ಸರಿಯಾಗಿ ರಸ್ತೆ ನಿರ್ಮಾಣ ಮಾಡದೆ ಅರೆಬರೆ ಕಾಮಗಾರಿ ಹಂತದಲ್ಲೇ ರಾಷ್ಟ್ರೀಯ ಹೆದ್ದಾರಿ 153ಎ ರಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಟೋಲ್ ಬಳಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ, ಚಳ್ಳಕೆರೆ ಬಳಿ ಟೋಲ್ ಪ್ಲಾಜಾ ನಿರ್ಮಾಣ ಮಾಡಿ ಸಾರ್ವಜನಿಕ ವಾಹನಗಳಿಂದ ಕೂಡಲೇ ಹಣ ವಸೂಲು ಮಾಡುವುದನ್ನು ನಿಲ್ಲಿಸಿ, ರಸ್ತೆ ನಿರ್ಮಾಣ ಸಂಪೂರ್ಣಗೊಳಿಸಿ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಂತೆ ರೈತ ಸಂಘ ಒತ್ತಾಯಿಸಿತು.
ರೈತ ಸಂಘದ ಮುಖಂಡ ಬಸವ ರೆಡ್ಡಿ ಮಾತನಾಡಿ, “ರಸ್ತೆ ನಿರ್ಮಾಣ ಮಾಡುವಾಗ ಮೂಲ ಸೌಕರ್ಯ ಕಲ್ಪಿಸಿ ಉತ್ತಮ ರಸ್ತೆ ನಿರ್ಮಾಣ ಮಾಡಿ, ವಾಹನಗಳಿಂದ ಟೋಲ್ ಸಂಗ್ರಹ ಮಾಡಬೇಕು. ಆದರೆ ಪ್ರಾಧಿಕಾರವು ಸರಿಯಾಗಿ ರಸ್ತೆ ನಿರ್ಮಿಸದೆ, ಕಾಮಗಾರಿ ಅರ್ಧದಲ್ಲಿರುವಾಗಲೇ ಟೋಲ್ ಹೆಸರಿನಲ್ಲಿ ಹಣ ವಸೂಲಿ ಮಾಡಿ ದೌರ್ಜನ್ಯ ಎಸಗುತ್ತಿದೆ. ಹರ್ತಿಕೋಟೆ ಯರಬಳ್ಳಿ ಬಳಿ ಬೈಪಾಸ್ ನಿರ್ಮಾಣವಾಗಿಲ್ಲ. ಅಲ್ಲಲ್ಲಿ ತಗ್ಗು ಗುಂಡಿಗಳಿವೆ. ನಿರ್ಮಾಣ ಮಾಡಿರುವ ಕಡೆಗಳಲ್ಲಿ ಕೆಲವೇ ದಿನಗಳಲ್ಲಿ ರಸ್ತೆ ಹಾಳಾಗಿ ಹೋಗಿದೆ” ಎಂದು ಆರೋಪಿಸಿದರು.

ರೈತ ಸಂಘದ ಮುಖಂಡ ಮೊಳಕಾಲ್ಮೂರು ಮರ್ಲಹಳ್ಳಿ ರವಿಕುಮಾರ್ ಮಾತನಾಡಿ, “ರಸ್ತೆ ಅಕ್ಕ ಪಕ್ಕ ಮತ್ತು ಅಂಡರ್ ಪಾಸ್‌ಗಳಿಂದ ಹಳ್ಳಿಗಳಿಗೆ ತೆರಳಲು ಸಮರ್ಪಕ ಸಂಪರ್ಕ ಕಲ್ಪಿಸಲಾಗಿಲ್ಲ. ಟೋಲ್‌ಗಳಲ್ಲಿ ಏಳು ಗೇಟ್‌ಗಳಿದ್ದರೂ ಕೇವಲ ಎರಡನ್ನು ತೆರೆದಿಟ್ಟು ವಾಹನಗಳು ಸಾಲುಗಟ್ಟಿ ನಿಂತು ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡಲಾಗುತ್ತಿದೆ. ರಸ್ತೆ ನಿರ್ಮಾಣದಲ್ಲಿ ಲೋಪಗಳಿದ್ದರೂ ಅಕ್ಕಪಕ್ಕದ ಹಳ್ಳಿಗಳಿಗೆ ಕಾನೂನಿನ ಅನ್ವಯ ಸೌಲಭ್ಯ ಕಲ್ಪಿಸದೆ ಟೋಲ್ ಸಂಗ್ರಹಿಸುತ್ತಿರುವುದು ಅವೈಜ್ಞಾನಿಕ ಮತ್ತು ಕಾನೂನು ಉಲ್ಲಂಘನೆಯಾಗಿದೆ. ಈ ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕರು ಮತ್ತು ಮುಖ್ಯ ಅಭಿಯಂತರರು ಟೋಲ್ ಸಂಗ್ರಹ ನಿಲ್ಲಿಸಿ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?: ಚಿತ್ರದುರ್ಗ | ಜ.29ರಿಂದ ಅಟಲ್ ಭೂಜಲ ಯೋಜನೆಯಡಿ ರೈತರಿಗೆ ತರಬೇತಿ ಕಾರ್ಯಕ್ರಮ
ಪ್ರತಿಭಟನೆ ವೇಳೆ ರೈತ ಮುಖಂಡ ಡಿಎಸ್ ಹಳ್ಳಿ ಮಲ್ಲಿಕಾರ್ಜುನ್, ಚಿಕ್ಕಬ್ಬಿಗೆರೆ ನಾಗರಾಜ್, ನಿಜಲಿಂಗಪ್ಪ ಆರ್ ಬಿ, ಹೊನ್ನು ಶ್ರೀನಿವಾಸ್, ಮಲ್ಲಸಮುದ್ರ ಗಂಗಾಧರ್, ಪ್ರಶಾಂತ್ ರೆಡ್ಡಿ, ಚಂದ್ರಶೇಖರ ನಾಯಕ, ಹಿರೇಹಳ್ಳಿ ಮಂಜಣ್ಣ, ತಿಪ್ಪೇಸ್ವಾಮಿ, ಸೂರಮನಹಳ್ಳಿ ರಾಜಣ್ಣ, ಮುದ್ದಾಪುರ ನಾಗಣ್ಣ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
