ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಸಮೀಪದಲ್ಲಿರುವ ಮುತ್ತಿನಕೊಪ್ಪ ಗ್ರಾಮ ಪಂಚಾಯತಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಆನೆ ಹಾವಳಿ ಹೆಚ್ಚಾಗಿದೆ. ಕೊರಲುಕೊಪ್ಪ, ಹೊಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಆಜುಬಾಜಿನಲ್ಲಿ ತುಂಗಭದ್ರಾ ನೀರು ಹರಿಯುವುದರಿಂದ ನೀರಿನ ದಡದಲ್ಲಿ ಆನೆಗಳು ಯತೇಚ್ಛವಾಗಿವೆ. ಮುತ್ತೋಡಿ ಅಭಯಾರಣ್ಯಗಳಿಂದ ವಲಸೆ ಬಂದು ಈಗ ಊರಿನೊಳಗೆ ನುಗ್ಗುತ್ತಿವೆ.
“ಕಾಡಿನಲ್ಲಿ ಆನೆಗಳಿಗೆ ಆಹಾರವಿಲ್ಲದ ಕಾರಣ, ಆಹಾರ ಹುಡುಕಿಕೊಂಡು ನಾಡಿನೊಳಗೆ ನುಗ್ಗುತ್ತಿವೆ. ಬೆಳೆದಿರುವ ಬೆಳೆಗಳನ್ನು ಸಂಪೂರ್ಣವಾಗಿ ನಾಶಮಾಡುತ್ತಿವೆ. ಮೊದಲು ಆನೆ ಎನ್ನುವ ಸುಳಿವೇ ಇರಲಿಲ್ಲ. ಈಗ 2 ವರ್ಷದಿಂದ ಆನೆಗಳ ಹಾವಳಿ ಜಾಸ್ತಿ ಆಗಿದೆ” ಎಂದು ಸ್ಥಳೀಯ ನಿವಾಸಿ ಸುನಿಲ್ ಹಾಗೂ ತಮ್ಮಣ್ಣ ಈ ದಿನ.ಕಾಮ್‌ನೊಂದಿಗೆ ಅವಲತ್ತುಕೊಂಡಿದ್ದಾರೆ.
ಕೊರಲು ಕೊಪ್ಪ ಗ್ರಾಮದ ನಿವಾಸಿ ಕೃಷ್ಣಮೂರ್ತಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ. ಸ್ಥಳಕ್ಕೆ ಧಾವಿಸಿ ಕೂಡಲೇ ಸಿಡಿಮದ್ದು, ಪಟಾಕಿ ಹಚ್ಚುತ್ತಾರೆ. ಆದರೂ ಕೂಡ ಆನೆಗಳು ಹೆದರುವುದಿಲ್ಲ. ಆನೆಗಳು ಭಯಬೀಳದೆ ಹೋದಾಗ ಕಾಡಿಗೆ ಓಡಿಸುತ್ತಾರೆ. ಆದರೆ, ಮರಳಿ ರಸ್ತೆ ಬದುಗಳಿಗೆ ಬರುತ್ತವೆ. ನಿಂಗಪುರದಿಂದ ಉಂಬಲೇಬೈಲುವರೆಗೂ ಆನೆಗಳು ಬರದಂತೆ ಆನೆಗಳ ಹೊಂಡ(ಟ್ರಂಚ್)ಗಳನ್ನು ತೋಡಿದ್ದಾರೆ. ಇದೇ ರೀತಿಯಲ್ಲಿ ನಮ್ಮ ಗ್ರಾಮಗಳ ಕಡೆಗೆ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ. ಇಲ್ಲವಾದರೆ ಆನೆಗಳು ಊರೊಳಗೆ ನುಗ್ಗಿ ಬರುತ್ತವೆ” ಎಂದು ಕಳವಳ ವ್ಯಕ್ತಪಡಿಸಿದರು.
“ಅಡಕೆ, ಕಾಫಿ ಬೆಳೆ ಬೆಳೆಯಲು 5-10 ವರ್ಷ ಬೇಕು. ಭತ್ತ ಹಾಗೂ ಬಾಳೆ ಬೆಳೆಗಳು ಬೆಳೆದು ನಿಂತಿದ್ದು, ಫಸಲು ನೋಡುವ ಮುನ್ನವೇ ಆನೆಗಳು ಬೆಳೆಗಳನ್ನು ಒಂದೇ ಕ್ಷಣಕ್ಕೆ ನಾಶ ಮಾಡುತ್ತಿವೆ. ಇದಕ್ಕೆ ಸರ್ಕಾರ ಆದಷ್ಟು ಬೇಗ ಆನೆಗಳ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಉಂಟಾಗಿರುವ ಬೆಳೆನಷ್ಟಕ್ಕೆ ಪರಿಹಾರ ಕಟ್ಟಿಕೊಡಬೇಕು” ಎಂದು ವಿಠಲ್ ಹೆಗ್ಡೆ ಈ ದಿನ.ಕಾಮ್‌ಗೆ ತಿಳಿಸಿದ್ದಾರೆ.
