ಚಿತ್ರದುರ್ಗಕ್ಕೆ ಹೋಗಲು ಬಸ್ಸಿಗಾಗಿ ಹೈವೇ ರಸ್ತೆಯಲ್ಲಿ ಕಾದು ನಿಂತ್ತಿದ್ದ ವಿದ್ಯಾರ್ಥಿನಿ ಮೇಲೆ ಲಾರಿಯೊಂದು ಹರಿದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ವಿಜಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.
ಸುಚಿತ್ರಾ ಮೃತ ಪಿಯುಸಿ ವಿದ್ಯಾರ್ಥಿನಿ. ಆದಿ ಎಂಬ ಮತ್ತೊಬ್ಬ ವಿದ್ಯಾರ್ಥಿ ಅಪಘಾತದಲ್ಲಿ ಗಾಯಗೊಂಡಿದ್ದು, ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಚಿತ್ರಾ ಹಿರೇಕಂದವಾಡಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಇಲ್ಲಿನ ಹೈವೇ ರಸ್ತೆ ಬಳಿಯ ಸರ್ವಿಸ್ ರಸ್ತೆಗೆ ಬಸ್ ಗಳು ಬಾರದೆ ಇರುವುದರಿಂದ ಚಿತ್ರದುರ್ಗಕ್ಕೆ ತೆರಳುವ ಎಲ್ಲಾ ವಿದ್ಯಾರ್ಥಿಗಳು ಸೇರಿದಂತೆ ಇತರ ಪ್ರಯಾಣಿಕರು ಹೈವೇ ರಸ್ತೆ ಮೇಲೆಯೇ ನಿಂತು ಬಸ್‌ಗಾಗಿ ಕಾಯುತ್ತಾರೆ.
ಹೀಗೆ ಬಸ್‌ಗಾಗಿ ಕಾಯುತ್ತ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಏಕಾಏಕೀ ಲಾರಿಯೊಂದು ಹರಿದಿದೆ. ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದರಿಂದ ಆಕ್ರೋಶ ಗೊಂಡ ವಿಜಾಪುರ ಗ್ರಾಮಸ್ಥರು ಹೈವೇ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಅಪಘಾತ ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.