ಕರ್ತವ್ಯ ಲೋಪ ಎಸಗಲಾಗಿದೆ ಎನ್ನುವ ಆರೋಪದಡಿ ಚಿಕ್ಕಮಗಳೂರು ಜಿಲ್ಲಾ ವಕ್ಫ್‌ಬೋರ್ಡ್ ಅಧಿಕಾರಿಯನ್ನು ಅಮಾನತು ಮಾಡಿ ರಾಜ್ಯ ವಕ್ಫ್‌ಬೋರ್ಡ್ ಕಾರ್ಯ ನಿರ್ವಹಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜಾಮಿಯಾ ಮಸೀದಿ ಹಾಗೂ ನಲ್ಲೂರು ಮಠ ನಡುವಿನ ವಿವಾದಿತ ಬಡಾ ಮಕಾನ್ ಜಾಗದಲ್ಲಿದ್ದ ಕಟ್ಟಡ ತೆರವು ಪ್ರಕ್ರಿಯೆ ಕೈಗೊಳ್ಳುವ ಪೂರ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಿಲ್ಲ ಹಾಗೂ ಪೊಲೀಸ್ ಭದ್ರತೆ ಪಡೆದಿರುವುದಿಲ್ಲ. ಜತೆಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿ ನಡೆದುಕೊಳ್ಳಲಾಗಿದೆ ಎಂದು ಆರೋಪಿಸಿ ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಸತಾರ್ ಹುಸೇನಿ ಅವರನ್ನು ಅಮಾನತುಗೊಳಿಸಲಾಗಿದೆ.
ನಗರದ ಜಾಮೀಯಾ ಮಸೀದಿಗೆ ಸೇರಿದ್ದು ಎನ್ನಲಾದ ಬಡಾ ಮಕಾನ್ ವಕ್ಫ್ ಆಸ್ತಿಯಲ್ಲಿ ಎನ್.ಎಂ.ಕಮಲಮ್ಮ ಹಾಗೂ ಇತರರು ಮತ್ತು ವಕ್ಫ್ ಮಂಡಳಿ ಹಾಗೂ ಜಾಮಿಯಾ ಮಸೀದಿ ಆಡಳಿತ ಸಮಿತಿ ಮಧ್ಯೆ ನ್ಯಾಯಾಲಯಲ್ಲಿ ವಿವಾದ ನಡೆಯುತ್ತಿದೆ. ಈ ಮಧ್ಯೆ ಹೈಕೋರ್ಟ್ ಆದೇಶದನ್ವಯ ಇತ್ತೀಚೆಗೆ ವಕ್ಫ್ ಬೋರ್ಡ್ ಜಿಲ್ಲಾ ಅಧಿಕಾರಿ ಸೈಯದ್ ಸತ್ತಾರ್ ಹುಸೇನಿ ನೇತೃತ್ವದದಲ್ಲಿ ಬಡಾ ಮಕಾನ್ ಜಾಗದಲ್ಲಿದ್ದ ಕಟ್ಟಡ ತೆರವು ಮಾಡಲಾಗಿತ್ತು. ಈ ತೆರವು ಕಾರ್ಯಾಚರಣೆ ವಿರುದ್ಧ ಕೆಲ ಸಂಘಟನೆಗಳು ದೂರು ನೀಡಿದ್ದವು.
ಇದನ್ನೂ ಓದಿ: ಕೊಡಗು, ಹಾಸನ, ಚಿಕ್ಕಮಗಳೂರು ಆನೆ ಸಮಸ್ಯೆಗೆ ಶಾಶ್ವತ ಪರಿಹಾರ: ಸಚಿವ ಈಶ್ವರ ಖಂಡ್ರೆ
ಈ ಹಿನ್ನೆಲೆ ತೆರವು ಪೂರ್ವದಲ್ಲಿ ನಗರಸಭೆ ಆಯುಕ್ತರಿಗೆ ಮಾಹಿತಿ ನೀಡಿಲ್ಲ, ಪೊಲೀಸ್ ಠಾಣೆಗೆ ಬಂದೋಬಸ್ತ್ ಒದಗಿಸಲು ಮಾಹಿತಿ ನೀಡಿಲ್ಲ. ದಾಖಲಾತಿಗಳನ್ನು ಸರಿಯಾಗಿ ಪರಿಶೀಲಿಸದೆ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಅಧಿಕಾರಿಯ ಬೇಜವಾಬ್ದಾರಿಯಿಂದ ವಿವಾದಿತ ಸ್ಥಳದಲ್ಲಿ ಪ್ರಕ್ಷಿಬ್ಧ ವಾತಾವರಣ ಉಂಟಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
