ಕಾಂಗ್ರೆಸ್ ಪಕ್ಷದ ಮೊದಲ ಸಚಿವರ ಪಟ್ಟಿಯಲ್ಲಿ ನಮ್ಮ ತಾಲೂಕಿನ ಶಾಸಕರು ಹಾಗೂ ಮಾಜಿ ಸಚಿವರಾದ ಡಾ.ಎಂ.ಸಿ.ಸುಧಾಕರ್ ರೆಡ್ಡಿ ಅವರ ಹೆಸರು ನೂರಕ್ಕೆ ನೂರರಷ್ಟು ಇರಲಿದೆ ಎಂಬ ವಿಶ್ವಾಸ ನಮಗಿತ್ತು.ಆದರೆ, ಕಾರಣಾಂತರಗಳಿಂದ ಹೈಕಮಾಂಡ್ ಸೂಚನೆಯಂತೆ ಎರಡನೇ ಪಟ್ಟಿಯಲ್ಲಿ ಅವರ ಹೆಸರು ಪ್ರಕಟಗೊಳ್ಳಲಿದೆ ಎಂದು ತಿಳಿದುಬಂದಿದೆ.ಈ ಹಿನ್ನೆಲೆಯಲ್ಲಿ,ಎರಡನೇ ಪಟ್ಟಿಯಲ್ಲಿ ನಮ್ಮ ನಾಯಕರಾದ ಸುಧಾಕರ್ ರೆಡ್ಡಿ ಅವರಿಗೆ ಖಂಡಿತವಾಗಿಯೂ ಸಚಿವ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಲು ತಾಲೂಕಿನ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಸೇರಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಒತ್ತಾಯಿಸುತ್ತಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುರುಗಮಲ್ಲ ಲಕ್ಷ್ಮೀನಾರಾಯಣರೆಡ್ಡಿ ರವರು ಹೇಳಿದರು.
ಇಂದು ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದವರು ರಾಜ್ಯದ ಜನತೆಗೆ, ಪಕ್ಷದ ಕಾರ್ಯಕರ್ತರಿಗೆ ಮತ್ತು ಹೈಕಮಾಂಡ್ ಗೂ ಸುಧಾಕರ್ ಅವರ ಕಾರ್ಯದಕ್ಷತೆ ತಿಳಿದಿದೆ.ಈ ಹಿಂದೆ ಅವರು ಉನ್ನತ ಶಿಕ್ಷಣ ಸಚಿವರಾಗಿ ಇಡೀ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಬದಲಾವಣೆಗಳನ್ನು ತಂದಿದ್ದರು. ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು, ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಶಿಕ್ಷಣ ಕ್ಷೇತ್ರವು ಮಾದರಿಯಾಗುವಂತೆ ಕ್ರಾಂತಿಕಾರಿ ಕೆಲಸಗಳನ್ನು ಮಾಡಿದ್ದನ್ನು ರಾಜ್ಯದ ಜನತೆ ಮರೆತಿಲ್ಲ.
ನಮ್ಮ ನಾಯಕರಿಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ಪ್ರಾಮಾಣಿಕವಾಗಿ,ಪಾರದರ್ಶಕವಾಗಿ ಮತ್ತು ಯಾವುದೇ ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲದಂತೆ ನಿಭಾಯಿಸುವ ಏಕೈಕ ವ್ಯಕ್ತಿ ಎಂದರೆ ಅದು ಡಾ. ಸುಧಾಕರ್.
ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಚಿಂತಾಮಣಿ ಕ್ಷೇತ್ರದಲ್ಲಿ ಸುಮಾರು 4,000 ದಿಂದ 5,000 ಕೋಟಿ ರೂಪಾಯಿಗಳ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿವೆ. ಮುಂಬರುವ ದಿನಗಳಲ್ಲಿ ಈ ಎಲ್ಲಾ ಕಾಮಗಾರಿಗಳು ಸುಗಮವಾಗಿ ಪೂರ್ಣಗೊಳ್ಳಬೇಕಾದರೆ ಮತ್ತು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಗೊಳ್ಳಬೇಕಾದರೆ ಡಾ. ಸುಧಾಕರ್ ಅವರಿಗೆ ಸಚಿವ ಸ್ಥಾನ ಸಿಗುವುದು ಅನಿವಾರ್ಯವಾಗಿದೆ. ಬೇರೆ ಯಾರಿಂದಲೂ ಈ ಮಟ್ಟದ ಅಭಿವೃದ್ಧಿ ಸಾಧ್ಯವಿಲ್ಲ, ಅದು ಕೇವಲ ಡಾ. ಸುಧಾಕರ್ ಅವರಿಂದ ಮಾತ್ರ ಸಾಧ್ಯ ಎಂದು ಲಕ್ಷ್ಮೀನಾರಾಯಣ ರೆಡ್ಡಿ ಅವರು ಒತ್ತಾಯಿಸಿದರು.
