ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯ ಮುನಗನಹಳ್ಳಿಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವ ಮೂಲಕ ಕೆರೆಗಳ ಮೂಲ ಸ್ವರೂಪವನ್ನೇ ಹಾಳು ಮಾಡುತ್ತಿದ್ದಾರೆ. ಕೆರೆಗಳನ್ನು ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಸಿದ್ದಾರೆ.
ಚಿಂತಾಮಣಿ ತಾಲೂಕಿನ ಮುನಗನಹಳ್ಳಿ ಗ್ರಾಮದ ಕೆರೆ ಹಾಗೂ ಅಂಗಳದ ಅಕ್ಕಪಕ್ಕ ಹಾಡಹಗಲೇ ರಾಜಾರೋಷವಾಗಿ ಇಲಾಖೆ ಅಧಿಕಾರಿಗಳ ಅನುಮತಿ ಪಡೆಯದೆ ಜೆಸಿಬಿ ಬಳಸಿ ತೋಟಗಳಿಗೆ ಅಕ್ರಮವಾಗಿ ಮಣ್ಣು ಸಾಗಣೆ ಮಾಡುತ್ತಿದ್ದಾರೆ. ಕೆರೆ ಕುಂಟೆ ಸರಿಯಾಗಿ ಇದ್ದರೆ ಮಾತ್ರ ಮಳೆ ನೀರು ಶೇಖರಣೆಯಾಗುತ್ತದೆ. ಇದರಿಂದಾಗಿ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಆದರೆ,ಕೆಲವು ಜನರು ಹಣದಾಸೆಗೆ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣುಗಾರಿಕೆ ಮಾಡುವ ಮೂಲಕ ಕೆರೆಗಳ ನಾಶಕ್ಕೆ ಮುಂದಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಬೇಸಿಗೆ ಕಾಲದಲ್ಲಿ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ನಿತ್ಯ ಜೆಸಿಬಿಯೊಂದಿಗೆ ಹತ್ತಾರು ಟ್ರ್ಯಾಕ್ಟರ್ ಬಳಸಿ ಮಣ್ಣು ತೆಗೆಯುವ ದಂಧೆ ಹೆಚ್ಚಾಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸೇರಿದಂತೆ ಇತರ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಕೆರೆಗಳಲ್ಲಿ ಇರುವ ಹೂಳು ತೆಗೆದು ಕೆರೆಗಳನ್ನು ಜೀರ್ಣೋದ್ಧಾರ ಮಾಡುತ್ತಿದ್ದರೆ ಮತ್ತೊಂದು ಕಡೆ ಕೆಲವರು ಅಕ್ರಮ ಮಣ್ಣುಗಾರಿಕೆಯಿಂದ ಹಣ ಸಂಪಾದಿಸಲು ಕೆರೆಗಳನ್ನು ಹಾಳು ಮಾಡಲು ಹೊರಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಣ್ಣು ತೆಗೆಯುವವರು ವಾರದ ರಜಾ ದಿನಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಅಧಿಕಾರಿಗಳ ಭಯವಿಲ್ಲದೇ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿದೆ. ಕಂದಾಯ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ,ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ರಜೆ ಇದ್ದರೆ ಸ್ಥಳಕ್ಕೆ ಬರುವುದಿಲ್ಲ ಎಂಬ ಮುಂದಾಲೋಚನೆಯಿಂದ ಮಣ್ಣು ಎತ್ತುವುದು ಎಗ್ಗಿಲ್ಲದೆ ನಡೆಯುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
ಅಕ್ರಮ ದಂಧೆಯಲ್ಲಿ ತೊಡಗಿರುವವರನ್ನು ಸಾರ್ವಜನಿಕರು ತಡೆದು ಮಣ್ಣು ತೆಗೆಯುವವರನ್ನು ಪ್ರಶ್ನಿಸಿದರೆ ‘ನಾವು ಪರವಾನಗಿ ಪಡೆದಿದ್ದೇವೆ’ ಎಂದು ಸಬೂಬು ಹೇಳುವ ಮೂಲಕ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದರ ಮೂಲಕ ಕೆರೆಗಳನ್ನು ಸಂರಕ್ಷಣೆ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಇದನ್ನು ಓದಿದ್ದೀರಾ? ಮಂಗಳೂರು ಗುಂಪು ಹತ್ಯೆ | ಸಂತ್ರಸ್ತ ಅಶ್ರಫ್ ಕುಟುಂಬಕ್ಕೆ ಯುಟಿ ಖಾದರ್, ಸಚಿವ ಜಮೀರ್‌ರಿಂದ ಪರಿಹಾರ ವಿತರಣೆ
ಮುನಗನಹಳ್ಳಿಯ ಕೆರೆ ಹಾಗೂ ಅಂಗಳದಲ್ಲಿ ಅಕ್ರಮವಾಗಿ ಜೆಸಿಬಿ ಮುಖಾಂತರ ಮಣ್ಣು ಎತ್ತುತ್ತಿದ್ದನ್ನು ಸೆರೆ ಹಿಡಿಯಲು ಮಾಧ್ಯಮದವರು ಹೋದ ನಂತರ ಜೆಸಿಬಿ ಹಾಗೂ ಟ್ರಾಕ್ ಅಲ್ಲಿಂದ ನಾಪತ್ತೆಯಾಗಿದೆ. ಇದರ ಮಾಹಿತಿ ಕೂಡಲೇ ತಾಲೂಕು ದಂಡಾಧಿಕಾರಿಗಳ ಗಮನಕ್ಕೆ ತಂದ ತಕ್ಷಣ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಪಸ್ ಬಂದಿದ್ದಾರೆ.

ಈ ಕುರಿತು ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಕೆರೆಯಲ್ಲಿ ಮಣ್ಣು ಎತ್ತಲು ಪಂಚಾಯತಿಯಿಂದ ಯಾವುದೇ ಅನುಮತಿ ಕೊಟ್ಟಿಲ್ಲ ಎಂದು ಉತ್ತರಿಸಿದ್ದಾರೆ. ಇನ್ನು ತಾಲೂಕು ದಂಡಾಧಿಕಾರಿಗಳು ಮಣ್ಣು ಎತ್ತಿರುವವರ ವಿರುದ್ಧ ಕ್ರಮ ಜರುಗಿಸಲು ಸ್ಥಳೀಯ ಪಂಚಾಯಿತಿಗೆ ನೋಟಿಸ್ ನೀಡಿ ಮಣ್ಣು ಎತ್ತಿರುವವರಿಂದ ದಂಡ ವಸೂಲಿ ಮಾಡಲಾಗುವುದು ಎಂದು ಹೇಳಿದ್ದಾರೆ.
