯಕ್ಷ ಪರಮೇಶ್, “ವೆಲ್ಡಿಂಗ್ ಕೆಲಸಗಾರರು ಮೊದಲು ಕಾರ್ಮಿಕ ಇಲಾಖೆ ಕಾರ್ಡ್ ಮಾಡಿಸಿಕೊಳ್ಳಬೇಕು. ವೆಲ್ಡಿಂಗ್ ಮಾಲೀಕರು ಮತ್ತು ಕೆಲಸಗಾರರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಲೇ ಬರುತ್ತಿದ್ದಾರೆ. ಇನ್ನು ಮುಂದೆ ಹಾಗಾಗದಂತೆ ಸಂಘ ಎಚ್ಚರ ವಹಿಸಬೇಕು” ಎಂದರು.
ಸಂಘ ಅಥವಾ ಸಂಘಟನೆಯ ಅಗತ್ಯ ಇರುವುದೇ ಕೆಲಸಗಾರ-ಕಾರ್ಮಿಕರ ಸಾಮೂಹಿಕ ಹಿತಾಸಕ್ತಿಗಳನ್ನು ಕಾಪಾಡಲಿಕ್ಕಾಗಿ. ಸರ್ಕಾರದ ವತಿಯಿಂದ ವೆಲ್ಡಿಂಗ್ ಮಾಲೀಕರು ಮತ್ತು ಕೆಲಸಗಾರರಿಗೆ ಲಭ್ಯವಿರುವ ಸೌಲಭ್ಯಗಳು, ಉದ್ದಿಮೆಗಾಗಿ ಧನಸಹಾಯ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇರುವ ಸವಲತ್ತುಗಳು, ಕೆಲಸಗಾರರ ಹೆಣ್ಣುಮಕ್ಕಳ ಮದುವೆಗಾಗಿ ಇರುವ ಸಹಾಯ-ಸೌಲಭ್ಯಗಳು ಸೇರಿದಂತೆ ಇರುವ ಎಲ್ಲ ಅನುಕೂಲಗಳನ್ನು ವಿವರಿಸಿದರು.
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ತುಮಕೂರು ಜಿಲ್ಲಾಧ್ಯಕ್ಷರಾದ ಪ್ರಸನ್ನ ನಾಡಿಗರ್ ಮಾತನಾಡಿ,” ಸಂಘ, ಸಂಘಟನೆಯ ಮಹತ್ವವನ್ನು ಅರಿಯದ ಹೊರತು, ಕಾರ್ಮಿಕರ ಏಳಿಗೆ ಕುಂಠಿತಗೊಳ್ಳುತ್ತದೆ. ತಾಲೂಕಿನ ವೆಲ್ಡಿಂಗ್ ಮಾಲೀಕರು ಹಾಗೂ ಕೆಲಸಗಾರರು ಸಂಘಟನೆಯ ಶಕ್ತಿಯ ಮೂಲಕ ತಮಗಿರುವ ಎಲ್ಲ ಬಗೆಯ ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ನಾವು ಈ ಸಮಾಜ ಮತ್ತು ವ್ಯವಸ್ಥೆಯ ಅವಿಭಾಜ್ಯ ಅಂಗವೇ ಸರಿ ಎಂಬುದನ್ನು ವೆಲ್ಡಿಂಗ್ ಕೆಲಸಗಾರರು ಮೊದಲು ಮನವರಿಕೆ ಮಾಡಿಕೊಳ್ಳಬೇಕು. ವೆಲ್ಡಿಂಗ್ ಮಾಲೀಕ ಮತ್ತು ಕೆಲಸಗಾರರ ಕ್ಷೇಮಾಭಿವೃದ್ಧಿಯ ತಿಳುವಳಿಕೆ ಜಾಗೃತಗೊಳ್ಳಲು ಎಲ್ಲರೂ ಸಂಘದ ಸದಸ್ಯರಾಗಬೇಕು. ಕಾರ್ಮಿಕ ಇಲಾಖೆ ಕಾರ್ಡ್ ಮಾಡಿಸಿಕೊಳ್ಳಬೇಕು. ಕಾರ್ಮಿಕ ಇಲಾಖೆಯ ನೋಂದಣಿಯನ್ನು ಪಡೆದು ಕಾನೂನಾತ್ಮಕವಾದ ಶಿಸ್ತನ್ನು ವೆಲ್ಡಿಂಗ್ ಮಾಲೀಕರು ಮತ್ತು ಕೆಲಸಗಾರರು ಪ್ರದರ್ಶಿಸಬೇಕು” ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿಕ್ಕನಾಯಕನಹಳ್ಳಿ ತಾಲೂಕು ವೆಲ್ಡಿಂಗ್ ಮಾಲೀಕರು ಮತ್ತು ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೆ ಆರ್ ಉಮೇಶ್ ಮಾತನಾಡಿ, “ತಾಲೂಕಿನ ಎಲ್ಲ ವೆಲ್ಡಿಂಗ್ ಮಾಲೀಕರು ಮತ್ತು ಕೆಲಸಗಾರರು ಹಾಗೂ ಇತರೆ ಎಲ್ಲ ಕಾರ್ಮಿಕ ಸಂಘಟನೆಗಳು ನಮ್ಮ ಪ್ರಯತ್ನಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಎಲ್ಲರೂ ಒಂದುಗೂಡಿದರೆ, ಅದೇ ಕಾರ್ಮಿಕರಿಗೆ ಇರುವ ಸಂಘಟನೆಯ ಶಕ್ತಿ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದೇ ಸಂಘಟನೆಯ ಶಕ್ತಿ. ಸಂಘಟನೆಯ ಮೂಲಕ ಸಾಮಾಜಿಕ ಕಾರ್ಯಗಳನ್ನೂ ಸಲ್ಲಿಸುತ್ತಾ, ನಮ್ಮ ಸಾಮಾಜಿಕ ಬದ್ಧತೆಯನ್ನು ಸಹಾ ಪಾಲಿಸುತ್ತೇವೆ” ಎಂದರು.
‘ಫ್ರೆಂಡ್ಸ್’ ದ್ವಿಚಕ್ರ ವಾಹನ ಮಾಲೀಕರು ಹಾಗೂ ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ನಿಸಾರ್ ಅಹಮದ್ ಸಂಘದ ಎಲ್ಲರಿಗೂ ಶುಭ ಕೋರಿದರು.
ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷರುಗಳಾದ ಸೈಯದ್ ಇಮ್ತಿಯಾಝ್ ಹಾಗೂ ಎಮ್ ಲಕ್ಮಯ್ಯ, ಉಪಾಧ್ಯಕ್ಷರಾದ ದೇವರಾಜಾಚಾರ್ ಮತ್ತು ಕಾರ್ಯದರ್ಶಿ ಮಹಮ್ಮದ್ ಅಶ್ರಫ್ ಸೇರಿದಂತೆ ತಾಲ್ಲೂಕಿನ ಬಹುತೇಕ ಎಲ್ಲ ವೆಲ್ಡಿಂಗ್ ಮಾಲೀಕರು ಮತ್ತು ಕೆಲಸಗಾರರು ಭಾಗವಹಿಸಿದ್ದರು.
ವರದಿ: ಸಂಚಲನ, ಚಿಕ್ಕನಾಯಕನ ಸೀಮೆಯಿಂದ
