ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೃಷಿ ಮಾರುಕಟ್ಟೆಯ ತಡೆಗೋಡೆ ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಚಳ್ಳಕೆರೆ ತಾಲೂಕಿನ ಚಳ್ಳಕೆರೆ ನಗರ ಸೇರಿದಂತೆ ತಾಲೂಕಿನ ಹಲವು ಹಳ್ಳಿಗಳು ಮತ್ತು ತಾಲೂಕಿನಾದ್ಯಂತ ಗುರುವಾರ ಸಂಜೆಯಿಂದ ಸುರಿದ ಭಾರಿ ಮಳೆಗೆ ಕೆಲವೆಡೆ ಅವಘಡ ಸೃಷ್ಟಿಯಾಗಿದ್ದು, ಮನೆಯವರಿಗೆ ಮತ್ತು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ.
ನಗರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ತಡೆಗೋಡೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಗರದ ರಹೀಂ ನಗರ, ಅಭಿಷೇಕ್ ನಗರ, ಎಸ್ ಆರ್ ರಸ್ತೆ, ನಾಯಕನಹಟ್ಟಿ ರಸ್ತೆಯ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜನರು ನೀರನ್ನು ಹೊರಗೆ ಹಾಕಲು ಹರಸಾಹಸ ಪಡಬೇಕಾಯಿತು. ಕೆಲವು ಮನೆಗಳಲ್ಲಿ ಆಹಾರ, ಬೇಳೆ ಕಾಳು, ದವಸ ಧಾನ್ಯಗಳು ನೀರಿನಲ್ಲಿ ತೋಯ್ದು ಹೋಗಿದೆ.

ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಬಹುತೇಕ ಬಿರುಸಿನ ಮಳೆಯಾಗುತ್ತಿದ್ದು ಚಳ್ಳಕೆರೆ ತಾಲೂಕಿನಲ್ಲಿ ಕೂಡ ಮಳೆಯ ಆರ್ಭಟ ಜೋರಾಗಿದೆ. ಇತ್ತೀಚಿಗೆ ಸುರಿಯುತ್ತಿರುವ ಮಳೆಯಿಂದಾಗಿ ಭರ್ತಿಯಾಗಿದ್ದು, ಕೆಲವು ಕೆರೆಗಳು ಕೋಡಿಬಿದ್ದಿವೆ. ರೈತರ ಬೆಳೆ ನಾಶವಾದ ಸುದ್ದಿಗಳು ಕೂಡ ವರದಿಯಾಗಿವೆ.
ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ರೈತರು ಬೆಳೆದ ಉತ್ಪನ್ನಗಳನ್ನು ತಂದು ಮಾರಾಟ ಮಾಡುವ ಚಳ್ಳಕೆರೆ ನಗರಕ್ಕೆ ಹೊಂದಿಕೊಂಡಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಸುಮಾರು 30 ಅಡಿಯಷ್ಟು ಉದ್ದದ ತಡೆಗೋಡೆ ಮಳೆ ಹೊಡೆತಕ್ಕೆ ಕುಸಿದು ಬಿದ್ದಿದ್ದು ರಾತ್ರಿಯಾದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
“ಈ ತಡೆಗೋಡೆ ನಾಲ್ಕೈದು ವರ್ಷದ ಹಿಂದೆ ನಿರ್ಮಿಸಿದ ತಡೆಗೋಡೆಯಾಗಿದ್ದು, ಪಕ್ಕದಲ್ಲಿ ಅದಕ್ಕೆ ಹೊಂದಿಕೊಂಡಂತೆ ಚರಂಡಿ ವ್ಯವಸ್ಥೆ ಇದೆ. ನಗರದ ಬೇರೆ ಪ್ರದೇಶಗಳಿಂದ ಬರುವ ನೀರು ಇದೇ ಚರಂಡಿಯಲ್ಲಿ ಹೋಗಬೇಕಾಗಿದ್ದು ಚರಂಡಿಯನ್ನು ವೈಜ್ಞಾನಿಕವಾಗಿ ಕಟ್ಟದೇ, ಬಿಲ್ ಮಾಡಿಸಿಕೊಳ್ಳುವ ಸಲುವಾಗಿ ಹಳೆಯ ಚರಂಡಿಗೆ ತೇಪೆ ಹಾಕಿ ಕಾಮಗಾರಿ ಮಾಡಿದ್ದಾರೆ” ಎಂದು ಕೆ.ಎಂ.ಸಿ.ಎಸ್ ಮಾಲೀಕರು ಮತ್ತು ವ್ಯಾಪಾರಸ್ಥರಾದ ರಘು ತಿಳಿಸಿದ್ದಾರೆ.