ಅಂದಿನ ಸಚಿವ ಸಂಪುಟದಲ್ಲಿ, ಸಿದ್ದರಾಮಯ್ಯನವರ ಮುಖಂಡತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ನಮ್ಮ ನಾಯಕರಾದ ಡಾ.ಎಂ.ಸಿ.ಸುಧಾಕರ್ ಅವರಿಗೆ ಹೈಕಮಾಂಡ್ನವರು ಎಲ್ಲರೂ ಸೇರಿ ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ಮಾಡುವ ಅವಕಾಶವನ್ನು ಒದಗಿಸಿಕೊಟ್ಟರು.ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ ದಿನದಿಂದ ನೆನ್ನೆ ಮೊನ್ನೆ ಸಚಿವ ಸ್ಥಾನ ಬಿಡುವವರೆಗೂ ಅವರು ಪ್ರತಿದಿನ 18 ರಿಂದ 20 ಗಂಟೆಗಳ ಕಾಲ ಸತತವಾಗಿ ಅವರ ಸೇವೆ, ಶ್ರಮ ಎಲ್ಲವನ್ನೂ ಸಹ ಉನ್ನತ ಶಿಕ್ಷಣಕ್ಕಾಗಿ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿರುವ ವಿಷಯ ತಮಗೆಲ್ಲರಿಗೂ ಗೊತ್ತೇ ಇದೆ”ಎಂದು ವಿವರಿಸಿದರು.
ಅವರು ಕೈಗೊಂಡಿರುವ ಕಾರ್ಯಗಳು ಇವತ್ತು ಉನ್ನತ ಶಿಕ್ಷಣ ಸಚಿವಾಲಯದಲ್ಲಿ ಮಾದರಿಯಾಗಿವೆ. ಅವರು ಅನೇಕಾನೇಕ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡಿ, ವಯಸ್ಕರ ಅಭಿವೃದ್ಧಿಗೆ ಹಾಗೂ ಉನ್ನತ ಶಿಕ್ಷಣದಲ್ಲಿ ಏನೇನು ಬದಲಾವಣೆಗಳನ್ನು ತರಬೇಕು ಮತ್ತು ಅದನ್ನು ಇಡೀ ದೇಶಕ್ಕೆ ಮಾದರಿಯಾಗಿ ರೂಪಗೊಳ್ಳುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ” ಎಂದು ಶ್ಲಾಘಿಸಿದರು.
”ನಂತರ ನಮ್ಮ ಜಿಲ್ಲೆಯಾದ್ಯಂತ ಹಾಗೂ ಇಡೀ ಜಿಲ್ಲೆಯಲ್ಲಿ ಯಾವುದೇ ಭೇದಭಾವವಿಲ್ಲದೆ ಎಲ್ಲಾ ಜಿಲ್ಲೆಗಳಿಗೂ ಸಮಾನಾಂತರವಾಗಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಮಾದರಿಯಾಗಿದ್ದಾರೆ. ಇಂತಹ ಒಂದು ಅಹರ್ನಿಶವಾಗಿ ದುಡಿದಿರುವ ನಮ್ಮ ನಾಯಕರಾದ ಸುಧಾಕರ್ ಅವರಿಗೆ, ಈ ಒಂದು ಮಾನ್ಯ ಡಿ.ಕೆ. ಶಿವಕುಮಾರ್ ಅವರ ಮಂತ್ರಿಮಂಡಲದಲ್ಲಿ ಮೊದಲನೇ ಪಟ್ಟಿಯಲ್ಲೇ ನಮ್ಮ ನಾಯಕರ ಹೆಸರು ಬರುತ್ತೆ ಎಂಬ ಆಶಾಭಾವನೆ ಇತ್ತು. ಕಾರಣಾಂತರಗಳಿಂದ ಆ ಪಟ್ಟಿಯಲ್ಲಿ ನಮ್ಮ ನಾಯಕರ ಹೆಸರು ಇಲ್ಲದೆ ಇರುವುದು ನಮಗೆ ಖೇದ ಉಂಟುಮಾಡಿದೆ”ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಐಶರ್ ಕಂಪನಿ ಸಿಬ್ಬಂದಿ ನಿರ್ಲಕ್ಷ್ಯ ಚಾಲಕರ ಪ್ರತಿಭಟನೆ – ಈ ದಿನ.ಕಾಮ್
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಚಿನ್ನಪ್ಪ, ಸೈಯದ್ ಏಜಾಜ್,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬುಕ್ಕನಹಳ್ಳಿ ಶಿವಣ್ಣ,ಸ್ಕೂಲ್ ಸುಬ್ಬಾರೆಡ್ಡಿ, ನಗರಾಭಿವೃದ್ಧಿ ಅಧ್ಯಕ್ಷರಾದ ಶ್ರೀನಾಥ್ ಬಾಬು,ಕಾಂಗ್ರೆಸ್ ಮುಖಂಡರಾದ ಶೇಕ್ ಸಾಧಿಕ್ ರಜ್ವಿ, ಸೇರಿದಂತೆ ಇನ್ನೂ ಹಲವು ಮುಖಂಡರುಗಳು ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಮಟ್ಟದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.





