ಜಗತ್ತಿನಾದ್ಯಂತ ನಾಗರಿಕ ಸಮಾಜದಲ್ಲಿ ಇಂದು ಚರ್ಚೆಯಾಗುತ್ತಿರುವುದು ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧ, ನಾಗರಿಕರ ಮೇಲೆ ದಾಳಿ ಮಾಡಿರುವುದು ಅತ್ಯಂತ ಖಂಡನೀಯ. ಕೆಲವು ರಾಜ್ಯಗಳಲ್ಲಿ ಅಂಥ ಚರ್ಚೆಗಳಿಗೆ, ಪ್ರತಿಭಟನೆಗಳಿಗೆ ಅನುಮತಿಯನ್ನು ನಿರಾಕರಿಸಲಾಗುತ್ತಿದೆ ಎಂದು ಕರ್ನಾಟಕ ಜನಶಕ್ತಿ ಬೇಸರ ವ್ಯಕ್ತಪಡಿಸಿದೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿಯವರಾದ ಗೌಸ್ ಮೋಹಿದ್ದಿನ್, ಇಸ್ರೇಲ್ ಸರ್ಕಾರ ಪ್ರತಿದಿನವು ನೂರಾರು ಪಾಲಸ್ತೀನೀಯರನ್ನು ಕೊಲ್ಲುತ್ತಿದೆ. ಅವರಲ್ಲಿ ಹೆಚ್ಚು ಜನ ಮಕ್ಕಳು. ತನ್ನ ಹಠಮಾರಿತನವನ್ನೇ ದೊಡ್ಡ ಗಂಟಲಿನಿಂದ ಸಮರ್ಥಿಸಿಕೊಳ್ಳುತ್ತಿರುವ ಆ ದೇಶ, ಕಳೆದ 75ವರ್ಷಗಳಿಂದ ತಾನು ಪಾಲಸ್ತೀನೀಯರ ಮೇಲೆ ನಡೆಸುತ್ತಲೇ ಇರುವ ದೌರ್ಜನ್ಯಗಳನ್ನು ಮರೆಮಾಚುತ್ತಿದೆ. ಇಂಥ ಅಮಾನವೀಯ ನಡವಳಿಕೆಗಳನ್ನು ಜಗತ್ತಿನ ಹಲವು ದೇಶಗಳ, ಜನ ಖಂಡಿಸಿದ್ದಾರೆ.
ನಮ್ಮ ದೇಶದಲ್ಲಿಯೂ ಅದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಕೆಲವು ರಾಜ್ಯಗಳಲ್ಲಿ ಅಂಥ ಚರ್ಚೆಗಳಿಗೆ ಪ್ರತಿಭಟನೆಗಳಿಗೆ ಅನುಮತಿಯನ್ನು ನಿರಾಕರಿಸಲಾಗುತ್ತಿದೆ. ಆಘಾತಕಾರಿ ವಿಷಯವೇನೆಂದರೆ, ಕರ್ನಾಟಕವೂ ಅಂಥ ರಾಜ್ಯವೆನ್ನುವುದು.
ರಾಜ್ಯದ ರಾಜಧಾನಿಯೂ ಒಳಗೊಂಡಂತೆ ಹಲವು ಪ್ರದೇಶಗಳಲ್ಲಿ ಈ ಸಮಸ್ಯೆಯ ಬಗ್ಗೆ ಬಹಿರಂಗವಾಗಿ ಚರ್ಚೆಸಲು, ಪ್ರತಿಭಟಿಸಲು ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ. ಸಭಾಂಗಣದ ಒಳಗಿನ ಕಾರ್ಯಕ್ರಮಗಳನ್ನು ನಡೆಯಲು ಬಿಡುತ್ತಿಲ್ಲ. ಇಂಥ ಮನೋಭಾವವನ್ನೇ ಸರ್ವಾಧಿಕಾರಿ ಧೋರಣೆ ಎಂದು ಕರೆಯಬೇಕಾಗಿದೆ.
ಕೆಲವೇ ತಿಂಗಳುಗಳ ಹಿಂದೆ ಇಲ್ಲಿನ ಜನ ತನ್ನ ಕೋಮುವಾದಿ ನೀತಿ ಜತೆಗೆ ಸರ್ವಾಧಿಕಾರಿ ಧೋರಣೆಗೂ ಕುಖ್ಯಾತವಾಗಿದ್ದ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ಕಾಂಗ್ರೆಸ್ ಸರ್ಕಾರವನ್ನು ಅಸ್ತಿತ್ವಕ್ಕೆ ತಂದರು. ಪ್ರಜೆಗಳ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಕಾಂಗ್ರೆಸ್, ಅದೇ ಸರ್ವಾಧಿಕಾರಿ ಮನೋಭಾವವನ್ನು ಪ್ರದರ್ಶಿಸುತ್ತಿರುವುದು ಖಂಡನೀಯ.
