ಜಮೀನಿಗಾಗಿ ಚಿಂತಾಮಣಿ ತಾಲೂಕು ಕಚೇರಿ ಮುಂಭಾಗ ಕಳೆದ ಆರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರಾಯಪಲ್ಲಿ ಗ್ರಾಮದ ಮಾಜಿ ಸೈನಿಕ ಶಿವಾನಂದ ರೆಡ್ಡಿ ಅವರ ಪತ್ನಿ ಕಾಂತಮ್ಮ ಸಹ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದು ನಿನ್ನೆ ಬೆಳಗ್ಗೆ ತಲೆ ಸುತ್ತಿ ಕೆಳಗೆ ಬಿದ್ದಿದ್ದಾರೆ.
ಅಸ್ವಸ್ಥಗೊಂಡ ಅವರನ್ನು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕು ದಂಡಾಧಿಕಾರಿ ಸುದರ್ಶನ್ ಯಾದವ್ ರವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿ ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವಂತೆ ಮನವಿ ಮಾಡಿದ್ದಾರೆ.

ಶಿವಾನಂದರೆಡ್ಡಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಗಡಿ ಭಾಗದಲ್ಲಿ ನಡೆದ ಅಪಘಾತದಲ್ಲಿ ಅಂಗವಿಕಲರಾಗಿದ್ದು, ಕಾಲಿಗೆ ತೀವ್ರ ಪೆಟ್ಟಾಗಿ ಸೇನೆಯಿಂದ ಕಡ್ಡಾಯ ನಿವೃತ್ತಿ ಪಡೆದ ಮಾಜಿ ಯೋಧ. ಕಾಲಿಗೆ ಪೆಟ್ಟಾಗಿ ನಿವೃತ್ತಿಯಾದ ಹಿನ್ನೆಲೆ ಸೇನೆಯು ಜಮೀನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಹಾಗೆ ಸೂಚಿಸಿ ಎರಡೂವರೆ ದಶಕವೇ ಕಳೆದರೂ ಈತನಿಗೆ ಸರ್ಕಾರದಿಂದ ಸಿಗಬೇಕಾದ ಜಮೀನು ಸಿಕ್ಕದೇ ಇರುವುದು ತುಂಬಾ ಬೇಸರದ ಸಂಗತಿಯಾಗಿದೆ.
ಇದನ್ನೂ ಓದಿ: ಚಿಂತಾಮಣಿ | ಅಪ್ರಾಪ್ತರಿಗೆ ವಾಹನ ನೀಡಿದರೆ 25 ಸಾವಿರ ದಂಡ: ಎಸ್ಪಿ ಕುಶಾಲ್ ವಾರ್ನಿಂಗ್