“ನೀರಿನ ಹರಿವಿಗೆ ತಕ್ಕದಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೀರು ಹೆಚ್ಚಾದಾಗ ತಡೆಗೋಡೆಗೆ ಹೊಡೆದು ಕೊರಕಲು ಬಿದ್ದಿತ್ತು. ಮಳೆ ಚೆನ್ನಾಗಿ ಬಂದಾಗ ಭರ್ತಿಯಾಗಿ ಕಾಂಪೌಂಡ್ ತಡೆಗೋಡೆಗೆ ಹೊಂದಿಕೊಂಡು ಹರಿಯುವುದು ಸಾಮಾನ್ಯವಾಗಿತ್ತು. ಅದರಿಂದಾಗಿ ಹಲವೆಡೆ ಶಿಥಿಲಗೊಂಡಿತ್ತು. ನಿನ್ನೆ ಸುರಿದ ಭಾರಿ ಮಳೆಗೆ ನೀರು ನುಗ್ಗಿ ಮತ್ತು ಶಿಥಿಲಗೊಂಡಿರುವ ತಡೆಗೋಡೆ ಬಿದ್ದು ಹೋಗಿದೆ” ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ಅದೃಷ್ಟ ಒಲಿದರೆ 50% ತೆರಿಗೆ: ಇದು ನಿರ್ಮಲಕ್ಕನ ತೆರಿಗೆ ಭಯೋತ್ಪಾದನೆ!
ಅಲ್ಲದೆ, ರಾತ್ರಿ ಸುರಿದಂತಹ ಭಾರಿ ಮಳೆಗೆ ಕಾಂಪೌಂಡ್ ಕುಸಿತ ಪರಿಣಾಮವಾಗಿ ಮೂರು ನಾಲ್ಕು ಕೃಷಿ ಮಾರುಕಟ್ಟೆ ಅಂಗಡಿಗಳ ಒಳಗೆ ನೀರು ನುಗ್ಗಿ ಶೇಂಗಾ ದಾಸ್ತಾನಿಗೆ ಹಾನಿಯಾಗಿದೆ. ಅದರಲ್ಲೂ ಒಂದು ಅಂಗಡಿಯಲ್ಲಿ ಒಣಗಿಸಲು ಹಾಕಿದ್ದ ಶೇಂಗಾ ರಾಶಿಗೆ ನೀರು ನುಗ್ಗಿದ್ದು, ಶೇಂಗಾ ಕೊಚ್ಚಿಕೊಂಡು ಹೋಗಿದೆ. ಇದರಿಂದ ರೈತರಿಂದ ಖರೀದಿ ಮಾಡಿದ ಶೇಂಗಾ ನೀರುಪಾಲಾಗಿದ್ದು, ಅಂಗಡಿ ಮಾಲೀಕರಿಗೆ ಬಹಳ ನಷ್ಟವಾಗಿದೆ.
ಸಂಬಂಧಪಟ್ಟ ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಪರಿಹಾರ ಒದಗಿಸಿಕೊಡಬೇಕು ಎಂದು ರಘು ಮತ್ತು ಇತರ ಅಂಗಡಿ ಮಾಲೀಕರು ಒತ್ತಾಯಿಸಿದ್ದಾರೆ.
