ಬೊಗಳುತ್ತಿದ್ದ ನಾಯಿಗೆ ಬೈದಿದ್ದಕ್ಕೆ ನಾಯಿಯ ಮಾಲೀಕನ ಮೇಲೆ ದುಷ್ಕರ್ಮಿಯೊಬ್ಬ ಆ್ಯಸಿಡ್ ಎರಚಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕುರಗುಂದ ಗ್ರಾಮದ ನಿವಾಸಿ ಸುಂದರ್ ರಾಜ್ ಎಂಬಾತನ ಮೇಲೆ ನೆರೆಮನೆಯ ಜೇಮ್ಸ್ ಎಂಬಾತ ಆ್ಯಸಿಡ್ ಎರಚಿದ್ದಾನೆ ಎಂದು ಆರೋಪಿಸಲಾಗಿದೆ.
ಸುಂದರ್ ಅವರು ಸಾಕಿದ್ದ ನಾಯಿ ಬೊಗಳ್ಳುತ್ತಲೇ ಇತ್ತೆಂದು, ನಾಯಿಗೆ ಸುಂದರ್ ಬೈಯ್ದಿದ್ದಾರೆ. ಆತ ನಾಯಿಯ ನೆಪದಲ್ಲಿ ತನಗೆ ಬೈಯುತ್ತಿದ್ಧಾನೆಂದು ಆರೋಪಿ ಜೇಮ್ಸ್ ಭಾವಿಸಿದ್ದು, ಸಂದರ್ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆಂದು ವರದಿಯಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಸುಂದರ್ ರಾಜ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಣ್ಣಿಗೆ ಗಾಯವಾಗಿದ್ದು, ಕಣ್ಣಿನ ಪದರವನ್ನು ಬದಲಿಸಬೇಕೆಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ಜೇಮ್ಸ್ ವಿರುದ್ಧ ಎನ್.ಆರ್ ಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.