ಕಲುಷಿತ ನೀರು ಸೇವನೆಯಿಂದ 16ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ನಡೆದಿದೆ.
ನಾಗಸಮುದ್ರ ಗ್ರಾಮದಲ್ಲಿ ಬುಧವಾರ ತಡ ರಾತ್ರಿಯಿಂದ ಬಹುತೇಕರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಅಸ್ವಸ್ಥಗೊಂಡಿದ್ದಾರೆ. ಅವರನ್ನು ಕೂಡಲೇ ನಾಗಸಮುದ್ರ, ರಾಂಪುರ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ.
“ಆಸ್ಪತ್ರೆಯಲ್ಲಿ ಕೆಲವರಿಗೆ ಚಿಕಿತ್ಸೆ ನೀಡಿದ್ದು, ಉಳಿದವರನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದಾರೆ. ಅಸ್ವಸ್ಥಗೊಂಡಿರುವವರ ಸಂಖ್ಯೆ ಹೆಚ್ಚಾದ ಕಾರಣ ಹಾಗೂ ಕೆಲವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮೊಳಕಾಲ್ಮೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಗ್ರಾಮದಲ್ಲಿ ಬಹುದಿನಗಳ ಹಿಂದೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಒಡೆದಿದ್ದು, ಚರಂಡಿ, ಗೊಬ್ಬರದ ಗುಂಡಿಗಳ ನೀರು ಸೇರಿಕೊಂಡಿದೆ. ಇದರಿಂದ ಕಲುಷಿತಗೊಂಡ ನೀರನ್ನು ಸೇವಿಸಿದ ಬಹಳಷ್ಟು ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯ ಮುಖಂಡ ಮರಿಸ್ವಾಮಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಅವೈಜ್ಞಾನಿಕ ಕಾಮಗಾರಿಗಳು ಈ ರೀತಿಯ ಘಟನೆಗೆ ಕಾರಣವಾಗುತ್ತವೆ. ಗ್ರಾಮದಲ್ಲಿ 2ನೇ ವಾರ್ಡಿನಲ್ಲಿ ಚರಂಡಿ, ಗೊಬ್ಬರದಗುಂಡಿಗಳ ರಾಶಿಯ ಮಧ್ಯೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್‌ಗಳನ್ನು ಅಳವಡಿಸಿದ್ದು ಈ ಘಟನೆಗೆ ಕಾರಣವಾಗಿದೆ” ಎಂದು ಆರೋಪಿಸಿದರು.
“ಕಳಪೆ ಕಾಮಗಾರಿ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ಹಲವು ಬಾರಿ ಎಚ್ಚರಿಸಿದ್ದರೂ ಎಚ್ಚೆತ್ತುಕೊಂಡಿಲ್ಲ. ಪೈಪ್ ಹಾನಿಯಾಗಿರುವ ಕುರಿತು ಕ್ರಮ ತೆಗೆದುಕೊಳ್ಳದೆ, ಅದೇ ಪೈಪ್ ಲೈನ್‌ನಲ್ಲಿ ನೀರು ಸರಬರಾಜು ಮಾಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷದಿಂದ ಕೊಳಚೆ ನೀರು ಕುಡಿಯುವ ನೀರಿಗೆ ಸೇರಿದ್ದು, ಅನಾಹುತಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಕುಡಿಯುವ ನೀರು ಸರಬರಾಜು ಮಾರ್ಗವನ್ನು ಬೇರೆಡೆಗಡ ಸ್ಥಳಾಂತರಿಸಿ ಗ್ರಾಮಸ್ಥರ ಆರೋಗ್ಯ ಕಾಪಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಕರ್ತವ್ಯ ಲೋಪ; ಮೂವರು ಪಿಡಿಒಗಳ ಅಮಾನತು
ಗ್ರಾಮದ ಪಂಚಾಯತ್ ಸದಸ್ಯ ಆನಂದ್ ಮಾತನಾಡಿ, “ನಾಗಸಮುದ್ರ ಗ್ರಾಮ ದೊಡ್ಡದಿದೆ. ಇದು ಗ್ರಾಮ ಪಂಚಾಯಿತಿಯ ಗಮನಕ್ಕೆ ಬಂದಿರಲಿಲ್ಲ. ಇಷ್ಟು ಸಂಖ್ಯೆಯ ಪ್ರಕರಣ ಕಂಡುಬಂದಿರುವುದರಿಂದ ತಾಲೂಕು ಆರೋಗ್ಯ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿದ್ದಾರೆ. ಎಲ್ಲರೂ ಸೇರಿ ಕಲುಷಿತ ನೀರಿಗೆ ಕಾರಣ ಏನೆಂದು ಗುರುತಿಸಿ ಸರಿಪಡಿಸುವ ಕೆಲಸವನ್ನು ಇಂದೇ ಮಾಡುತ್ತೇವೆ” ಎಂದು ಭರವಸೆ ನೀಡಿದರು.
ಕಲುಷಿತ ನೀರು ಕುಡಿದು ಅಸ್ವಸ್ಥ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ “ತಾಲೂಕು ಆರೋಗ್ಯ ಅಧಿಕಾರಿ ಮತ್ತು ಜಿಲ್ಲಾಡಳಿತದ ಇತರೆ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿದ್ದು, ಎಲ್ಲರ ನೇತೃತ್ವದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಬೇರೆಡೆಗೆ ವರ್ಗಾಯಿಸುವ ಕಾರ್ಯ ನಡೆಯುತ್ತಿದೆ” ಎಂದು ತಿಳಿಸಿದರು.
“ನಾಗಸಮುದ್ರ ಮತ್ತು ರಾಂಪುರ ಆಸ್ಪತ್ರೆಯಲ್ಲಿರುವ ಅಸ್ವಸ್ಥರು ಚೇತರಿಸಿಕೊಂಡಿದ್ದು, ಆರು ಮಂದಿ ಮನೆಗೆ ಹಿಂತಿರುಗಿದ್ದಾರೆ. ಇನ್ನೂ ನಾಲ್ವರು ರಾಂಪುರ ಆಸ್ಪತ್ರೆಯಲ್ಲಿದ್ದು, ಇಬ್ಬರು ಅಸ್ವಸ್ಥರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ದಾಖಲಿಸಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ಶೀಘ್ರ ಗುಣಮುಖರಾಗುವ ವಿಶ್ವಾಸವಿದೆ” ಎಂದರು.