ಕಾರ್ಯಕರ್ತರ ಅಳಲು ಸಮಸ್ಯೆಗಳನ್ನು ಹೇಳಲು ಬಿಡದೆ ನಾಯಕರು ತಡೆದಿದ್ದರಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎದುರೇ ಕೈ ಕಾರ್ಯಕರ್ತರು ತಳ್ಳಾಟ ವಾಗ್ಯುದ್ಧ ಚಿತ್ರದುರ್ಗದಲ್ಲಿ ನೆಡೆದಿದೆ.
ವಿವಿಧ ಕಾರ್ಯಕ್ರಮಗಳಿಗಾಗಿ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಅದ್ದೂರಿಯಾಗಿ ಸ್ವಾಗತ ಕೋರಿ ಬರಮಾಡಿಕೊಂಡು ಸಭೆಯನ್ನು ಏರ್ಪಡಿಸಿದ್ದರು. ಸಭೆಯಲ್ಲಿ ಕಾರ್ಯಕರ್ತರ ಅಹವಾಲು ಸಚಿವರ ಮುಂದೆ ಹೇಳಲು ಬಿಡದ ಕಾರಣ ನೂಕಾಟ ವಾಗ್ವಾದ ನಡೆದಿದೆ.
ಸಚಿವೆ ಇದ್ದ ವೇದಿಕೆಯಲ್ಲಿ ಚಿತ್ರದುರ್ಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀಕಾಂತ್ ಮಾತನಾಡುತ್ತಾ, ರಾಜ್ಯದಲ್ಲಿ ಕಾರ್ಯಕರ್ತರ ಶ್ರಮದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಅಧಿಕಾರಕ್ಕೆ ಬಂದ ನಂತರ ಕಾರ್ಯಕರ್ತರದು ನಾಯಿ ಪಾಡಾಗಿದೆ. ನಮ್ಮ ಸಮಸ್ಯೆಗಳನ್ನು ಕೇಳುವವರು ಯಾರು ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆ, ವೇದಿಕೆ ಮೇಲಿದ್ದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ, ಮಾತನಾಡಲು ಬಿಡದೆ ಮೈಕ್ ಕಿತ್ತುಕೊಳ್ಳಲು ಪ್ರಯತ್ನಿಸಿದರು. ಈ ವೇಳೆ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಈ ವೇಳೆ ಕಾರ್ಯಕರ್ತರ ಬೆಂಬಲಿಗರ ಮಧ್ಯೆ ನೂಕಾಟ ವಾಗ್ವಾದ ನಡೆದು ಮಧ್ಯೆ ಪ್ರವೇಶಿಸಿದ ಇತರ ಮುಖಂಡರು ಸಚಿವರು ವಾತಾವರಣ ತಿಳಿಗೊಳಿಸಿದರು.
ನಂತರ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, “ಜಿಲ್ಲೆಗೆ ಆಗಮಿಸಿದಾಗ ನೀವು ನನಗೆ ನೀಡಿದ ಅದ್ದೂರಿಯ ಸ್ವಾಗತವನ್ನು ನೋಡಿ ನಾನು ಮೂಕವಿಸ್ಮಿತಳಾಗಿದ್ದೇನೆ. ಆದರೆ ಸಭೆಯಲ್ಲಿ ನಡೆದ ಈ ಒಂದು ಸಣ್ಣ ಘಟನೆ ಹೊರಗೆ ತಪ್ಪು ಸಂದೇಶ ನೀಡಲಿದೆ. ಬೇರೆ ಎಲ್ಲವೂ ಮರೆತು ಹೋಗಿ ಇದೊಂದು ಸಣ್ಣ ಗಲಾಟೆಯ ಘಟನೆಯೇ ಮಾಧ್ಯಮಗಳಲ್ಲಿ ರಾರಾಜಿಸುತ್ತದೆ. ನಿಮ್ಮ ಅಹವಾಲುಗಳು ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳೋಣ. ನಿಮ್ಮ ಸಮಸ್ಯೆಗಳನ್ನು ಪಕ್ಷದ ಅಧ್ಯಕ್ಷರ ಗಮನಕ್ಕೆ ತರುತ್ತೇನೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಧಾರವಾಡ-ಹುಬ್ಬಳ್ಳಿ | ಚೌತಿ, ಮೀಲಾದುನ್ನಬಿ: ರೌಡಿಶೀಟರ್‌ಗಳ ಪರೇಡ್ ನಡೆಸಿದ ಕಮಿಷನರ್ ಶಶಿಕುಮಾರ್
ಸಭೆಯಲ್ಲಿ ಜಿಲ್ಲಾಧ್ಯಕ್ಷ ತಾಜ್ ಪೀರ್, ಕಾರ್ಯಧ್ಯಕ್ಷ ಹಾಲಸ್ವಾಮಿ, ಮುರಳಿಧರ್ ಹಾಲಪ್ಪ, ಟಿ ರಘು, ಮೋಕ್ಷ ರಾಣಿ, ಮೆಹಬೂಬ್ ಖಾನ್ ಇತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
