ಕಾಫಿನಾಡು – ಕರಾವಳಿಯನ್ನು ಸಂಪರ್ಕಿಸುವ ಮುಖ್ಯ ರಸ್ತೆ ಚಾರ್ಮಾಡಿ ಘಾಟ್ನಲ್ಲಿ ಇದೀಗ ಹೊಸ ನಿಯಮ ಜಾರಿಯಾಗಿದೆ. ರಾತ್ರಿ ವೇಳೆ ಸಂಚರಿಸುವ ವಾಹನಗಳಿಗೆ ಕನಿಷ್ಠ ಐದು ವಾಹನಗಳು ಒಟ್ಟಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ರಾತ್ರಿ ವೇಳೆ ಸಂಚರಿಸುವ ವಾಹನಗಳನ್ನು ಚೆಕ್ ಪೋಸ್ಟ್ ದಾಟುವ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ, ಐದು ವಾಹನಗಳು ಒಟ್ಟಾಗಿ ಹೊರಡುವಂತೆ ವ್ಯವಸ್ಥೆ ರೂಪಿಸಲಾಗಿದೆ. ದಟ್ಟ ಅರಣ್ಯದಿಂದ ಸುತ್ತುವರಿದ ಈ ಘಾಟ್ನಲ್ಲಿ ರಾತ್ರಿ ವೇಳೆ ಗೋ ಕಳ್ಳತನ ಹಾಗೂ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರುಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ.
ಕೊಟ್ಟಿಗೆಹಾರ ಚೆಕ್ ಪೋಸ್ಟ್ನಲ್ಲಿ ಈಗಿರುವ ಬ್ಯಾರಿಕೇಡ್ ಬದಲಾಗಿ ಹೊಸ ಭೂಮ್ ಬ್ಯಾರಿಯರ್ ನಿರ್ಮಿಸಲಾಗುತ್ತಿದೆ. ರಾತ್ರಿ ವೇಳೆ ಒಬ್ಬ ಪಿಎಸೈ ನೇತೃತ್ವದಲ್ಲಿ ಪೊಲೀಸರು ಕಾವಲು ನಿಲ್ಲಲಿದ್ದಾರೆ. ಜೊತೆಗೆ ಚೆಕ್ ಪೋಸ್ಟ್ನಿಂದ ಒಂದೂವರೆ ಕಿಮೀ ದೂರದಲ್ಲಿರುವ ಕಚ್ಚಾ ರಸ್ತೆಯನ್ನು ಗೋ ಕಳ್ಳರು ದುರುಪಯೋಗ ಮಾಡುತ್ತಿದ್ದರೆಂಬ ದೂರು ಹಿನ್ನೆಲೆಯಲ್ಲಿ, ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ ಆ ರಸ್ತೆಯಲ್ಲಿ ಗೇಟ್ ನಿರ್ಮಿಸಲು ನಿರ್ಧರಿಸಲಾಗಿದೆ.
ಇದನ್ನ ಓದಿದ್ದೀರಾ?ಚಿಕ್ಕಮಗಳೂರು l ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಸರಣಿ ಅಪಘಾತ
ಈ ಗೇಟ್ ರಾತ್ರಿ 10 ರಿಂದ ಬೆಳಿಗ್ಗೆ 6ರ ವರೆಗೆ ಮುಚ್ಚಿರಲಿದೆ. ಕೊಟ್ಟಿಗೆಹಾರ ಚೆಕ್ ಪೋಸ್ಟ್ ಮೂಲಕ ಹಾದು ಹೋಗುವ ಎಲ್ಲಾ ವಾಹನಗಳ ವಿವರಗಳು ಸಿಸಿಟಿವಿಯಲ್ಲಿ ದಾಖಲಾಗಲಿದ್ದು, ಪೊಲೀಸರ ದಾಖಲೆ ಪುಸ್ತಕದಲ್ಲೂ ಬರೆಯಲಾಗುತ್ತದೆ ಎಂದು ಎಸ್ಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.