ಕೇರಳದಲ್ಲಿ ನಿಫಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈರಸ್ ಹರಡುವುದನ್ನು ತಡೆಯಲು ಚಿಕ್ಕಮಗಳೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿವೆ.
ಮಲೆನಾಡು ಪ್ರದೇಶವು ಕರಾವಳಿ ಜಿಲ್ಲೆಗೆ ಹೊಂದಿಕೊಂಡಿರುವುದರಿಂದ ನಿಫಾ ವೈರಸ್ ಭೀತಿ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಕೇರಳದಿಂದ ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧಿಸಿದೆ. ಈ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡದಂತೆ ರೆಸಾರ್ಟ್, ಹೋಂಸ್ಟೇಗಳು ಮತ್ತು ಹೋಟೆಲ್ ಮಾಲೀಕರಿಗೆ ಸೂಚಿಸಲಾಗಿದೆ.
“ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿ ಬೆಟ್ಟ ಶ್ರೇಣಿಗಳು ಆಕರ್ಷಣೀಯ ಪ್ರದೇಶಗಳಗಿರುವುದರಿಂದ ಹಲವು ರಾಜ್ಯಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ಯಾಕೇಜ್ ಏಜೆನ್ಸಿಗಳ ಮೂಲಕ ಹೆಚ್ಚಿನ ಸಂಖ್ಯೆಯ ಜನರು ಜಿಲ್ಲೆಗೆ ಬರುತ್ತಿದ್ದಾರೆ. ಮತ್ತೊಂದೆಡೆ, ಬಾವಲಿಗಳು ವೈರಸ್‌ನ ವಾಹಕಗಳಾಗಿರುವುದರಿಂದ, ಸ್ಥಳೀಯ ನಿವಾಸಿಗಳು ಮರಗಳಲ್ಲಿ ಗೂಡುಕಟ್ಟುವ ಬಾವಲಿಗಳನ್ನು ಸ್ಥಳಾಂತರಿಸುವಂತೆ ಆಡಳಿತವನ್ನು ಒತ್ತಾಯಿಸಿದ್ದಾರೆ. ಈ ಹಿನ್ನಲೆಯಲ್ಲಿ ನಾಗರಿಕರ ಮನಸ್ಸಿನಲ್ಲಿರುವ ಭಯವನ್ನು ಹೋಗಲಾಡಿಸಿ, ವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರಿಗೆ ಜಾಗೃತಿ ಮೂಡಿಸಬೇಕು” ಎಂದು ಸಾಮಾಜಿಕ ಕಾರ್ಯಕರ್ತ ಸುಂದರೇಶ್ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಿಫಾ ವೈರಸ್ ಆತಂಕ; ರೋಗ ಲಕ್ಷಣ, ತಡೆಗಟ್ಟುವ ವಿಧಾನದ ಮಾಹಿತಿ
“ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ವರದಿಯಾಗದ ಕಾರಣ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ವೆಂಟಿಲೇಟರ್ ಮತ್ತು ಆಮ್ಲಜನಕ ಸೌಲಭ್ಯ ಹೊಂದಿರುವ 6 ಹಾಸಿಗೆಗಳನ್ನು ವಿಶೇಷ ವಾರ್ಡ್ ಸಿದ್ಧಪಡಿಸಲಾಗಿದೆ” ಎಂದು ಮಲ್ಲೇಗೌಡ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೋಹನ್ ಕುಮಾರ್ ತಿಳಿಸಿದ್ದಾರೆ.
ಬಾವಲಿಗಳು ಅರ್ಧ ಕಚ್ಚಿದ ಹಣ್ಣುಗಳನ್ನು ತಿನ್ನದಂತೆ ಸಾರ್ವಜನಿಕರಿಗೆ ಸಲಹೆ ನೀಡಿದ ಅವರು, ಪ್ರಾಥಮಿಕ ಚಿಕಿತ್ಸೆ ತೆಗೆದುಕೊಳ್ಳುವಂತೆ ಸ್ಥಳೀಯರಿಗೆ ಸಲಹೆ ನೀಡಿದ್ದಾರೆ.