ಬೊಲೇರೊ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಹಲವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಚಿಕ್ಕಬಳ್ಳಾಪುರ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಂಡುಪಾಳ್ಯ ಗೇಟ್ ಬಳಿ ಸಂಭವಿಸಿದೆ.
ಬೊಲೇರೊ ವಾಹನದಲ್ಲಿ ಮದನಪಲ್ಲಿ ಕಡೆಯಿಂದ ಬಂದಿದ್ದ ಆಂಧ್ರಪ್ರದೇಶದ ಕದರಿ ಮೂಲದವರು ವಿಜಯಪುರ ಕಡೆಗೆ ಹೋಗುತ್ತಿದ್ದರು.
ದ್ವಿಚಕ್ರ ವಾಹನದಲ್ಲಿ ಆಯಾಝ್(33) ಹಾಗೂ ತನ್ನ ಹೆಂಡತಿ ತರನ್ನುಂ (22ವರ್ಷ)ಇಬ್ಬರು ಬೇತಮಂಗಲ ಕಡೆ ಹೋಗುತ್ತಿದ್ದು, ಬೊಲೇರೊ ವಾಹನ ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತರನ್ನುಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ದ್ವಿಚಕ್ರ ವಾಹನ ಸವಾರ ಆಯಾಝ್‌ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಬೊಲೇರೊ ವಾಹನದಲ್ಲಿದ್ದ ಕದರಿ ಮೂಲದ ಅದಲ್ಲಪ್ಪ ಬೀದಿಯ ಫಕ್ರುದ್ದೀನ್, ಆಝಾದ್, ಜಬೀನಾ, ಹಮೀದ್, ಶೋಯೆಬ್, ಸಲೀಮಾ, ಶಕೀರಾ, ಶಬ್ನಂ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಗೊತ್ತಾಗಿದೆ.
ಇದನ್ನು ಓದಿದ್ದೀರಾ? ರಾಯಚೂರು | ಆನ್‌ಲೈನ್ ಬೆಟ್ಟಿಂಗ್ ಗೇಮ್‌ನಿಂದ ಯುವಕರು ಬೀದಿಪಾಲು: ನಿಷೇಧಕ್ಕೆ ಆಗ್ರಹಿಸಿ ಮನವಿ
ಗಂಭೀರ ಗಾಯಗೊಂಡಿರುವ ಅಯಾಝ್ ಅವರನ್ನು ಕೋಲಾರದ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ವಿಷಯ ತಿಳಿದ ತಕ್ಷಣ ಕೆಂಚಾರ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
