ಚಿಂತಾಮಣಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಇಂದು(ಬುಧವಾರ) ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ 7ನೇ ವಾರ್ಡ್ ನಗರಸಭಾ ಸದಸ್ಯ ಆರ್ ಜಗನ್ನಾಥ್, ಉಪಾಧ್ಯಕ್ಷರಾಗಿ 27ನೇ ವಾರ್ಡ್ ಸದಸ್ಯೆ ರಾಣಿಯಮ್ಮ ಅವಿರೋಧ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ನಗರಸಭಾ ಸದಸ್ಯ ಆರ್ ಜಗನ್ನಾಥ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಣಿಯಮ್ಮ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಬೇರೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗದ ಹಿನ್ನೆಲೆ ನಾಮಪತ್ರ ಸಲ್ಲಿಸಿದ್ದ ಇಬ್ಬರು ಸದಸ್ಯರನ್ನು ಆವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿ ಅಶ್ವಿನ್ ಚುನಾವಣೆ ಫಲಿತಾಂಶ ಘೋಷಣೆ ಮಾಡಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂ ಮಾಲೆ ಹಾಕಿ ಶುಭ ಕೋರಿ, ನಗರಸಭಾ ಸದಸ್ಯರು ಒಗ್ಗಟ್ಟಿನಿಂದ ನಗರವನ್ನು ಅಭಿವೃದ್ಧಿ ಪಥದತ್ತ ಸಾಗಿಸಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಕಾರ್ಯಕರ್ತರು ನಗರಸಭೆ ಮುಂಭಾಗ ಪಟಾಕಿ ಸಿಡಿಸಿ ಗೆಲುವನ್ನು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಜಗದೀಶ್, ರಾಜಾಚಾರಿ, ಹರೀಶ್, ಅಕ್ಷಯ್ ಸೇರಿದಂತೆ ಇತರೆ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಹಾಜರಿದ್ದರು.