ರಾಜ್ಯ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ರೈತ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಎರಡು ಸಾವಿರಾ ರೂ.ಹಣ ಜಮಾವಣೆ ಮಾಡುತ್ತದೆ. ಆದರೆ, ಬ್ಯಾಂಕಿನವರು ಆ ಹಣವನ್ನು ಹಿಡಿಯುತ್ತಿರುವುದನ್ನು ನಿಲ್ಲಿಸದಿದ್ದರೆ ಪ್ರತಿ ಬ್ಯಾಂಕಿಗೆ ಘೇರಾವು ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಚಿಂತಾಮಣಿ ನಗರದ ತಾಲೂಕು ಪಂಚಾಯತಿ ಕಚೇರಿಯಲ್ಲಿರುವ ಸಿ ಡಿ ಪಿ ಒ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ನಂತರ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಕದಿರೇ ಗೌಡ, “ಸ್ಥಳೀಯ ಸಿ ಡಿ ಪಿ ಒ ಅಧಿಕಾರಿಗಳಿಗೆ ಗೃಹಲಕ್ಷ್ಮಿ ಹಣವನ್ನು ಬ್ಯಾಂಕಿನವರು ಪ್ರತಿ ತಿಂಗಳು ರೈತರ ಖಾತೆಯಿಂದ ಕತ್ತರಿಸುತ್ತಿರುವ ಬಗ್ಗೆ ಬಹಳಷ್ಟು ಬಾರಿ ಹೇಳಿದ್ದರೂ ಇಲ್ಲಿವರೆಗೆ ಯಾವುದೇ ರೀತಿ ಕ್ರಮ ವಹಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಬ್ಯಾಂಕುಗಳ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿ ಗೃಹಲಕ್ಷ್ಮಿ ಹಣ ಕತ್ತರಿಸದಂತೆ ಸೂಚನೆ ನೀಡದೆ ನಿರ್ಲಕ್ಷ ವಹಿಸಿದ್ದಾರೆ. ರೈತರು ಬ್ಯಾಂಕುಗಳಲ್ಲಿ ಕೃಷಿ ಸಾಲ ಹಾಗೂ ಇತರೆ ಸಾಲಗಳು ಪಡೆಯಲಾಗಿದೆ. ಆದರೆ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಬಿದ್ದ ತಕ್ಷಣ ಬ್ಯಾಂಕಿನವರು ಅದನ್ನು ಕತ್ತರಿಸಿ ರೈತರಿಗೆ ಬಹಳಷ್ಟು ತೊಂದರೆ ನೀಡುತ್ತಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: ಚಿಂತಾಮಣಿ | ನಿಮಿಷಾ ಪ್ರಿಯಾ ಪ್ರಕರಣ: ತಲಾಲ್ ಕುಟುಂಬದೊಂದಿಗೆ ಡಾ. ಸಿ ಕೆ ಮೌಲಾ ಶರೀಫ್ ಮಾತುಕತೆ
ಈ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸದಿದ್ದರೆ ಸಿ ಡಿ ಪಿ ಒ ಕಚೇರಿಗೂ ಸಹ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡಲಾಗುವುದು ಎಂದು ವಿವರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷರಾದ ರಘುನಾಥರೆಡ್ಡಿ ರಾಜ್ಯ ವಲಯ ಸದ್ಯಸ್ಯ ಯಲ್ಲಪ್ಪ, ಎಸ್ ವಿ ಗಂಗುಲಪ್ಪ ನಾಗರಾಜ್, ತಿಮ್ಮೇಗೌಡ, ಆನಂದರೆಡ್ಡಿ, ಜಿ ಎಂ ಕೊನಪ್ಪ, ನರಸಿಂಹ, ಮುನಿಯಪ್ಪ, ವೆಂಕಟರವಣಪ್ಪ, ವಿ ನಾಗರಾಜ್, ಕೆ ವಿ ರಾಮಪ್ಪ, ಕೆ ಎಂ ಶ್ರೀನಿವಾಸಪ್ಪ, ನಾರಾಯಣಸ್ವಾಮಿ, ಪಿ ನಾಗರಾಜ್, ಅಂಜಪ್ಪ, ಸೀತಾರಾಮ್ ರೆಡ್ಡಿ ಸೇರಿದಂತೆ ಮುಂತಾದವರು ಇದ್ದರು.