ಕಾಂಗ್ರೆಸ್ ಕೇಂದ್ರ ನಾಯಕತ್ವ ಬಹಿರಂಗವಾಗಿಯೇ ಪಾಲಸ್ತೀನೀಯರ ಪರ ನಿಲುವು ತೆಗೆದುಕೊಂಡಿದೆ. ಆದರೂ, ಇಲ್ಲಿನ ಅದೇ ಪಕ್ಷದ ಸರ್ಕಾರ ತದ್ವಿರುದ್ಧವಾಗಿ ಬಿಜೆಪಿಗೆ ಹತ್ತಿರವಾಗಿ ನಿಂತಿದೆ. ತನ್ನದೇ ಪಕ್ಷದ ನೀತಿಗೆ ತಾವು ವಿರುದ್ಧವಾಗಿ ನಡೆಯುತ್ತಿರುವುದು ಅವರಿಗೆ ತಿಳಿಯುತ್ತಿಲ್ಲವೆ ಎಂದು ಅಸಮಾಧಾನ ಹೊರಹಾಕಿದರು
ಈ ವಿದ್ಯಮಾನಗಳು ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳ ಗಮನಕ್ಕೆ ಬಂದೇ ಇರುತ್ತವೆ. ಆದರೂ, ಅವರು ಇಂಥ ನೀತಿಯನ್ನು, ಪೊಲೀಸ್ ರಾಜ್ಯವನ್ನು ಮುಂದುವರೆಯಲು ಬಿಟ್ಟಿರುವುದೇಕೆ? ಬೆಂಗಳೂರಿನಲ್ಲಿ ಈಗಾಗಲೇ ಎಲ್ಲಾ ಪ್ರತಿಭಟನೆಗಳನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸೀಮಿತಗೊಳಿಸಿರುವ ಪೊಲೀಸರ ಈ ನಡವಳಿಕೆ ಖಂಡನೀಯ.
ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಸರ್ಕಾರ ಎಚ್ಚೇತ್ತುಕೊಂಡು ಜನಸಾಮಾನ್ಯರ ಪ್ರತಿಭಟನೆಯ ಹೋರಾಟಗಳಿಗೆ ಕಡಿವಾಣ ಹಾಕುವುದಾದರೆ, ಮುಂದೆ ಬರುವ ಚುನಾವಣೆಯಲ್ಲಿ ತಕ್ಕ ಪಾಠವನ್ನ ಕಳಿಸುತ್ತಾರೆಂದು ಎಚ್ಚರಿಕೆ ನೀಡಿದರು.
ನೂರಾರು ಪುಟ್ಟ ಮಕ್ಕಳ ಜೀವ ಉಳಿಯಬೇಕು ಸಾವಿರಾರು ಸಂಖ್ಯೆಯಲ್ಲಿ ಈ ದಾಳಿಯಿಂದ ಜನರು ಸಾಯುತ್ತಿದ್ದಾರೆ ಈ ಕೂಡಲೇ ಸರ್ಕಾರ ಎಚ್ಚೆತ್ತಿಕೊಳ್ಳಕೊಂಡು ಹೋಗುತ್ತಿರುವ ಪ್ರಾಣಗಳನ್ನು ಉಳಿಸಬೇಕೆಂದು ಯುವ ಮುಖಂಡರಾದ ಅಜ್ಮತ್ ಪಾಷ ಹೇಳಿದರು.
ಸರ್ವಾಧಿಕಾರಿಯಾಗಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ. ಅಮಿತ್ ಷಾ ನಿರ್ದೇಶನ ಪಾಲಿಸುತ್ತಿರುವ ಗೃಹ ಸಚಿವಾಲಯ. ಜಾಣ ಕಿವುಡು ಪ್ರದರ್ಶಿಸುತ್ತಿದ್ದಾರಾ? ಸಿದ್ದರಾಮಯ್ಯನವರಿಗೆ ಇದು ಕಿವಿಮಾತು ಎಂದು ಸುದ್ದಿಗೋಷ್ಠಿಯಲ್ಲಿ ಗೌಸ್ ಮೊಹಿದ್ದೀನ್ ಕಿಡಿಯಾದರು.
ಸುದ್ದಿ ಗೋಷ್ಠಿಯಲ್ಲಿ ಗಣೇಶ್, ಮೋಹನ್, ಅಜ್ಮತ್ ಪಾಷ, ಹಸನಬ್ಬ, ಗೋವಿಂದೇಗೌಡ, ಪುಟ್ಟಸ್ವಾಮಿ ಇನ್ನಿತರರು ಇದ್ದರು.