ಎರಡು ವರ್ಷದ ಮಗು ತೆರೆದ ಚರಂಡಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ವಿಜಯಪುರ ನಡೆದಿದ್ದು, ಮಗುವನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಅಣ್ಣನ ಜೊತೆ ಆಟವಾಡುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಚರಂಡಿ ನೀರಿಗೆ ಬಿದ್ದಿದೆ ಎಂದು ವರದಿಯಾಗಿದೆ. ಈ ಘಟನೆಯಿಂದ ಭಯಭೀತನಾಗಿದ್ದ ಜೊತೆಗಿದ್ದ ನಾಲ್ಕು ವರ್ಷದ ಅಣ್ಣ ಓಡಿ ಮನೆಗೆ ವಿಷಯ ತಿಳಿಸಿದ್ದು, ಕುಟುಂಬಸ್ಥರು ಮತ್ತು ನೆರೆ ಹೊರೆಯವರು ಸ್ಥಳಕ್ಕೆ ಧಾವಿಸಿ ಬಾಲಕನ ಮೃತದೇಹ ಹೊರತೆಗಿದ್ದಾರೆ.
ಮೃತ ಬಾಲಕ ಯಾಸೀನ್ ಮುಲ್ಲಾ ಅವರ ಮಗನಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಧಾವಿಸಿ ಜಿಲ್ಲಾಡಳಿತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಳಿಕ ವೈಯಕ್ತಿಕವಾಗಿ 2 ಲಕ್ಷ ರೂ ಪರಿಹಾರ ಕೊಡುವುದಾಗಿ ಭರವಸೆ ನೀಡಿದರು. ಉಪ ಮೇಯರ್ ದಿನೇಶ್ ಹಳ್ಳಿ ಮಾತನಾಡಿ, ಮಹಾನಗರ ಪಾಲಿಕೆಯಿಂದ ನೊಂದ ಕುಟುಂಬಕ್ಕೆ 2 ಲಕ್ಷ ಪರಿಹಾರ ಧನ ನೀಡಲಾಗುವುದು ಎಂದರು.
ವಿಜಯಪುರ ಮಹಾನಗರ ಪಾಲಿಕೆಯ ನಿರ್ಲಕ್ಷದಿಂದ ಒಂದು ಮಗು ಪ್ರಾಣ ಕಳೆದುಕೊಂಡಿದೆ. ಒಳಚರಂಡಿ ಕಾಮಗಾರಿ ಆರು ತಿಂಗಳಾದರೂ ಪೂರ್ಣಗೊಂಡಿಲ್ಲ ಕಾಮಗಾರಿಯ ಬಗ್ಗೆ ಗುತ್ತಿಗೆದಾರರು ಕಾಳಜಿ ವಹಿಸಿಲ್ಲ. ಶಾಸಕರು ಸಹಿತ ಈ ಕುರಿತು ಗಮನ ಹರಿಸಬೇಕಿದೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದರು.
