ಕೋಲಾರ ಜಿಲ್ಲಾ ಹಾಲು ಒಕ್ಕೂಟ (ಕೋಮುಲ್) ವ್ಯಾಪ್ತಿಯಲ್ಲಿನ ಎಂಪಿಸಿಎಸ್ ಗಳಲ್ಲಿ ಬಳಕೆಯಲ್ಲಿರುವ ಕಾಮನ್ ಸಾಫ್ಟ್‌ವೇರ್‌ನಲ್ಲಿನ ದೋಷಗಳನ್ನು ತಕ್ಷಣ ಸರಿಪಡಿಸಬೇಕು. ಇಲ್ಲವಾದಲ್ಲಿ ಸಾಫ್ಟ್‌ವೇರ್ ಬಳಕೆಯನ್ನು ಸ್ಥಗಿತಗೊಳಿಸಿ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಕೋಲಾರ ತಾಲ್ಲೂಕು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘ ಎಚ್ಚರಿಸಿದೆ.
ಕೋಮುಲ್ ಅಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಂಘದ ವತಿಯಿಂದ ಇವತ್ತು ಮನವಿ ಸಲ್ಲಿಸಲಾಯಿತು.
ಎಂಪಿಸಿಎಸ್ ಗಳಲ್ಲಿ ಬಳಕೆ ಮಾಡುತ್ತಿರುವ ಕಾಮನ್ ಸಾಫ್ಟ್‌ವೇರ್‌ನಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ಹಲವು ತಿಂಗಳುಗಳಿಂದ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ. ಸಾಫ್ಟ್‌ವೇರ್ ಬಳಕೆಗೆ ಸಂಬಂಧಿಸಿದಂತೆ ಡೈರಿಗಳಲ್ಲಿನ ಮುಖ್ಯ ಕಾರ್ಯನಿರ್ವಾಹಕರಿಗೆ ಸಮರ್ಪಕ ತರಬೇತಿಯನ್ನೂ ನೀಡಿಲ್ಲ. ಇದರಿಂದ ಉತ್ಪಾದಕರ ಮೊಬೈಲ್ ಅಪ್ಲಿಕೇಶನ್ ಮತ್ತು ಸಂಘಗಳ ಲೆಕ್ಕಪತ್ರಗಳ ನಡುವೆ ಹೊಂದಾಣಿಕೆ ಸಮಸ್ಯೆಗಳು ಉಂಟಾಗುತ್ತಿದ್ದು, ರೈತರು ಹಾಗೂ ಸಂಘದ ನೌಕರರ ನಡುವೆ ಅನಗತ್ಯ ಗೊಂದಲ ಮತ್ತು ವಾಗ್ವಾದಗಳಿಗೆ ಕಾರಣವಾಗುತ್ತಿದೆ ಎಂದು ದೂರಲಾಗಿದೆ.
ಸಾಫ್ಟ್‌ವೇರ್‌ನಲ್ಲಿನ ಸಮಸ್ಯೆಗಳನ್ನು ತಕ್ಷಣ ಸರಿಪಡಿಸದಿದ್ದರೆ ಈವರೆಗೆ ಸಲ್ಲಿಸಿರುವ ಮನವಿಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು, ದೋಷ ನಿವಾರಣೆಯಾಗುವವರೆಗೂ ಕಾಮನ್ ಸಾಫ್ಟ್‌ವೇರ್ ಬಳಕೆಯನ್ನು ಸ್ಥಗಿತಗೊಳಿಸುವುದಾಗಿ ಸಂಘವು ತಿಳಿಸಿದೆ.
ಇದಲ್ಲದೆ, ಹಾಲಿನ ಬಿಲ್ಲುಗಳಲ್ಲಿ ಟಿಡಿಎಸ್ ಕಡಿತವಾಗುತ್ತಿರುವ ಬಗ್ಗೆ ಕೂಡ ನೌಕರರ ಸಂಘ ಆಕ್ಷೇಪ ವ್ಯಕ್ತಪಡಿಸಿದ್ದು, ಒಕ್ಕೂಟದ ವತಿಯಿಂದ ಸಂಘಗಳಿಂದ ಪಡೆಯಲಾಗುತ್ತಿರುವ ಶುಲ್ಕವೇ ಇದಕ್ಕೆ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ಸಂಘ, ಇದರಿಂದ ಸಂಘಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಆರೋಪಿಸಿದೆ.
ಹಾಲಿನ ದರ ಪರಿಷ್ಕರಣೆ ಸೇರಿದಂತೆ ಪ್ರಮುಖ ಸುತ್ತೋಲೆಗಳು ಸಂಘಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಕಾಮನ್ ಸಾಫ್ಟ್‌ವೇರ್ ವ್ಯವಸ್ಥೆಯಲ್ಲಿರುವ ಲೋಪಗಳಿಂದ ಮಾಹಿತಿ ವಿನಿಮಯದಲ್ಲಿ ತೊಂದರೆ ಉಂಟಾಗುತ್ತಿದೆ ಎಂದು ಸಂಘ ಆರೋಪಿಸಿದೆ.
ಆದ್ದರಿಂದ ಕಾಮನ್ ಸಾಫ್ಟ್‌ವೇರ್‌ನ ತಾಂತ್ರಿಕ ದೋಷಗಳನ್ನು ತುರ್ತಾಗಿ ಸರಿಪಡಿಸಿ, ಟಿಡಿಎಸ್ ಕಡಿತ ಸಮಸ್ಯೆಗೆ ಪರಿಹಾರ ಕಂಡುಹಿಡಿದು, ಸಂಘಗಳ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನೌಕರರ ಸಂಘ ಆಗ್ರಹಿಸಿದೆ.
ಇದನ್ನು ಓದಿದ್ದೀರಾ..? ಕೋಲಾರ | ಮಾದಕ ವಸ್ತುಗಳ ಪಿಡುಗನ್ನು ನಿಲ್ಲಿಸಿ ಯುವಕರನ್ನು ರಕ್ಷಸಿ, ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಕೋಲಾರ ಯುವಕರಿಂದ ಒತ್ತಾಯ.
ನಿಯೋಗದಲ್ಲಿ ಕೋಲಾರ ತಾಲೂಕು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ಜಿ.ಎಂ.ಮುನಿಯಪ್ಪ (ರಾಮು), ಪ್ರಧಾನ ಕಾರ್ಯದರ್ಶಿ ಶಿವರುದ್ರಪ್ಪ, ಲೋಕೇಶ್, ಬೈರೇಗೌಡ, ಮಂಜುನಾಥ್, ಶಿವಾನಂದ್ ಇತರರು ಹಾಜರಿದ್ದರು.





