ಚಿಂತಾಮಣಿ ನಗರದಲ್ಲಿ ಸುಮಾರು ವರ್ಷಗಳಿಂದ ಐಡಿಎಸ್‌ಎಂಟಿ ಮಾರುಕಟ್ಟೆಯಲ್ಲಿರುವ ನಗರಸಭೆ ಅಂಗಡಿ ಮಳಿಗೆಗಳ ಬಾಡಿಗೆ ನೀಡದೆ ಹಾಗೂ ತೆರಿಗೆ ಕಟ್ಟದೆ ರಾಜಾರೋಷವಾಗಿ ಅಂಗಡಿಗಳನ್ನು ನಡೆಸುತ್ತಿದ್ದ ವರ್ತಕರಿಗೆ ನಗರಸಭೆಯ ಕಮಿಷನರ್ ಚಲಪತಿ ಬಿಸಿ ಮುಟ್ಟಿಸಿದ್ದು, ಅಂಗಡಿಗಳಿಗೆ ಬೀಗ ಜಡಿದಿದ್ದಾರೆ.
ಚಿಂತಾಮಣಿ ನಗರದ ಜೋಡಿ ರಸ್ತೆಯ ಐ ಡಿ ಎಸ್ ಎಂ ಟಿ ಮಾರುಕಟ್ಟೆಯಲ್ಲಿರುವ ನಗರ ಸಭೆಯ ಅಂಗಡಿ ಮಳಿಗೆಗಳು ಸುಮಾರು ಜನರು ಹರಾಜಿಗೆ ಪಡೆದು ಬೇರೆ ವ್ಯಕ್ತಿಗಳಿಗೆ ದುಪಟ್ಟು ಬಾಡಿಗೆಗೆ ನೀಡಿದ್ದು, ಅವರು ಸಮಯಕ್ಕೆ ಸರಿಯಾಗಿ ಲಕ್ಷಾಂತರ ರೂಪಾಯಿ ಬಾಡಿಗೆ ನೀಡದೆ ತೆರಿಗೆ ಕಟ್ಟದೆ ನಿರ್ಲಕ್ಷ ಮಾಡಿದ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಮೂರು ಬಾರಿ ನಗರಸಭೆಯಿಂದ ಎಚ್ಚರಿಕೆ ಕೊಡಲಾಗಿತ್ತು. ಅಷ್ಟಾದರೂ ಅಂಗಡಿ ಮಳಿಗೆಗಳ ಬಾಡಿಗೆ ಕಟ್ಟದೇ ಇರುವ ಕಾರಣಕ್ಕೆ ಶನಿವಾರ ಬೆಳಗ್ಗೆ ನಗರಸಭೆಯ ಪೌರಾಯುಕ್ತರಾದ ಜಿಎನ್ ಚಲಪತಿ, ಹಾಗೂ ಸಿಬ್ಬಂದಿ ಬಾಡಿಗೆ ಕಟ್ಟದೇ ಇರುವ ಅಂಗಡಿಗಳ ಬೀಗ ಹಾಕಿ ಎಚ್ಚರಿಕೆ ನೀಡಿದ್ದಾರೆ.
ಅದಲ್ಲದೇ ಐ ಡಿ ಎಸ್ ಎಂ ಟಿ ಮಾರುಕಟ್ಟೆಯ ಅಂಗಡಿ ಮಳಿಗೆಗಳ ಮೇಲೆ ಕೆಲವರು ಫುಟ್ ಪಾತ್ ಒತ್ತುವರಿ ಮಾಡಿಕೊಂಡಿದ್ದು ಕೂಡಲೇ ತೆರವುಗೊಳಿಸಿಕೊಳ್ಳುವಂತೆ ಎಚ್ಚರಿಕೆ ಕೊಟ್ಟಿದ್ದಾರೆ.

ಇಷ್ಟೇ ಅಲ್ಲದೆ ನಗರದ ಎಸ್ ಎಲ್ ಎನ್ ಚಿತ್ರಮಂದಿರದ ಮುಂಭಾಗ ನಗರ ಸಭೆಯ ಅಂಗಡಿಗಳ ತೆರಿಗೆ ಹಾಗೂ ಲೈಸೆನ್ಸ್ ಬಗ್ಗೆ ವಿಚಾರಣೆ ಮಾಡುವ ವೇಳೆ ನಗರಸಭೆಯ ಇನ್ಸ್ಪೆಕ್ಟರ್ ಆರತಿ ರವರ ಮೇಲೆ ಅಂಗಡಿಯಲ್ಲಿ ಇದ್ದ ಕೆಲ ಖಾಸಗಿ ಮಾಲೀಕರು ನಗರ ಸಭೆಯ ಸಿಬ್ಬಂದಿ ಮೇಲೆ ದರ್ಪ ತೋರಿದ ಕಾರಣ ಪೌರಾಯುಕ್ತರು ಖಾಸಗಿ ವ್ಯಕ್ತಿಗಳನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದರೆ ಅಂತಹ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹೆಣ್ಣು ಮಕ್ಕಳ ಸುರಕ್ಷತೆಗೆ ‘ಶಕ್ತಿಶ್ರೀ’ ಸಾಕೇ?
ಈ ವೇಳೆ ಮಾತನಾಡಿದ ಪೌರಾಯುಕ್ತರಾದ ಜಿ ಎನ್ ಚಲಪತಿ, ಸರ್ಕಾರಿ ಸುತ್ತೋಲೆ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ನಗರ ಸಭೆಯ ಅಂಗಡಿ ಮಳಿಗೆಗಳ ಬಾಡಿಗೆ ಸುಮಾರು ಲಕ್ಷಾಂತರ ರೂಪಾಯಿ ಉಳಿಸಿಕೊಂಡಿರುವ ಕಾರಣಕ್ಕೆ ಬೀಗ ಜಡಿಯಲಾಗಿದೆ. ಸುಮಾರು ಅಂಗಡಿಗಳು ವೃತ್ತಿಪರ ಸಹ ಪಡೆದಿಲ್ಲ. ನಮ್ಮ ಉದ್ದೇಶ ವರ್ತಕರಿಗೆ ತೊಂದರೆ ಕೊಡುವುದಲ್ಲ. ಹರಾಜಲ್ಲಿ ಅಂಗಡಿಗಳು ಪಡೆದವರು ಬೇರೆಯವರಿಗೆ ದುಪ್ಪಟ್ಟು ಹಣದಲ್ಲಿ ಬಾಡಿಗೆಗೆ ನೀಡಿದ್ದಾರೆ. ಅವರುಗಳು ಕೂಡಲೇ ಬಾಕಿ ಇರುವ ಬಾಡಿಗೆ ಹಣ ಹಾಗೂ ತೆರಿಗೆ ಹಣವನ್ನು ಕಟ್ಟದೇ ಇದ್ದರೆ ಅವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದರು.
15 ವರ್ಷಗಳಿಗಿಂತ ಹೆಚ್ಚು ಕಾಲ ಹರಾಜ್ ನಲ್ಲಿ ಪಡೆದಿರುವವರನ್ನು ತೆರವು ಮಾಡಲಾಗುವುದು. ಯಾಕಂದರೆ ಸುಮಾರು 23 ಕೋಟಿಗಳಷ್ಟು ಅನುದಾನ ಮಾರುಕಟ್ಟೆಯ ಅಂಗಡಿ ಮಳಿಗೆಗಳ ಅಭಿವೃದ್ಧಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ ಸಿ ಸುಧಾಕರ್ ರವರು ಅನುದಾನವನ್ನು ತಂದಿದ್ದು, ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.

