“ದಾವಣಗೆರೆ ಜಿಲ್ಲೆಯ ಜೀವನಾಡಿ ಭದ್ರಾ ಜಲಾಶಯದ ನೀರು ಕೈ ತಪ್ಪುವ ಹಂತದಲ್ಲಿದೆ ಎನ್ನುವುದು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಆತಂಕವಾಗಿದ್ದು, ಯಾವುದೇ ಸಂದರ್ಭದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯದಿಂದಿರಿ” ಎಂದು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಭರವಸೆ ನೀಡಿದರು.
ದಾವಣಗೆರೆ ನಗರದಲ್ಲಿನ ತಮ್ಮ ಗೃಹ ಕಚೇರಿಗೆ ಆಗಮಿಸಿದ ಭದ್ರಾ ಅಚ್ಚುಕಟ್ಟು ಭಾಗದ ರೈತರ ಮನವಿಗೆ ಸ್ಪಂದಿಸಿ ಮಾತನಾಡಿದ ಸಚಿವರು “ನೀರಿನ ಸಮಸ್ಯೆ ಉಲ್ಬಣವಾಗದಂತೆ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರೊಂದಿಗೆ ಸಭೆಮಾಡಲು ನಿರ್ಧರಿಸಲಾಗಿದೆ” ಎಂದು ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು.
“2020 ರಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಲ ಸಂಪನ್ಮೂಲ ಇಲಾಖೆ ಅಧ್ಯಕ್ಷತೆಯಲ್ಲಿ ಸಭೆ ನಡೆದ ತೀರ್ಮಾನದಂತೆ, ಚಿತ್ರದುರ್ಗ ಜಿಲ್ಲೆಯ ಕೆಲವು ಪಟ್ಟಣಗಳು ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಕೆಲವು ಗ್ರಾಮಗಳ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧ ಪಟ್ಟಂತೆ ಯೋಜನೆಯನ್ನು ರೂಪಿಸಲಾಗಿದ್ದು, ಪ್ರಸ್ತುತ ಕಾಮಗಾರಿಯನ್ನು ಕೈ ಗೆತ್ತಿಕೊಳ್ಳಲಾಗಿದೆ. ಆದರೆ ಕಾಮಗಾರಿಯು ಅವೈಜ್ಞಾನಿಕವಾಗಿದೆ ಎನ್ನುವುದು ನಮ್ಮ ರೈತರ ಅಭಿಪ್ರಾಯವಾಗಿದ್ದು, ನಾವು ಈ ಹಿಂದೆಯೇ ಕಾಮಗಾರಿಯನ್ನು ತಡೆ ಹಿಡಿಯುವಂತೆ ಕೋರಿದ್ದೆವು” ಎಂದರು.
“ನಮ್ಮ ಜಿಲ್ಲೆಯ ಅನ್ನದಾತರಿಂದ ಕುಡಿಯುವ ನೀರಿನ ಬಗ್ಗೆ ವಿರೋಧವಿಲ್ಲ. ಆದರೆ ಭದ್ರಾ ಕಾಲುವೆ ಬಲದಂಡೆಯ (ಆರ್.ಬಿ.ಸಿ) 250 ಮೀಟರ್ ನಲ್ಲಿ ಚಾನಲ್ ಸೀಳಿ ನೀರು ತೆಗೆದುಕೊಳ್ಳುವ ವಿಚಾರಕ್ಕೆ ವಿರೋಧವಿದೆ” ಎಂದರು.
“ಒಟ್ಟು ಜಲಾಶಯದ ಹಿನ್ನೀರಿನಲ್ಲಿ ಕಾಮನ್ ಇಂಟ್ಯಾಕ್ ಜಾಕ್ ವೆಲ್ ನಿರ್ಮಿಸಿ ಪಂಪಿಂಗ್ ಮೂಲಕ ಕಚ್ಚಾ ಮೂಲಕ ತೆಗೆದುಕೊಳ್ಳುವುದು ಮತ್ತು ಒಟ್ಟು ಪ್ರಮಾಣದ ನೀರನ್ನು 9 ತಿಂಗಳುಗಳ ಜಲಾಶಯದ ಕ್ಯಾನಲ್ ನಿಂದ ಗ್ರಾವಟಿ ಮೂಲಕ ತೆಗೆದು ಕೊಳ್ಳುವುದು. ಕ್ಯಾನಲ್ ನಲ್ಲಿ ನೀರು ಲಭ್ಯವಿಲ್ಲದಿರುವ ಮೂರು ತಿಂಗಳ ಅವಧಿಯಲ್ಲಿ ಭದ್ರಾ ಜಲಾಶಯ ಹಿನ್ನೀರಿನಲ್ಲಿ ಕಾಮನ್ ಇಂಟ್ಯಾಕ್ ಜಾಕ್ ವೆಲ್ ನಿರ್ಮಿಸಿ ಪಂಪಿಂಗ್ ಮೂಲಕ ಕಚ್ಚಾ ನೀರನ್ನು ತೆಗೆದುಕೊಳ್ಳುವುದರಿಂದ ಸರ್ಕಾರಕ್ಕೆ 9 ತಿಂಗಳು ವಿದ್ಯುತ್ ಶುಲ್ಕ ಉಳಿತಾಯ ಮತ್ತು ಗ್ರಾವಿಟಿ ಪ್ಲೋವನ್ನು ಸಮರ್ಥವಾಗಿ ಬಳಸಬಹುದಾಗಿದೆ ಎಂದು ತಿಳಿಸಲಾಗಿರುವುದು ಇವೆರಡು ನಮ್ಮ ಭಾಗದ ರೈತರಿಗೆ ಮಾರಕವಾಗಲಿದೆ” ಎನ್ನುವುದು ಆರೋಪ.
