ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿ ಚಟ್ಟಪಾಳ್ಯ ಗ್ರಾಮದ ಪ್ರಸಿದ್ಧ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಕಳ್ಳತನವಾಗಿರುವ ಘಟನೆ ನಡೆದಿದೆ.
ದೇವಸ್ಥಾನದ ಹಿಂಭಾಗದ ಕಿಟಕಿಯ ಕಬ್ಬಿಣದ ಸರಳುಗಳನ್ನು ಕಟರ್ ಮೂಲಕ ಕತ್ತರಿಸಿ ಒಳಗಡೆ ನುಗ್ಗಿರುವ ಖದೀಮರು, ದೇವಿಯ ಮೈಮೇಲಿದ್ದ ಹಾಗೂ ಉತ್ಸವ ಮೂರ್ತಿಯಲ್ಲಿದ್ದ ಅಂದಾಜು 9 ಲಕ್ಷ ರೂಪಾಯಿ ಮೌಲ್ಯದ 3.85 ಕೆಜಿ ಬೆಳ್ಳಿ ಆಭರಣಗಳು ಮತ್ತು 5.72 ಲಕ್ಷ ರೂಪಾಯಿ ಮೌಲ್ಯದ 44 ಗ್ರಾಂ ಗೂ ಅಧಿಕ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ.
ಬೆಳಗಿನ ಜಾವ ಸುಮಾರು 3:45 ರ ವೇಳೆಗೆ ದೇವಾಲಯದಲ್ಲಿದ್ದ ಸೆನ್ಸಾರ್ ಸೈರನ್ ಮೊಳಗಿದ್ದರಿಂದ ತಕ್ಷಣ ಎಚ್ಚೆತ್ತುಕೊಂಡ ಟ್ರಸ್ಟ್ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೇ, ಅಷ್ಟರಲ್ಲಾಗಲೇ ಕಳ್ಳತನ ನಡೆದಿದೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ದೇವಸ್ಥಾನದ ಸೈರನ್ ವೈಯರ್‌ಗಳನ್ನು ಕತ್ತರಿಸಿ, ಸಿಸಿಟಿವಿ ಕ್ಯಾಮೆರಾದ ಡಿವಿಆರ್ (DVR) ಅನ್ನು ಸಹ ಜೊತೆಯಲ್ಲೇ ಕೊಂಡೊಯ್ದಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಹಿಂಬಾಕಿ ಪಿಂಚಣಿಯನ್ನು ತಕ್ಷಣ ಬಿಡುಗಡೆ ಮಾಡಬೇಕು; ರೈತ ಸಂಘ
ಈ ಕುರಿತು ಸ್ಥಳಕ್ಕೆ ಸಖರಾಯಪಟ್ಟಣ ಪೊಲೀಸರು ಹಾಗೂ 112 ತುರ್ತು ವಾಹನದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನ ಸೇವಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಈಶ್ವರನಾಯ್ಕ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.





