ಚಿಕ್ಕಮಗಳೂರು-ಮಂಗಳೂರು ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ಘಾಟ್ ರಸ್ತೆಯ ಮೇಲೆ ಗುಡ್ಡ ಕುಸಿದಿದ್ದು, ಸಂಚಾರ ಬಂದ್ ಆಗಿದೆ. ಇತ್ತೀಚಿಗೆ ಬೆಂಗಳೂರು-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿರುವ ಶಿರಾಡಿ ಘಾಟ್‌ನಲ್ಲಿಯೂ ಗುಡ್ಡ ಕುಸಿದಿದ್ದು, ಆ ರಸ್ತೆಯೂ ಬಂದ್ ಆಗಿದೆ. ಹಾಗಾಗಿ, ವಾಹನ ಸವಾರರು ಬೆಂಗಳೂರು-ಮಂಗಳೂರು ನಡುವಿನ ಸಂಚಾರಕ್ಕೆ ಸಾರ್ಮಾಡಿ ಘಾಟ್ ರಸ್ತೆಯನ್ನು ಆಶ್ರಯಿಸಿದ್ದರೂ, ಈಗ ಆ ರಸ್ತೆಯೂ ಬಂದ್ ಆಗಿದ್ದು, ವಾಹನ ಸವಾರರು, ಪ್ರಯಾಣಿಕರು ಪರಿದಾಡುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ 173ರಲ್ಲಿರುವ ಚಾರ್ಮಾಡಿ ಘಾಟ್‌ನಲ್ಲಿ ಭಾರೀ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದೆ. ಕೊಟ್ಟಿಗೆಹಾರ ಮತ್ತು ಬೆಳ್ತಂಗಡಿ ಬಳಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ನೂರಾರು ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದು, ಸಂಚಾರ ದಟ್ಟಣೆ ಉಂಟಾಗಿದೆ.
ಇತ್ತ,ಹಾಸನ ಜಿಲ್ಲೆಯ ಸಕಲೇಶಪುರ ಬಳಿಯ ದೊಡ್ಡತಪ್ಲು ಬಳಿ ಶಿರಾಡಿ ಘಾಟ್‌ನಲ್ಲಿಯೂ ಗುಡ್ಡ ಕುಸಿದಿದ್ದು, ಅಲ್ಲಿಯೂ ವಾಹನ ದಟ್ಟಣೆ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಅಗಲೀಕರಣ ಮತ್ತು ಕಾಂಕ್ರಿಟೀಕರಣ ಮಾಡುತ್ತಿದ್ದ ಖಾಸಗಿ ಗುತ್ತಿಗೆ ಕಂಪನಿಯ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಕಾಮಗಾರಿ ನಡೆಸುತ್ತಿರುವ ಕಾರ್ಮಿಕರು ಮಣ್ಣು ತೆರವುಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಇನ್ನು, ಬೆಂಗಳೂರು-ಮಂಗಳೂರು ನಡುವೆ ಮತ್ತೊಂದು ಸಂಪರ್ಕ ಮಾರ್ಗವಾಗಿದ್ದ, ರೈಲ್ವೇ ಮಾರ್ಗದಲ್ಲಿಯೂ ಹಳಿಯ ಮೇಲೆ ಗುಡ್ಡ ಕುಸಿದಿದ್ದು, ರೈಲು ಸಂಚಾರವೂ ಬಂದ್ ಆಗಿತ್ತು. ಬಹುಶಃ ಇಂದಿನಿಂದ ರೈಲು ಸಂಚಾರ ಮತ್ತೆ ಆರಂಭವಾಗುವ ಸಾಧ್ಯತೆಗಳಿವೆ.