ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ಹುಲಿ ಉಗುರು ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹುಲಿ ಉಗುರು ಧರಿಸಿದ ಚಿತ್ರನಟರು ಸೇರಿದಂತೆ ಹಲವರ ಫೋಟೋಗಳು ವೈರಲ್ ಆಗುತ್ತಿವೆ. ಅಂತಹ ಫೋಟೋಗಳನ್ನೂ ಒಳಗೊಂಡಂತೆ ಎಲ್ಲೆಡೆ ಅರಣ್ಯಾಧಿಕಾರಿಗಳು ಕಾರ್ಯಚರಣೆ ನಡೆಸುತ್ತಿದ್ದಾರೆ.
ಇದೀಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರನ್ನು ಬಾಳೆಹೊನ್ನೂರು ಅರಣ್ಯ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಜಿಲ್ಲೆಯ ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ಅರ್ಚಕ ಕೃಷ್ಣಾನಂದ ಹೊಳ್ಳ ಮತ್ತು ನಾಗೇಂದ್ರ ಜೋಯಿಸ ಬಂಧನಕ್ಕೊಳಗಾಗಿದ್ದಾರೆ.
ಬಂಧಿತ ಅರ್ಚಕರಿಂದ ಮೂರು ಹುಲಿ ಉಗುರುಗಳನ್ನು ವಶಕ್ಕೆ ಪಡೆಯಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.