ಮೊಳಕಾಲ್ಮೂರು ಪಟ್ಟಣ ಪಂಚಾಯತಿಯಲ್ಲಿ ಸುಮಾರು 9 ಕೋಟಿ ರೂ. ಅಧಿಕ ಹಣ ಅವ್ಯವಹಾರ ನಡೆದಿರುವ ಅನುಮಾನವಿದೆ. ಇದರ ಲೋಕಾಯುಕ್ತ ತನಿಖೆನಡೆಸಿಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, “ಪಟ್ಟಣ ಪಂಚಾಯಿತಿಯಲ್ಲಿ ಮೋಟಾರ್ ಕೇಬಲ್ ಪಂಪ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚು ಮೊತ್ತದ ನಕಲಿ ಬಿಲ್ ಸೃಷ್ಠಿಸಿ ಕೋಟ್ಯಂತರ ರೂಪಾಯಿ ಹಗಲು ದರೋಡೆ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.
“ಈ ಹಗರಣ ಬೆಳಕಿಗೆ ಬಂದು ತನಿಖೆಗೆ ಅಧಿಕಾರಿಗಳು ಮುಂದಾದಾಗ, ರಾತ್ರೋರಾತ್ರಿ ಮೋಟಾರ್ ಬಿಡಿ ಭಾಗಗಳನ್ನು ತಂದು ಪಂಚಾಯಿತಿ ಗೋಡೌನ್‌ನಲ್ಲಿ ಇಟ್ಟಿದ್ದಾರೆ” ಎಂದು ಆರೋಪ ಮಾಡಿದ್ದಾರೆ.
“ಪಟ್ಟಣ ಪಂಚಾಯತಿಯಲ್ಲಿ ಅಧಿಕಾರಿಗಳ ಜೊತೆ ಪಂಚಾಯತಿಯ ಅಧ್ಯಕ್ಷರೂ ಶಾಮೀಲಾಗಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ. ಪಟ್ಟಣದ ಹಿತ ಕಾಪಾಡಬೇಕಾದವರೇ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಹಣ ದೋಚಿದ್ದಾರೆ” ಎಂದು ದೂರಿದ್ದಾರೆ.
“ಪಟ್ಟಣ ಪಂಚಾಯಿತಿಯಲ್ಲಿ ಖಾತೆ, ಇ-ಸತ್ತು, ಜನನ ಮರಣ ಕೊಡಲು ಸರ್ಕಾರ ನಿಗದಿಪಡಿಸಿದ ಹಣ ಎಷ್ಟು ಎಂದು ಸಾರ್ವಜನಿಕರ ಸೂಚನಾ ಫಲಕದಲ್ಲಿ ಅಳವಡಿಸಿರುವುದಿಲ್ಲ. ಈ ವ್ಯವಹಾರದಲ್ಲಿ 15 ರಿಂದ 20 ಸಾವಿರ ಹಣವನ್ನು ಕೇಳುತ್ತಾರೆ. ಪಟ್ಟಣ ಪಂಚಾಯತಿಯಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ” ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ಕಿಡಿಕಾರಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕೊಂಡಾಪುರದ ಪರಮೇಶಪ್ಪ, “ಪಟ್ಟಣ ಪಂಚಾಯತಿಯಲ್ಲಿ ನಡೆದಿರುವ ಎಲ್ಲ ಹಗರಣಗಳನ್ನು ಚಾಚು ತಪ್ಪದೇ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವು ಉಗ್ರ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ರವಿಕುಮಾರ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕೊಂಡಾಪುರದ ಪರಮೇಶಪ್ಪ, ರಮೇಶ್ ಶ್ರೀನಿವಾಸ್, ಉಮೇಶ್, ಮಹೇಂದ್ರ, ಹೆಚ್ಚೇನಳ್ಳಿ ನಾಗರಾಜ್, ರೈತ ಸಂಘದ ಮುಖಂಡರಾದ ಚಂದ್ರಣ್ಣ, ಮಂಜುನಾಥ, ಭೀಮಣ್ಣ, ಬಸವರಾಜ್ ಇನ್ನು ಹಲವರು ಇದ್ದರು.