ಸಿಡಿಲು ಬಡಿದು 106 ಕುರಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದ್ದು, ಈ ವೇಳೆ ಕುರಿಹಟ್ಟಿಯಲ್ಲಿದ್ದ ಆಂಜನೇಯ ಎಂಬ ಕುರಿಗಾಹಿಯ 90 ಹಾಗೂ ಓಬಣ್ಣ ಎಂಬವರ 16 ಕುರಿಗಳು ಸೇರಿದಂತೆ ಒಟ್ಟು 106 ಕುರಿಗಳು ಸಿಡಿಲಿಗೆ ಬಲಿಯಾಗಿವೆ.
ಈ ಘಟನೆಯಿಂದಾಗಿ ಕುರಿಗಾಹಿಗಳಿಗೆ ಅಪಾರ ನಷ್ಟವಾಗಿದೆ. ಜೀವನೋಪಾಯಕ್ಕೆ ದಾರಿಯಾಗಿದ್ದ ಕುರಿಗಳ ಸಾವಿನಿಂದಾಗಿ ಕುರಿಗಾಹಿಗಳು ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದರು.

ಮಳೆ ಇಲ್ಲದೇ ಬರಗಾಲದ ಪರಿಸ್ಥಿತಿಯಲ್ಲಿ ಮಲೆನಾಡು ಸೀಮೆಯ ಕಡೆ ಪಡುವು ಹೋಗಿ ಸಣ್ಣ ಜೀವಗಳನ್ನು ಸಾಕಿಕೊಳ್ಳಲಾಗಿತ್ತು. ಸ್ವಲ್ಪ ಮಳೆಯಾಗಿ ನಮ್ಮ ಭಾಗದಲ್ಲೂ ಹುಲ್ಲು ಹಸಿರಾಗಿದೆ ಎಂದು ಊರಕಡೆ ಬರಲಾಗಿತ್ತು. ಸಿಡಿಲಿಗೆ ಕುರಿಗಳು ಸಾವಿಗೀಡಾಗಿರುವುದು ಕುಟುಂಬಕ್ಕೆ ಆರ್ಥಿಕ ನಷ್ಟವಾಗಿದೆ. ಇನ್ನೇನು ಎರಡು ವಾರ ಶ್ರಾವಣ ಮುಗಿದು ಮಾರಮ್ಮನ ಜಾತ್ರೆ ಆರಂಭವಾದ ಕೂಡಲೇ ಸಾಕಿದ್ದ ಕುರಿಗಳಿಗೆ ಒಳ್ಳೆಯ ಬೇಡಿಕೆ ಇತ್ತು. ಕೈತುಂಬಾ ಹಣ ನೋಡಬೇಕಿದ್ದ ಸಮಯದಲ್ಲಿ ಕುರಿಗಳ ಸಾವು ಸಂಕಷ್ಟ ತಂದಿದೆ ಎಂದು ಅಂಜಿನಪ್ಪ, ಓಬಣ್ಣ ಅಳಲು ತೋಡಿಕೊಂಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಚಳ್ಳಕೆರೆ ತಹಶೀಲ್ದಾರ್ ರೆಹಾನಾ ಪಾಷಾ, ಪೊಲೀಸ್ ಉಪ ಅಧೀಕ್ಷಕ ಟಿ.ಬಿ.ರಾಜಣ್ಣ, ಕುರಿ ಜಿಲ್ಲಾ ಮಂಡಳಿ ಸಹಾಯ ನಿರ್ದೇಶಕ ಡಾ.ತಿಪ್ಪೇಸ್ವಾಮಿ, ಉಪ ನಿರ್ದೇಶಕ ಡಾ.ಕುಮಾರ್, ಸಹಾಯಕ ನಿರ್ದೇಶಕ ಡಾ.ಎಂ.ಎನ್.ರೇವಣ್ಣ, ಡಾ.ಶಿವಪ್ರಕಾಶ್, ಕಂದಾಯ ನಿರೀಕ್ಷಕ ರಾಜೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮೃತಪಟ್ಟ ಎಲ್ಲ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಸರ್ಕಾರ ಜಾರಿ ಮಾಡಿರುವ ಅನುಗ್ರಹ ಯೋಜನೆಯಡಿ ಕುರಿಗಾಯಿಗಳಿಗೆ ದೊರೆಯುವ 5 ಸಾವಿರ ಪರಿಹಾರದ ಹಣವನ್ನು ಪ್ರಾಕೃತಿಕ ವಿಕೋಪದಡಿಯಲ್ಲಿ ಕಂದಾಯ ಇಲಾಖೆಯಿಂದ 4 ಸಾವಿರ ಮತ್ತು ಪಶು ಸಂಗೋಪನಾ ಇಲಾಖೆಯಿಂದ 1 ಸಾವಿರ ಸೇರಿಸಿ, ತಲಾ ಒಂದು ಕುರಿಗೆ 5 ಸಾವಿರದಂತೆ ಪರಿಹಾರ ವಿತರಣೆಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ಇದೇ ವೇಳೆ ಭರವಸೆ ನೀಡಿದ್ದಾರೆ.
