ವಿದ್ಯುತ್ ಸ್ಪರ್ಶದಿಂದ 13 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಸಾವನ್ನಪ್ಪಿದ ಬಾಲಕನನ್ನು 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕಾಶ್ ಎಂದು ಗುರುತಿಸಲಾಗಿದೆ.
ಪ್ರಕರಣದ ಸಂಬಂಧ ನಿರ್ಲಕ್ಷ್ಯತನದ ಆರೋಪದ ಮೇಲೆ ಪ್ರಭಾರ ಪ್ರಾಂಶುಪಾಲ, ನಿಲಯ ಪಾಲಕ ಸೇರಿ 8 ಮಂದಿಯನ್ನು ಅಮಾನತು ಗೊಳಿಸಲಾಗಿದೆ. ಕ್ರೈಸ್ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರವೀಣ್ ಬಿ ಬಾಗೇವಾಡಿ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ವಿದ್ಯಾರ್ಥಿ ಆಕಾಶ್ ಮತ್ತು ಸ್ನೇಹಿತರು ಶಾಲೆಯ ಆವರಣದಲ್ಲಿದ್ದ ನೇರಳೆ ಮರದಲ್ಲಿ ಹಣ್ಣು ಕೀಳಲು ಹೋಗಿದ್ದರು. ಈ ವೇಳೆ, ಆತ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದು, ವಿದ್ಯುತ್ ಶಾಕ್‌ನಿಂದ ಆಕಾಶ್ ಸಾವನ್ನಪ್ಪಿದ್ದಾನೆ. ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಸಾವು ಸಂಭವಿಸಿದೆ ಎಂದು ಆರೋಪಿಸಲಾಗಿದೆ.
ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.