ಮಕ್ಕಳ ಮನಸ್ಸು ನಿರ್ಮಲವಾಗಿ ಇರುತ್ತದೆ. ಒಳ್ಳೆಯದು, ಕೆಟ್ಟದು ಏನು ಗೊತ್ತಿರುವುದಿಲ್ಲ. ಮಕ್ಕಳಿಗೆ ಅಂಗನವಾಡಿ ಟೀಚರ್‌ಗಳು ಒಳ್ಳೆಯದನ್ನು ಕಲಿಸಿ ಸಮಾಜಮುಖಿಗಳನ್ನಾಗಿಸುವ ಹೊಣೆ ಇರುತ್ತದೆ. ನಾನು ಬಹಳಷ್ಟು ಅಂಗನವಾಡಿಗಳಿಗೆ ಭೇಟಿ ಕೊಟ್ಟಿದ್ದೇನೆ. ಇಲ್ಲಿಯ ಮಕ್ಕಳು ಬಹಳ ಶಿಸ್ತಿನಿಂದ ಇದ್ದಾರೆ ಎಂದು ರೈತ ಸಂಘದ ಜಿಲ್ಲಾ ಸಂಚಾಲಕ ನದೀಮ್ ಪಾಷ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ನ.14ರಂದು ಶ್ರೀರಂಗಪಟ್ಟಣ ತಾಲೂಕಿನ ಕಡತನಾಳು ಗ್ರಾಮದ ಅಂಗನವಾಡಿಯಲ್ಲಿ ವಿಶ್ವಜ್ಞಾನಿ ಅಂಬೇಡ್ಕರ್ ಸಂಘದಿಂದ ಆಚರಿಸಿದ ಮಕ್ಕಳ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಸಿಹಿ, ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್, ಇತರ ವಸ್ತುಗಳನ್ನು ನೀಡಲಾಯಿತು.
ವಿಶ್ವನಾಥ್ ಮಾತನಾಡಿ, ನಾವು ಮಕ್ಕಳಿರಲವ್ವ ಮನೆ ತುಂಬಾ ಅಂತ ಇದ್ದ ಸಮಾಜದಲ್ಲಿ ಬೆಳೆದು ಬಂದವರು. ಮಕ್ಕಳ ಮುಖ ನೋಡಿ ನಮ್ಮ ಕಷ್ಟಗಳನ್ನು ಮರೆಯುತ್ತಿದ್ದೆವು. ಈಗಿರುವ ಎರಡು ಮಕ್ಕಳನ್ನು ನಮ್ಮ ಕೈಲಿ ನೋಡಿಕೊಳ್ಳಲು ಆಗುತಿಲ್ಲ. ಎರಡ್ಮೂರು ವರ್ಷದ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ದಾಸರನ್ನಾಗಿ ಮಾಡುತಿದ್ದೇವೆ. ಮಕ್ಕಳು ಸಮಾಜ ಮುಖಿಗಳಾಗಿ ಬೆಳೆಯಬೇಕೆಂದರೆ ಇಂತ ವ್ಯಸನಗಳಿಂದ ಹೊರತರುವುದು ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಮಾದೇಶ್ ಮಾತನಾಡಿ, ನೆಹರೂ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಮಕ್ಕಳ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದಂತ ವ್ಯಕ್ತಿ ನೆಹರು ಎಂದರು.
ಇದನ್ನು ಓದಿದ್ದೀರಾ? ಮಳೆ | ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಣೆ
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ ಸಿ ಮಾದೇಶ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಅಚ್ಚಪ್ಪನಕೊಪ್ಪಲು ವಿವೇಕಾನಂದ ಜಾಗ್ರತ ಬಳಗದ ಸಂಚಾಲಕ ವಿಶ್ವನಾಥ್, ಮಹಿಳಾ ಸಮಾಜದ ಸಾವಿತ್ರಮ್ಮ, ಜಿಲ್ಲಾ ರೈತ ಸಂಘದ ಸಂಚಾಲಕ ನದೀಮ್ ಪಾಷ, ಧರಸಗುಪ್ಪೆ ಮಂಜುಳಾ, ಅಂಗನವಾಡಿ ಕಾರ್ಯಕರ್ತೆ ಶೈಲಜಾ, ಸಹಾಯಕಿ ಸವಿತಾ ಮುಂತಾದವರು ಭಾಗಿಯಾಗಿದ್ದರು.