ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಣದಾಸೆಗಾಗಿ ಬೇರೆಯವರ ಹೆಸರಿಗೆ ಇ-ಸ್ವತ್ತು ಖಾತೆ ಮಾಡಿರುವ ಆರೋಪ ಕೇಳಿಬಂದಿದೆ.
ಪರಶುರಾಂಪುರ ಗ್ರಾಮ ಪಂಚಾಯಿತಿ ಕಚೇರಿ ಎದುರು ಜಮಾಯಿಸಿದ ಗ್ರಾಮಸ್ಥರು ಪ್ರತಿಭಟಿಸಿ, ಅಧಿಕಾರಿಗಳ ಅನ್ಯಾಯ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಪರಶುರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಈಗಿನ ಅಧಿಕಾರಿಗಳೂ ಕೂಡಾ ಹಣದಾಸೆಗಾಗಿ ಸಾಮಾನ್ಯ ಜನರಿಗೆ ನೋಟಿಸ್ ನೀಡದೆ ನಮ್ಮ ಖಾತೆಗಳನ್ನು ಬೇರೆಯವರ ಹೆಸರಿಗೆ ಅಕ್ರಮವಾಗಿ ಇ-ಸತ್ತು ಖಾತೆ ಮಾಡಿ ಸದರಿ ಖಾತೆದಾರರಿಗೆ ಅನ್ಯಾಯ ಮಾಡಿದ್ದಾರೆ” ಎಂದು ಗ್ರಾಮಸ್ಥರು ಆರೋಪಿಸಿದರು.
“ಇಷ್ಟೇ ಅಲ್ಲದೆ ಇನ್ನೂ ಅನೇಕ ಹಗರಣಗಳಲ್ಲಿ ಭಾಗಿಯಾಗಿರುವ ಶಂಕೆಯಿದೆ. ಹಣ ಕೊಟ್ಟರೆ ಯಾವುದೇ ಅಕ್ರಮ ಕೆಲಸವನ್ನಾದರೂ ಮಾಡುತ್ತಾರೆಂಬ ಆರೋಪವಿದೆ. ಇದರಿಂದಾಗಿ ಬಡ, ಅನಕ್ಷರಸ್ಥ, ಅಮಾಯಕ ಜನರಿಗೆ ಅನ್ಯಾಯವಾಗುತ್ತಿದೆ. ನಾವು ಮಕ್ಕಳು, ವೃದ್ಧರೊಂದಿಗೆ ಇರಲು ಜಾಗವಿಲ್ಲದೆ, ಮನೆಯಿಲ್ಲದೆ ಅಲೆದಾಡುವ ಸ್ಥಿತಿ ಎದುರಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಏಮ್ಸ್ ಸ್ಥಾಪನೆ ಹೋರಾಟಕ್ಕೆ ಸಾವಿರ ದಿನ – ಅನ್ಯಾಯ ಸಹಿಸಲ್ಲ, ಕೇಂದ್ರ ವಿರುದ್ಧ ಹೋರಾಟ: ಬೋಸರಾಜು
“ಈ ಕುರಿತು ಸಂಬಂಧಪಟ್ಟ ತಹಶೀಲ್ದಾರ್, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಸೇರಿದಂತೆ ಜಿಲ್ಲೆಯ ಮೇಲಧಿಕಾರಿಗಳು ಈ ಅನ್ಯಾಯ ಸರಿಪಡಿಸಿ ನ್ಯಾಯ ಒದಗಿಸಬೇಕು. ಪಂಚಾಯಿತಿಯಲ್ಲಿ ನಡೆಯುವ ಹಗರಣಗಳನ್ನು ತಡೆಯಬೇಕು” ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಸಂತ್ರಸ್ತ ಮಹಿಳೆಯರು, ಅನ್ಯಾಯಕ್ಕೊಳಗಾದ ಖಾತೆದಾರರು ಸೇರಿದಂತೆ ಗ್ರಾಮಸ್ಥರು ಇದ್ದರು.