ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾಬಾಬುಡನ್ ಗಿರಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಧರ್ಮಾತೀತವಾಗಿ ಹಿಂದು-ಮುಸ್ಲಿಮರು ಪೂಜೆ ಸಲ್ಲಿಸುತ್ತಿದ್ದ ಬಾಬಾ ಬುಡನ್‌ಗಿರಿಯ ದರ್ಗಾವನ್ನು ದತ್ತಪೀಠವೆಂದು ಕರೆದು ಹಿಂದುತ್ವವಾದಿ ಸಂಘಟನೆಗಳು ಕೋಮು ವಿವಾದ ಹಚ್ಚಿವೆ. ಅಲ್ಲದೆ, ವರ್ಷಕ್ಕೊಮ್ಮೆ ಅಲ್ಲಿ ದತ್ತ ಜಯಂತಿ ಆಚರಿಸುತ್ತಿವೆ. ಇದೀಗ, ದತ್ತ ಜಯಂತಿಗೆ ಎರಡು ತಿಂಗಳು ಬಾಕಿ ಇರುವಾಗಲೇ, ಶ್ರೀರಾಮಸೇನೆ ಮತ್ತೆ ವಿವಾದವನ್ನು ಮುನ್ನೆಲೆಗೆ ತಂದಿದೆ.
ಬಾಬಾಬುಡನ್ ಗಿರಿಯಲ್ಲಿರುವ ಗೋರಿಗಳನ್ನು ಸ್ಥಳಾಂತರಿಸುವಂತೆ ಶ್ರೀರಾಮಸೇನೆ ಒತ್ತಾಯಿಸಿದೆ. ಗೋರಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ಅಕ್ಟೋಬರ್ 30ರಿಂದ ನವೆಂಬರ್ 3ರವರೆಗೆ ದತ್ತಮಾಲಾ ಅಭಿಯಾನ ನಡೆಸುವುದಾಗಿ ಶ್ರೀರಾಮಸೇನೆ ಹೇಳಿದೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಬಬುಡನ್ ಗಿರಿ ದರ್ಗಾಗೆ ಎಂಟು ಮಂದಿಯುಳ್ಳ ವ್ಯವಸ್ಥಾಪನ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ಸದಸ್ಯರಲ್ಲಿ ಏಳು ಮಂದಿ ಹಿಂದುಗಳೇ ಆಗಿದ್ದರು. ಅವರ ಹಿಂದುತ್ವವಾದಿ ಸಂಘಟನೆಗಳ ಪರವಾಗಿದ್ದಾರೆ. ಅವರದ್ದೇ ನೇತೃತ್ವದಲ್ಲಿ ಕಳೆದ ವರ್ಷ ದತ್ತ ಜಯಂತಿಯೂ ನಡೆದಿದೆ. ಆದರೆ, ಸಮಿತಿಯಲ್ಲಿ ಒಬ್ಬರು ಮಾತ್ರವೇ ಮುಸ್ಲಿಂ ಸಮುದಾಯದವರಿದ್ದು, ಸಮಿತಿ ಕೂಡ ಬಾಬಾಬುಡನ್ ಗಿರಿಯನ್ನು ದತ್ತಪೀಠ ಮಾಡಲು ಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಅಲ್ಲದೆ, ಕಳೆದ ವರ್ಷ ದತ್ತಜಯಂತಿಯಲ್ಲಿ ಮಾತ್ರ ಹಿಂದೂ ಅರ್ಚಕರಿಗೆ ಅವಕಾಶ ನೀಡಬೇಕೆಂದು ಕೋರ್ಟ್ ಹೇಳಿತ್ತು. ಆದರೆ, ನಿತ್ಯವೂ ಹಿಂದು ಅರ್ಚಕರು ಪೂಜೆ ಸಲ್ಲಿಸುತ್ತಿದ್ದಾರೆ. ಹೀಗಾಗಿ, ಹಿಂದು ಅರ್ಚಕರನ್ನು ವಜಾಗೊಳಿಸಬೇಕು. ಸಮಿತಿಯನ್ನು ರದ್ದುಗೊಳಿಸಬೇಕು ಎಂದು ಸರ್ಕಾರಕ್ಕೆ ಸೈಯದ್ ಬುಡೇನ್ ಶಾ ಖಾದ್ರಿ ಟ್ರಸ್ಟ್ ಮನವಿ ಮಾಡಿದೆ. ಈ ಬೆನ್ನಲ್ಲೇ ಬಾಬಾಬುಡನ್‌ಗಿರಿಯಲ್ಲಿ ಮತ್ತೆ ವಿವಾದವನ್ನು ಶ್ರೀರಾಮಸೇನೆ ಮುನ್ನೆಲೆಗೆ ತರಲು ಯತ್ನಿಸುತ್ತಿದೆ.