ಪ್ರಧಾನಿ ಮೋದಿ ಅವರು ಕೊಟ್ಟ ಮಾತು ತಪ್ಪೋದಿಲ್ಲ ಎಂಬ ನಂಬಿಕೆ ಇತ್ತು. ಭಾರತೀಯ ಸೇನೆ ಮೇಲೂ ಅಪಾರವಾದ ನಂಬಿಕೆ ಇತ್ತು. ಸಿಂಧೂರ ಎಂಬ ಹೆಸರಿಗೆ ಮೋದಿ, ಸೇನೆ ಬೆಲೆ ತಂದುಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು.
ಪಾಕ್ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆಯ ಕ್ಷಿಪಣಿ ದಾಳಿ ಕುರಿತು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
“ಇಂದು ನಮಗೆ ಎರಡನೇ ದೀಪಾವಳಿ ಹಬ್ಬ. ಭಾರತೀಯರ ಸಿಂಧೂರಕ್ಕೆ ಕೈ ಹಾಕಿದ್ದಕ್ಕೆ ಪಾಕಿಗೆ ತಕ್ಕ ಶಾಸ್ತಿಯಾಗಿದೆ. ಭಾರತಮಾತೆ, ಸಹೋದರಿಯರ ಸಿಂಧೂರ ಅಳಿಸಲು ಬಂದವರನ್ನು ಇಂದು ನಾವು ಅಳಿಸಿದ್ದೇವೆ. ಮೋದಿಯವರು ಶತ್ರುಗಳನ್ನು ಪೂರ್ಣ ನಿರ್ನಾಮ ಮಾಡಿ ಅವರನ್ನು ಸಂಪೂರ್ಣವಾಗಿ ಮುಗಿಸಬೇಕು” ಎಂದು ತಿಳಿಸಿದರು.
ʼಆಪರೇಷನ್ ಸಿಂಧೂರ್ʼ ಮೂಲಕ ಉಗ್ರರ ವಿರುದ್ಧ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಹೀಗಿರುವಾಗ ರಾಜ್ಯ ಕಾಂಗ್ರೆಸ್ ‘ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ’ ಎಂದು ಟ್ವೀಟ್ ಮಾಡಿತ್ತು. ಜನರ ತೀವ್ರ ಆಕ್ರೋಶದ ಬಳಿಕ ಕಾಂಗ್ರೆಸ್ ಆ ಟ್ವೀಟ್ನ್ನು ಡಿಲೀಟ್ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿ ಟಿ ರವಿ, “ನಾಗರಿಕರ ನಡುವೆ ಶಾಂತಿ ಇರಬೇಕು. ಶತ್ರುಗಳನ್ನು ಮಟ್ಟ ಹಾಕುವುದೂ ಶಾಂತಿಯೇ. ರಾಜ್ಯ ಕಾಂಗ್ರೆಸ್ ಟ್ವೀಟ್ ಡಿಲೀಟ್ ಮಾಡಿರುವುದನ್ನು ನೋಡಿದ್ದೇನೆ. ಇದು ಬದಲಾಗಿರುವ ಕಾಂಗ್ರೆಸ್ ಮನಸ್ಥಿತಿ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಯೋಗ್ಯತೆಯನ್ನು ಕಳೆದುಕೊಳ್ಳುತ್ತಿದೆ” ಎಂದರು.
ಇದನ್ನೂ ಓದಿ: ಚಿಕ್ಕಮಗಳೂರು | ಅನಧಿಕೃತ ಶಾಲೆಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಆಗ್ರಹ