ಫೆ.4ರಂದು ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಬೆಂಗಳೂರಿನಲ್ಲಿ ಇಂದು ಸುಮಾರು ನಾಲ್ಕು ಮಂದಿ ಕ್ಯಾನ್ಸರ್ ಪೀಡಿತ ಮಕ್ಕಳು ಪೊಲೀಸ್ ಕಮಿಷನರ್ ಎದುರು ಪೊಲೀಸ್ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಹಾಗೂ ಪರಿಹಾರ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಇಂದಿನ ಕಾರ್ಯಕ್ರಮದಲ್ಲಿ ಮಕ್ಕಳಾದ ವಿಜಯಪುರದ 10ನೇ ತರಗತಿ ವಿದ್ಯಾರ್ಥಿನಿ ಪಲ್ಲವಿ, ಕೊಪ್ಪಳದ ದಿವ್ಯಶ್ರೀ, 9ನೇ ತರಗತಿಯ ಮೈಸೂರಿನ ವಿಶ್ವಾಸ್ ಮತ್ತು 7ನೇ ತರಗತಿ ವಿದ್ಯಾರ್ಥಿ ತುಮಕೂರಿನ ಜೀವನ್ ಕುಮಾರ್ ಎಂಬವರನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಹೂಗುಚ್ಛ ನೀಡಿ, ಸ್ವಾಗತಿಸಿದರು.

ಬಳಿಕ ಬೆಂಗಳೂರಿನ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಕಮಿಷನರ್ ಬಿ ದಯಾನಂದ, “ಅಪರಾಧಗಳು ಸಮಾಜಕ್ಕೆ ಕ್ಯಾನ್ಸರ್ ರೋಗದಂತೆ. ಕ್ಯಾನ್ಸರ್ ವಿರುದ್ಧ ಹೇಗೆ ವೈದ್ಯರು ರೋಗಿಗಳನ್ನು ಕಾಪಾಡಲು ಶ್ರಮಿಸುತ್ತಾರೋ ಅದೇ ರೀತಿ ಅಪರಾಧಗಳ ವಿರುದ್ಧ ಪೊಲೀಸರು ಹೋರಾಟ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.
“ಜೀವನ ಬಹಳ ಮೌಲ್ಯವಾದದ್ದು. ಅದನ್ನು ರಸ್ತೆ ಅಪಘಾತದ ಮೂಲಕ ಕಳೆದುಕೊಳ್ಳಬಾರದು. ಸಂಚಾರ ಸುರಕ್ಷತೆ ಮತ್ತು ನಿಯಮಗಳನ್ನು ಪಾಲಿಸಿದರೆ ಸುರಕ್ಷಿತವಾಗಿರಬಹುದು. ಬೇರೆಯವರೂ ಕೂಡ ಸಂಚಾರ ನಿಯಮಗಳನ್ನು ಪಾಲಿಸಲು ಪ್ರೇರಣೆ ನೀಡಬೇಕು” ಎಂದು ಸಂದೇಶ ನೀಡಿದರು.
ಇದನ್ನು ಓದಿದ್ದೀರಾ? ಮಂಗಳೂರು | ಇಡಿ ಅಧಿಕಾರಿಗಳ ಸೋಗಿನಲ್ಲಿ ಬೀಡಿ ಉದ್ಯಮಿ ಮನೆಗೆ ದಾಳಿ ಪ್ರಕರಣ: ಮತ್ತೋರ್ವನ ಬಂಧನ
ಈ ಸಂದರ್ಭದಲ್ಲಿ ಪರಿಹಾರ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಣಿಶೆಟ್ಟಿ, ಬೆಂಗಳೂರು ನಗರ ಸಂಚಾರ ಜಂಟಿ ಆಯುಕ್ತ ಎಂ.ಎನ್. ಅನುಚೇತ್, ಕಿದ್ವಾಯಿ ಆಸ್ಪತ್ರೆಯ ಡಾ. ಅರುಣ್, ಲೋಕೇಶ್, ರಾಜಣ್ಣ, ಕ್ಯಾನ್ಸರ್ ಪೀಡಿತ ಮಕ್ಕಳ ಪೋಷಕರು ಉಪಸ್ಥಿತರಿದ್ದರು.