“ಜಲಾಶಯದ ಸ್ಥಳದಿಂದ ಕೇವಲ 500 ಮೀಟರ್ ದೂರದಲ್ಲಿ ಭದ್ರಾ ನದಿ ಇದ್ದು ಇಲ್ಲಿ ನೀರಿನ ಪ್ರಮಾಣ 365 ದಿನವು ಹರಿವು ಇರುವ ಕಾರಣ ನದಿ ಭಾಗದಿಂದ ಜಾಕ್‌ವೆಲ್ ನಿರ್ಮಿಸಿ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಿದ್ದಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೆಳೆ ಬೆಳೆಯಲು ಯಾವುದೇ ತೊಂದರೆಯಾಗುವುದಿಲ್ಲ ಎಂಬುದು ರೈತರುಗಳ ಬೇಡಿಕೆಯಾಗಿದೆ” ಎಂದರು.
“ಈ ವಿಚಾರವನ್ನು ಶೀಘ್ರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಹಾಗೂ ಜಲ ಸಂಪನ್ಮೂಲ ಸಚಿವರ ಗಮನಕ್ಕೆ ತರಲಾಗುವುದು. ಭದ್ರಾ ಅಚ್ಚುಕಟ್ಟು ಭಾಗದ ರೈತರೊಂದಿಗೆ ನಾವಿದ್ದೇವೆ, ಎಲ್ಲರೂ ಒಟ್ಟಾಗಿ ಸಮಸ್ಯೆ ಉಲ್ಬಣವಾಗದ ರೀತಿಯಲ್ಲಿ ಚರ್ಚಿಸೋಣ” ಎಂದು ರೈತರಿಗೆ ಸಚಿವರು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸಿ ರಾಜಕೀಯ ಮಾಡುವುದು ಬೇಡ; ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ
ಈ ಸಂದರ್ಭದಲ್ಲಿ ಭದ್ರಾ ಮಹಾಮಂಡಳಿಯ ಅಧ್ಯಕ್ಷ ದ್ಯಾವಪ್ಪರೆಡ್ಡಿ, ಮುದೇಗೌಡ್ರು ಗಿರೀಶ್, ಮಾನಗಹಳ್ಳಿ ಪರಶುರಾಮ್, ನಂದಿಗಾವಿ ಶ್ರೀನಿವಾಸ್, ಕಾಡಾ ಮಾಜಿ ನಿರ್ದೇಶಕ ಕೆ.ಆಂಜನೇಯ, ತಿಪ್ಪೇರುದ್ರಪ್ಪ ಸಿರಿಗೆರೆ, ಪ್ರಭು ಸಿರಿಗೆರೆ, ರೈತ ಸಂಘದ ಅಧ್ಯಕ್ಷ ನಂದಿತಾವರೆ ಮುರುಗೇಂದ್ರಪ್ಪ, ಹಳೇಬಾತಿ ಶಾಂತಪ್ಪ, ರವಿ, ಮಂಜುನಾಥ ರೆಡ್ಡಿ, ಕುಂಬಳೂರು ಗಿರೀಶ್, ಕುಂದೂರು ರಾಜಪ್ಪ, ಮಾಗೋಡ್ ದೇವೇಂದ್ರಪ್ಪ, ಅಂಜುಬಾಬು, ಕೆ.ಬಿ ಬಸವಲಿಂಗಪ್ಪ, ಕಲ್ಪನಹಳ್ಳಿ ನಾಗರಾಜ್, ಚೇತನ್, ಕೆ.ಎನ್ ಹಳ್ಳಿ ದಿವಾಕರಪ್ಪ, ಬಾತಿ ಉಮೇಶ್, ಆಂಜನೇಯ, ಸೇರಿದಂತೆ ಕಾಡಜ್ಜಿ, ಬಿ.ಕಲ್ಪನಹಳ್ಳಿ, ಬೇತೂರು ಕಡ್ಲೆಬಾಳು, ಅರಸಾಪುರ, ಹಳೇಭಾತಿ, ದೊಡ್ಡಭಾತಿ, ನಾಗರಕಟ್ಟೆ, ರಾಂಪುರ ಹಾಗೂ ಇತರೆ ಗ್ರಾಮಗಳ ರೈತ ಮುಖಂಡರುಗಳು ಉಪಸ್ಥಿತರಿದ್ದರು.