ಮಕ್ಕಳು ಬೆಳಿಗ್ಗೆ ಶಾಲೆಗೆ ತೆರಳಬೇಕೆಂದರೆ 2 ರಿಂದ 3 ಕಿಮೀ ದೂರವಿರುವ ಬಸ್ ನಿಲ್ದಾಣಕ್ಕೆ ಕ್ರಮಿಸಬೇಕು. ಸಂಜೆ ಅಯಿತೆಂದರೆ ರಸ್ತೆಯಲ್ಲಿ ಆನೆಗಳು ಸಂಚಾರ ಮಾಡುತ್ತಿರುತ್ತವೆ. ನಾವು ಹೇಗೆ ರಸ್ತೆಗಳಲ್ಲಿ ಓಡಾಡುವುದು. ಮಕ್ಕಳಿಗೆ ಪ್ರಾಣಾಪಾಯವಾಗುವ ಸಾಧ್ಯತೆಗಳಿವೆ” ಎಂದು ಹೊಸೂರು ಗ್ರಾಮದ ನವೀನ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಈ ದಿನ.ಕಾಮ್ ಜೊತೆ ಮಾತಾಡಿದ್ದಾರೆ.
“ಶಾಶ್ವತ ಪರಿಹಾರ ನೀಡಬೇಕು. ಬೆಳೆ ಹೋದರೆ ಪರಿಹಾರ ಕೊಡಬಹುದು, ಜನರ ಪ್ರಾಣ ಹೋದರೆ ಮತ್ತೆ ತರುವುದಕ್ಕೆ ಸಾಧ್ಯವೇ” ಎಂದು ಗ್ರಾಮಸ್ಥರು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಆನೆ ಹಾವಳಿಯಿಂದಾಗಿ ಸಮಸ್ಯೆ ಎದುರಿಸುತ್ತಿರುವ ಜನರ ಪರಿಸ್ಥಿತಿ ಕುರಿತು ಈ ದಿನ.ಕಾಮ್ ಆರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, “ಆನೆ ಹಾವಳಿ ವಿಷಯ ತಿಳಿದ ಕೂಡಲೇ ಅಧಿಕಾರಿಗಳೂ ಕೂಡ ತಕ್ಷಣ ಸ್ಥಳಕ್ಕೆ ಧಾವಿಸಿ ಪಟಾಕಿ ಹಚ್ಚಿ ರೈತರಿಗೆ, ಜನರಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಿ, ಆನೆಗಳು ಇರುವ ಜಾಗಕ್ಕೆ ಹೋಗಬೇಡಿ, ಆದಷ್ಟು ದೂರವಿರಿ ಎಂದು ಸೂಚಿಸುತ್ತಾರೆ. ಜತೆಗೆ ಆನೆ ರಕ್ಷಣಾ ಪಡೆಯನ್ನೂ ಕೂಡ ನೇಮಿಸಿದ್ದಾರೆ” ಎಂದು ಮುತ್ತಿನ ಕೊಪ್ಪ ಡೆಪ್ಯೂಟಿ ಅರಣ್ಯ ಅಧಿಕಾರಿ ಮಾರುತಿಯವರು ಪ್ರತಿಕ್ರಿಯೆ ನೀಡಿದ್ದಾರೆ.
ಇಲ್ಲಿನ ಸಮಸ್ಯೆ ಬಗ್ಗೆ ಜಿಲ್ಲೆಯ ಸಚಿವ ಜಾರ್ಜ್ ಮತ್ತು ಈ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡರವರಿಗೆ ಮಾಹಿತಿ ತಿಳಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ 96 ಕಿಮೀ ದೂರ ಸೋಲಾರ್ ವಿದ್ಯುತ್ ತೂಗುತಂತಿ ಬೇಲಿ, ರೈಲ್ವೇ ಬ್ಯಾರಿಕೇಡ್, ಎಲಿಫೆಂಟ್ ಪ್ರೂಫ್ ಚಕಿಂಗ್ ನಿರ್ಮಾಣ ಮಾಡಲು ಸರ್ಕಾರದ ಗಮನಕ್ಕೆ ತಂದಿದ್ದೇವೆ” ಎಂದು ಆ ಭಾಗದ ವಲಯ ಮಟ್ಟದ ಅರಣ್ಯ ಅಧಿಕಾರಿ ಪ್ರವೀಣ್ ಕುಮಾರ್ ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿದ್ದೀರಾ? ಚಾಮರಾಜನಗರ | ಕೆಲಸ ಹರಸಿ ನೆರೆ ರಾಜ್ಯಕ್ಕೆ ಗುಳೆ ಹೊರಟ ಮಂದಿ; ಮಕ್ಕಳ ಶಿಕ್ಷಣ ಮೊಟಕು
“ಈಗ ಬೆಳೆಗಳಿಗೆ ಅಪಾಯ ಮಾಡುತ್ತಿವೆ. ಇನ್ನು ಸ್ವಲ್ಪ ದಿನಗಳಾದ ಬಳಿಕ ಮನುಷ್ಯರ ಮೇಲೆ ಎರಗುತ್ತವೆಂದು ಸುತ್ತಮುತ್ತಲಿನ ಗ್ರಾಮಸ್ಥರ ಆತಂಕವಾಗಿದೆ. ಆನೆ ದಾಳಿ ಹಾಗೂ ಆನೆಗಳಿಂದಾಗುತ್ತಿರುವ ಬೆಳೆನಷ್ಟ ಸೇರಿದಂತೆ ಇತರ ಸಮಸ್ಯೆಗಳನ್ನು ಆಲಿಸಿ ಆಡಳಿತಾಧಿಕಾರಿಗಳು ಹಾಗೂ ಸರ್ಕಾರ ಗಮನವಹಿಸಿ ಆನೆ ನಿಯಂತ್ರಣದ ಕೆಲಸವನ್ನು ಕಾರ್ಯ ರೂಪಕ್ಕೆ ತರಬೇಕು” ಎಂದು ಸ್ಥಳೀಯರ ಆಗ್ರಹವಾಗಿದೆ.