ಇತ್ತೀಚಿಗೆ ಕೇಸರಿ ಶಾಲು ಹಾಕಿಸಿ ಬಡವರ ಮಕ್ಕಳನ್ನು ಬೀದಿಯಲ್ಲಿ ಧರ್ಮ ರಕ್ಷಣೆ ಹಾಗೂ ಗೋರಕ್ಷಣೆ ಮಾಡಲು ಪ್ರೇರೇಪಿಸಲಾಗುತ್ತಿದೆ. ಅಚ್ಚರಿ ಎಂದರೆ, ಪ್ರೇರೇಪಿಸುತ್ತಿರುವವರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳಿಸುತ್ತಾರೆ. ಅವರು ಧರ್ಮ ರಕ್ಷಣೆಗೆ ಯಾಕೆ ತಮ್ಮ ಮಕ್ಕಳನ್ನು ಕಳಿಸುವುದಿಲ್ಲ? ಬಿಜೆಪಿಗರು ಮೊದಲು ಇದರ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಆಳಂದ ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂದಾಜು 8 ಕೋಟಿ ರೂ. ಮೊತ್ತದ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡ ಹಾಗೂ ಅಂದಾಜು 6.5 ಕೋಟಿ ರೂ. ವೆಚ್ಚದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿ ಅವರು ವೈಜ್ಞಾನಿಕ ಮನೋಭಾವನೆಗೆ ಒತ್ತು ನೀಡದೆ, 5 ಸಾವಿರ ವರ್ಷಗಳ ಹಿಂದಿನ ಆಚರಣೆಗಳನ್ನು ಅನುಸರಿಸುವಂತೆ ಕರೆ ನೀಡುತ್ತಾ, ಅವುಗಳನ್ನು ಅಳವಡಿಸಿಕೊಳ್ಳುವಂತೆ ಇಂಡಿಯನ್ ಸೈನ್ಸ್ ಕಾಂಗ್ರೆಸ್ ನ ಕಾರ್ಯಕ್ರಮದಲ್ಲಿ ಹೇಳುತ್ತಾರೆ. ಆದರೆ, ಎಲ್ಲವನ್ನೂ ಮಕ್ಕಳು ಓದಲಿ ಆದರೆ, ಅದರ ಜೊತೆಗೆ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಲಿ” ಎಂದು ಹೇಳಿದರು.
“ಮಾನವ ಸಂಪನ್ಮೂಲ ನಮ್ಮ ದೇಶದ ಪ್ರಬಲ ಶಕ್ತಿಯಾಗಿದೆ. ನಮ್ಮ ಮಾನವ ಸಂಪನ್ಮೂಲಕ್ಕೆ ಇಡೀ ವಿಶ್ವದಾದ್ಯಂತ ಬಹುಬೇಡಿಕೆ ಇದೆ. ಸಶಕ್ತ ರಾಷ್ಟ್ರ ನಿರ್ಮಾಣವಾಗಬೇಕಾದರೆ ಯುವಶಕ್ತಿಯನ್ನು ಬೆಳೆಸಬೇಕು. ಯುವಕರ ಸಂಖ್ಯಾಬಲಕ್ಕೆ ಸರಿಯಾದ ಶಿಕ್ಷಣ ನೀಡಿದಾಗ ಮಾತ್ರ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಅಣೆಕಟ್ಟೆ ಹಾಗೂ ರಸ್ತೆ ನಿರ್ಮಾಣದ ಜೊತೆಗೆ ಯುವಶಕ್ತಿಗೆ ವೈಜ್ಞಾನಿಕ ಶಿಕ್ಷಣ ನೀಡಿದಾಗ ಮಾತ್ರ ಭಾರತ ಸುಭದ್ರ ರಾಷ್ಟ್ರವಾಗಲಿದೆ” ಎಂದರು.
“ನಾನು ಇತ್ತೀಚಿಗೆ ಅಮೇರಿಕಾಗೆ ತೆರಳಿದ ಸಂದರ್ಭದಲ್ಲಿ ನಮ್ಮ ರಾಜ್ಯದ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಅಲ್ಲಿ ವಿವರಿಸಿ ಹೇಳಬೇಕಿತ್ತು. ಅಲ್ಲಿನ ಕಂಪನಿಗಳ ಪ್ರಮುಖರು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವುದಕ್ಕೆ ಆಸಕ್ತಿ ತೋರಿಸಿದರು. ಇದಕ್ಕೆ ಕಾರಣವಾಗಿದ್ದು ನಮ್ಮಲ್ಲಿನ ಮಾನವಸಂಪನ್ಮೂಲ. ಈ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಬಗ್ಗೆ ಅವರು ಉತ್ಸುಕರಾಗಿದ್ದಾರೆ. ಇದಕ್ಕೆ ಗುಣಮಟ್ಟದ ಶಿಕ್ಷಣವೇ ಕಾರಣವಾಗಿದೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಬೀದರ್ | ರೈತರಿಗೆ ನೆರವಾಗದ ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ : ಬಿ.ವೈ.ವಿಜಯೇಂದ್ರ
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಆಳಂದ ಶಾಸಕ ಬಿ.ಆರ್.ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ ಗುತ್ತೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.