ಹಲವಾರು ತಿಂಗಳಿನಿಂದ ಬರಗಾಲವನ್ನು ಎದುರಿಸುತ್ತಿರುವ ರೈತಾಪಿ ವರ್ಗಕ್ಕೆ ರಾಜ್ಯ ಸರ್ಕಾರ ಸಮರ್ಪಕವಾಗಿ ಸ್ಪಂದಿಸಬೇಕು. ಅದಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಎಚ್ಚರಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಡಾ.ಕೆ ಸುಂದರಗೌಡ ಹೇಳಿದ್ದಾರೆ.
ರೈತರ ಸಮಸ್ಯೆ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಸರ್ಕಾರ ರೈತರ ಬೆಳೆಗಳಿಗೆ ಸಮರ್ಪಕ ವಿದ್ಯುತ್ ಪೂರೈಸದಿದ್ದಲ್ಲಿ ನಿರೀಕ್ಷೆಗಿಂತ ಕೆಳಮಟ್ಟದಲ್ಲಿ ರೈತರು ಹೀನಾಯ ಬದುಕಿಗೆ ಗುರಿಯಾಗಲಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಬೆಳೆಗಳಿಗೆ ನೀರಾವರಿ ಒದಗಿಸಲು ಸಮರ್ಪಕ ವಿದ್ಯುತ್ ವ್ಯವಸ್ಥೆಯಿಲ್ಲ ಜೊತೆಗೆ ಮಳೆಯ ಕೊರತೆಯಿಂದ ಬರಗಾಲವನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ಅಸಹಾಯಕರಾಗಿ ಆತ್ಮಹತ್ಯೆಯ ಹಾದಿ ಹಿಡಿಯುವುದು ಸರ್ಕಾರದ ವಿಫಲತೆಗೆ ಹಿಡಿದ ಕೈಗನ್ನಡಿಯಾಗಿದೆ” ಎಂದಿದ್ದಾರೆ.
“ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕುಡಿಯುವ ನೀರು ಜಾನುವಾರುಗಳಿಗೆ ಮೇವಿಗೆ ಭಾರಿ ಸಮಸ್ಯೆಯಾಗಿದೆ. ಜಿಲ್ಲಾಡಳಿತವು ಪರಿಹಾರ ಕಂಡುಕೊಳ್ಳದಿದ್ದಲ್ಲಿ ಸರ್ಕಾರವೇ ಕಾರಣವೆಂದು ಭಾವಿಸಿ, ಆಮ್ ಆದ್ಮಿ ಪಕ್ಷದ ಮುಖಂಡರುಗಳು ಬೀದಿಗಿಳಿದು ಚಳುವಳಿ ಮಾಡಬೇಕಾಗುವ ಅನಿವಾರ್ಯತೆ ಎದುರಾಗಲಿದೆ” ಎಂದು ಹೇಳಿದ್ದಾರೆ.
“ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಪೋಷಿಸಿರುವ ಉಚಿತ ಗ್ಯಾರಂಟಿಗಳನ್ನು ಕೂಡಲೇ ತಡೆಹಿಡಿಯಬೇಕು. ಪ್ರಸ್ತುತ ಜನತೆಗೆ ಜೀವನ ಕಟ್ಟಿಕೊಳ್ಳಲು ಅವಶ್ಯಕವಾಗಿರುವ ಬೇಡಿಕೆಗಳನ್ನು ಪೂರೈಸಬೇಕು. ಜೊತೆಗೆ ರೈತರ ಬೆಳೆಗಳಿಗೆ ನೀರಾವರಿ ಒದಗಿಸಲು ಶೇಕಡ 100ರ ಸಬ್ಸಿಡಿ ನೀಡಿ ಸೋಲಾರ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
“ವಿದ್ಯುತ್ ಚ್ಛಕ್ತಿಯ ಅತ್ಯಂತ ತೀವ್ರ ಕೊರತೆ ಇರುವ ಈ ಸಮಯದಲ್ಲಿ ನಗರದಲ್ಲಿ ಮತ್ತು ಗ್ರಾಮೀಣ ಪಂಚಾಯತ್ ಮಟ್ಟದಲ್ಲಿ ಹಗಲಿನಲ್ಲಿ ಉರಿಯುವ ವಿದ್ಯುತ್ ದೀಪಗಳ ನಿರ್ಲಕ್ಷವನ್ನು ತೀವ್ರವಾಗಿ ಖಂಡಿಸುತ್ತೇವೆ” ಎಂದು ಹೇಳಿದ್ದಾರೆ.