ಸಬ್ ರಿಜಿಸ್ಟರ್ ನಾರಾಯಣಪ್ಪ ವರ್ಗಾವಣೆಯಾದ ಬೆನ್ನಲ್ಲೇ ಅವರು ಹಾಕಿದ್ದ ʼಲಂಚ ಸ್ವೀಕರಿಸುವುದಿಲ್ಲʼವೆಂಬ ನಾಮಫಲಕ ನಾಪತ್ತೆಯಾಗಿರುವ ಘಟನೆ ಚಿಂತಾಮಣಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಂಡುಬಂದಿದೆ.
ಚಿಂತಾಮಣಿ ವಾಣಿಜ್ಯ ನಗರಿಯೆಂದೇ ಹೆಸರುವಾಸಿಯಾಗಿದ್ದು, ಇಲ್ಲಿ ವ್ಯಾಪಾರ ವಹಿವಾಟು ಸೇರಿದಂತೆ ರಿಯಲ್ ಎಸ್ಟೇಟ್ ವ್ಯಾಪಾರವೂ ಕೂಡ ಬಲು ಜೋರಾಗಿ ನಡೆಯುತ್ತದೆ. ಇಲ್ಲಿನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಿತ್ಯವೂ ಹಲವು ಜನ ಮಾರಾಟ ಮಾಡುವ ಜಮೀನುಗಳು ಸೇರಿದಂತೆ ವಿವಾಹ ನೋಂದಣಿ ಪ್ರಕ್ರಿಯೆಗಳೂ ಕೂಡ ಅತಿ ಹೆಚ್ಚಾಗಿ ನಡೆಯುತ್ತವೆ.
ಈ ಹಿಂದೆ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಿರಿಯ ಉಪನೋಂದಣಾಧಿಕಾರಿ ನಾರಾಯಣಪ್ಪ ಅವರು ತಮ್ಮ ಕಚೇರಿಯಲ್ಲಿ ಲಂಚವನ್ನು ಬೇಡುವುದು, ಪಡೆಯುವುದು ಅಪರಾಧ. ಭ್ರಷ್ಟತೆಯನ್ನು ವರಿಸುವುದು ಮೆರೆಸುವುದು ದೇಶ ದ್ರೋಹ. ಪ್ರಮಾಣಿಕತೆಯ ಅಳವಡಿಕೆ ನಡವಳಿಕೆ ದೇಶ ಸೇವೆಯಾದರೆ, ಪ್ರಾಮಾಣಿಕರು ನಾವಾಗಿ ದೇಶ ಸೇವೆಯಲ್ಲಿ ಭಾಗಿಯಾಗೋಣ, ಪ್ರಾಮಾಣಿಕ ನಡವಳಿಕೆಯೇ ನಿಜವಾದ ದೇಶ ಸೇವೆ. ʼಲಂಚ ಸ್ವೀಕರಿಸುವದಿಲ್ಲ, ಭ್ರಷ್ಟಾಚಾರವನ್ನು ಬೆಂಬಲಿಸದಿರುವುದಕ್ಕೆ ತಮಗೆ ಧನ್ಯವಾದಗಳುʼ ಎಂಬ ನಾಮಫಲಕವನ್ನು ಕಚೇರಿಯಲ್ಲಿ ಅಳವಡಿಸಲಾಗಿತ್ತು.
ನಾರಾಯಣಪ್ಪ ಅವರು ಕೆಲಸ ನಿರ್ವಹಿಸುತ್ತಿದ್ದಾಗ ಕಚೇರಿಯ ವ್ಯವಸ್ಥೆ ಉತ್ತಮ ರೀತಿಯಲ್ಲಿ ನಡೆಯುತ್ತಿತ್ತು. ಯಾವುದೇ ಕೆಲಸಕ್ಕೆ ಕಚೇರಿಯಲ್ಲಿ ಲಂಚದ ವಾಸನೆ ಬರುತ್ತಿರಲಿಲ್ಲ. ನಾರಾಯಣಪ್ಪ ಒಬ್ಬ ನಿಷ್ಠಾವಂತ ಹಾಗೂ ಭ್ರಷ್ಟಮುಕ್ತ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ ಕಾರಣ ಅವರಿಗೆ ಪ್ರಶಸ್ತಿಯೂ ಸಹ ಲಭಿಸಿತ್ತು. ಆದರೆ ಅವರ ಅವಧಿಯಲ್ಲಿ ಕಚೇರಿಗೆ ಅಳವಡಿಸಿದ್ದ ನಾಮಪಲಕಗಳು ಕಾಣುತ್ತಿಲ್ಲ. ಅವರು ವರ್ಗಾವಣೆಯಾದ ಕೂಡಲೇ ಕಚೇರಿಯಲ್ಲಿದ್ದ ನಾಮಫಲಕಗಳು ಎಲ್ಲಿ ಹೋದವು. ಆ ನಾಮಫಲಕಗಳನ್ನು ತೆಗೆದು ಹಾಕಿದವರು ಯಾರು ಎಂಬ ಹತ್ತಾರು ಪ್ರಶ್ನೆಗಳು ಈಗ ಸಾರ್ವಜನಿಕ ವಲಯಗಳಲ್ಲಿ ಸದ್ದು ಮಾಡುತ್ತಿವೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕುರುಬರಿಗೆ ಎಸ್‌ಟಿ ಮೀಸಲಾತಿ ಕಲ್ಪಿಸುವಂತೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಗ್ರಹ
ಕಚೇರಿಯಲ್ಲಿ ಯಾವುದೇ ಕೆಲಸ ಮಾಡಿಸಬೇಕೆಂದರೆ ಲಂಚವಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲವಂತೆ ಎಂಬು ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
ಸಬ್ ರಿಜಿಸ್ಟರ್ ಕಚೇರಿಯಿಂದ ಮಾಯವಾಗಿರುವ ʼಲಂಚ ಸ್ವೀಕರಿಸುವುದಿಲ್ಲʼ ಎಂಬ ನಾಮಫಲಕವನ್ನು ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತೆ ಹಾಕಿಸುತ್ತಾರೋ ಇಲ್ಲವೋ ಎಂಬುದನ್ನು ಕಾದುನೋಡಬೇಕಾಗಿದೆ.