ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ದಿನೇದಿನೆ ಕರಡಿಗಳ ಉಪಟಳ ಹೆಚ್ಚಾಗಿದ್ದು, ಹಾಡ ಹಗಲೇ ಪಟ್ಟಣ, ಗ್ರಾಮ, ಮಠಗಳ ಬಳಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿವೆ.
ಜಮೀನಿಗೆ ತೆರಳಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ್ದು, ಮುಖ, ಕಣ್ಣು, ಕಿವಿ, ಎದೆ ಭಾಗಕ್ಕೆ ಪರಚಿ ಗಂಭೀರ ಗಾಯಗೊಳಿಸಿದೆ. ಯಾಲಕ್ಕಪ್ಪನಹಟ್ಟಿ ಸಮೀಪದ ಸಿದ್ದಪ್ಪನಬೆಟ್ಟದ ಬಳಿಯಿರುವ ಜಮೀನಿಗೆ ತೆರಳಿದ್ದ ವೇಳೆ ಕರಡಿ ಏಕಾಏಕಿ ದಾಳಿ ಮಾಡಿದೆ.
ಹೆರೂರು ಮೂಲದ ದಿನೇಶ್ ಎಂಬುವವರ ಮೇಲೆ ಹೊಸದುರ್ಗ ಪಟ್ಟಣಕ್ಕೆ ಸಮೀಪದ ಯಾಲಕ್ಕಪ್ಪನಹಟ್ಟಿ ಬಳಿ ಕರಡಿ ದಾಳಿ ನಡೆಸಿ ಗಾಯಗೊಳಿಸಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ದಿನೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದಾರೆ.
ಹೊಸದುರ್ಗ ತಾಲೂಕಿನ ಬಹುತೇಕ ಭಾಗ ಗುಡ್ಡ ಬೆಟ್ಟ ಪ್ರದೇಶಗಳಿದ್ದರೂ ಗ್ರಾಮೀಣ ಭಾಗದಲ್ಲಿ ಆಗಾಗ ಕರಡಿಗಳು ಕಾಣಿಸಿಕೊಳ್ಳುವುದು, ರೈತರಿಗೆ ತೊಂದರೆ ಮಾಡುವುದು ನಡೆಯುತ್ತಲೇ ಇದೆ.
“ಈ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಅನೇಕ ಬಾರಿ ದೂರು ನೀಡಿ, ಕರಡಿಗಳು ಬಂದಾಗ ಮಾಹಿತಿ ನೀಡಿದರೂ ಕೂಡಾ ಅರಣ್ಯ ಇಲಾಖೆ ಕರಡಿಯನ್ನು ಹಿಡಿದು ದೂರ ಸಾಗಿಸದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಲೇ ದಿನೇಶ್ ಎಂಬುವವರ ಮೇಲೆ ಕರಡಿಯಿಂದ ದಾಳಿಯಾಗಿದೆ” ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸೇತುವೆ ಹಾಗೂ ಕಾಲುವೆ ಕಾಮಗಾರಿ ಪ್ರಾರಂಭಕ್ಕೆ ಆಗ್ರಹ; ಅಧಿಕಾರಿಗಳ ಲಿಖಿತ ಭರವಸೆ
“ಹೊಸದುರ್ಗ ಪಟ್ಟಣದಲ್ಲಿರುವ ಕುಂಚಿಟಿಗ ಮಹಾಸಂಸ್ಥಾನ ಮಠದ ಆವರಣದಲ್ಲಿ ವಾರಕ್ಕೊಮ್ಮೆಯಾದರೂ ಕರಡಿ ಕಾಣಿಸಿಕೊಳ್ಳುತ್ತಿವೆ. ಇಲ್ಲಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರ ಮಾಡುವ ನಾಗರೀಕರು, ಮಠದ ಶಾಂತವೀರ ಸ್ವಾಮೀಜಿ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸುರಕ್ಷತೆ ಕ್ರಮ ಕೈಗೊಳ್ಳಬೇಕು” ಎನ್ನುತ್ತಾರೆ ಮಠದ ಸಿಬ್ಬಂದಿ ಮತ್ತು ಸ್ಥಳೀಯರು.
