ಕರ್ತವ್ಯಲೋಪದ ಆರೋಪದ ಮೇಲೆ ಶೃಂಗೇರಿ ತಾಲೂಕಿನ ಮರ್ಕಲ್ ಗ್ರಾಮ ಪಂಚಾಯತಿ ಪಿಡಿಒ ರಘುವೀರ್ ಅವರನ್ನು ಅಮಾನತು ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಮರ್ಕಲ್ ಪಂಚಾಯತಿಯ ಪಿಡಿಒ ರಘುವೀರ್ ಮತ್ತು ಅಧ್ಯಕ್ಷ ಮಹೇಶ್ ಅವರು ವಿವಿಧ ಸಂದರ್ಭಗಳಲ್ಲಿ ಪಂಚಾಯತಿಯ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಮತ್ತು ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಆರೋಪಗಳ ಬಗ್ಗೆ ಶೃಂಗೇರಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುದೀಪ್ ಅವರು ತನಿಖೆ ನಡೆಸಿದ್ದರು. ತನಿಖಾ ವರಧಿಯನ್ನು ಜಿಲ್ಲಾ ಪಂಚಾಯತಿಗೆ ಸಲ್ಲಿಸಿದ್ದರು.
ವರದಿಯಲ್ಲಿ ಆರೋಪಗಳು ಸಾಬೀತಾಗಿದ್ದು, ಪಿಡಿಒ ರಘುವೀರ್ ಅವರನ್ನು ಅಮಾನತು ಮಾಡಲಾಗಿದೆ.
ಪಿಡಿಒ ಮತ್ತು ಅಧ್ಯಕ್ಷರು ಪಂಚಾಯಿತಿಯ ಬಿಲ್ ಕಲೆಕ್ಟರ್ ಹೆಸರಿಗೆ ನಿಯಮಬಾಹಿರವಾಗಿ ಹಣ ಪಾವತಿ ಮಾಡಿದ್ದಾರೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಅನುಮತಿ ಪಡೆಯದೇ ಪಂಚಾಯಿತಿಯ ವಾಹನ ದುರಸ್ತಿ ಮಾಡಿಸಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಚುನಾವಣೆಗಳ ಸಮಯದಲ್ಲಿ ಮತಗಟ್ಟೆ ವೆಚ್ಚಕ್ಕಾಗಿ ಸರ್ಕಾರದಿಂದ ಬಂದ ಹಣವನ್ನು ಗ್ರಾಮ ಪಂಚಾಯತಿ ಖಾತೆಗೆ ವರ್ಗಾಯಿಸದೆ ತಾವೇ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಅಲ್ಲದೆ, 15ನೇ ಹಣಕಾಸು ಯೋಜನೆಯ ಕಾಮಗಾರಿಗಳಲ್ಲಿ ತೆರಿಗೆ ಕಠವಾಣೆ ಮಾಡಿಲ್ಲ. ಕಾಮಗಾರಿಗಳಿಗೆ ನಿಗದಿ ಮಾಡಲಾಗಿದ್ದ ಮೊತ್ತಕ್ಕಿಂತ ಹೆಚ್ಚು ಹಣ ಪಾವತಿಸಿದ್ದಾರೆ. ಖಾಸಗಿ ಎಲೆಕ್ಟ್ರೀಕಲ್ ಅಂಗಡಿಗೆ ನಿಯಮ ಬಾಹಿರವಾಗಿ 81,000 ರೂ. ಪಾವತಿಸಿದ್ದಾರೆ. ಹೀಗೆ, ಹಲವಾರು ಸಂದರ್ಭ ಅಧಿಕಾರ ದುರುಪಯೋಗ ಮತ್ತು ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪ ಕೇಳಿಬಂದಿತ್ತು.